Advertisement

ನೀರಾವರಿ ಯೋಜನೆಗಳಿಗೆ ಆದ್ಯತೆ

04:57 PM Jan 02, 2020 | Naveen |

ಮಸ್ಕಿ: ಮಸ್ಕಿ ಶಾಸಕನಾಗಿ ಆಡಳಿತ ನಡೆಸಿದ ಎರಡು ಅವಧಿಯಲ್ಲಿ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ನೀರಾವರಿ ಕ್ಷೇತ್ರ ವ್ಯಾಪ್ತಿ ವಿಸ್ತರಿಸಲು ಶ್ರಮಿಸುವುದಾಗಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

Advertisement

ತಾಲೂಕಿನ ಚಿಲ್ಕರಾಗಿ ಗ್ರಾಮದಲ್ಲಿ ಇತ್ತೀಚೆಗೆ ಬಸವಲಿಂಗೇಶ್ವರ ಜಾತ್ರೆ ನಿಮಿತ್ತ ನಡೆದ ಶಿವಾನುಭವಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಸ್ಕಿ ಕ್ಷೇತ್ರ ರಚನೆಯಾದಾಗಿನಿಂದಲೂ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಸತತ ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಕಳೆದ ಎರಡು ಅವಧಿಯಲ್ಲಿ ನಂದವಾಡಗಿ ನೀರಾವರಿ ಯೋಜನೆ, ಕೃಷ್ಣ ಬಿ ಸ್ಕೀಮ್‌ನಡಿ ಕ್ಷೇತ್ರಕ್ಕೆ ನೀರು ಹರಿಸುವುದು ಸೇರಿ ಹಲವು ರೈತ ಪರ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಹನಿ ನೀರಾವರಿ, ಗಂಗಾಕಲ್ಯಾಣ ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನ ಮಾಡಲಾಗಿದೆ. ಹನಿ ನೀರಾವರಿಗಾಗಿ ಇನ್ನೂ 10 ಸಾವಿರ ಕೋಟಿ ರೂ. ಅನುದಾನವನ್ನು ಕ್ಷೇತ್ರಕ್ಕೆ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ. ಆದರೆ ಸದ್ಯದ ರಾಜಕೀಯ ಬೆಳವಣಿಗೆ ಹಾಗೂ ಅನಿವಾರ್ಯ ಕಾರಣಗಳಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರಕಾರ ರಚನೆಗೆ ಕಾರಣವಾಗಿದ್ದೇನೆ. ಮುಂಬರುವ ಉಪ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಆಶೀರ್ವದಿಸಿದರೆ ನೀರಾವರಿ ಯೋಜನೆಗಳು ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ಅನುದಾನ ತರಲಾಗುವುದು ಎಂದರು.

ಈ ಭಾಗದಲ್ಲಿ 5ಎ ಕಾಲುವೆ ಯೋಜನೆ ಜಾರಿ ಮಾಡಬೇಕು ಎನ್ನುವ ಕೂಗು ಬಲವಾಗಿದೆ. ಇದಕ್ಕಾಗಿ ರೈತ ಚಳವಳಿಗಳು ಕೂಡ ನಡೆದಿವೆ. ಹೋರಾಟ ನಿರತ ರೈತರ ಜತೆ ನಾನಿದ್ದೇನೆ. ಆದರೆ ಕೆಲವರಿಂದ ಸುಳ್ಳು ಸುದ್ದಿ ಹಬ್ಬಿಸುವ ಮತ್ತು ನನ್ನ ವಿರುದ್ಧ ಅಪಪ್ರಚಾರ ಮಾಡುವ ಕೆಲಸ ನಡೆದಿದೆ. ಇಂತಹ ಸುದ್ದಿಗಳಿಗೆ ಜನರು ಕಿವಿಗೊಡಬಾರದು ಎಂದರು.

ಸಾನ್ನಿಧ್ಯ ವಹಿಸಿದ್ದ ಉಟಕನೂರು ಶ್ರೀ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಚಿಲ್ಕರಾಗಿ ಪುಟ್ಟ ಗ್ರಾಮವಾದರೂ ಒಗ್ಗಟ್ಟಿದೆ. ಶರಣ ತತ್ವ ಪ್ರಚಾರ ಸಂಗೀತ, ಸಾಹಿತ್ಯ, ನಾಟಕ, ಪತ್ರಿಕೋದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಇಲ್ಲಿನವರು ಚಾಪು ಮೂಡಿಸಿದ್ದಾರೆ ಎಂದರು.

ಪುಸ್ತಕ ಬಿಡುಗಡೆ: ಇದೇ ವೇಳೆ ಬಸಣ್ಣ ಕುಂಬಾರ ರಚಿಸಿದ ಭವ ಗೆದ್ದ ಅವತಾರ ಪುಸ್ತಕ ಬಿಡುಗಡೆ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next