Advertisement

ಉಪಚುನಾವಣೆ ಹೊತ್ತಲ್ಲೇ ಮಸ್ಕಿಗೆ ಮತ್ತೂಂದು ಬಂಪರ್‌!

04:33 PM Feb 08, 2021 | Team Udayavani |

ಮಸ್ಕಿ: ಉಪಚುನಾವಣೆ ಘೋಷಣೆಗೆ ಕೌಂಟ್‌ಡೌನ್‌ ಶುರುವಾದೆಂತಲ್ಲ ಅನುದಾನದ ಹೊಳೆಯೇ ಹರಿದು ಬರುತ್ತಿದೆ!. ಇತ್ತೀಚೆಗಷ್ಟೇ ಜಾತಿವಾರು ಮತಗಳಿಕೆಗೆ
2.50 ಕೋಟಿ ರೂ. ನೀಡಿದ್ದ ಬಿಜೆಪಿ ಸರಕಾರ ಈಗ ಬರೋಬ್ಬರಿ 82.33 ಕೋಟಿ ರೂ. ಹಂಚಿಕೆ ಮಾಡಿ ಆದೇಶಿಸಿದೆ.

Advertisement

ಕಳೆದ ಎರಡ್ಮೂರು ವರ್ಷಗಳ ಹಿಂದೆಯೇ ಡಿಪಿಆರ್‌ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದ ಯೋಜನೆಗೆ ಈಗ ಅಸ್ತು ಎನ್ನಲಾಗಿದೆ. ಸ್ವತಃ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಹಲವು ಬಾರಿ ಮನವಿ ಸಲ್ಲಿಕೆ, ಕಚೇರಿ-ಕಚೇರಿ ತಿರುಗಾಡಿ ಒತ್ತಡ ಹಾಕಿದಾಗಲೂ ಬಿಡುಗಡೆಯಾಗದೇ ಇದ್ದ ಅನುದಾನ ಈಗ ದಿಢೀರ್‌ ಘೋಷಣೆಯಾಗಿದ್ದು, ಕ್ಷೇತ್ರದಲ್ಲಿ ಅಚ್ಚರಿ ಮತ್ತು ಸಂತಸಕ್ಕೆ ಕಾರಣವಾಗಿದೆ.

ಏನಿದು ಯೋಜನೆ?: ಮಸ್ಕಿ ತಾಲೂಕಿನ ಹಳ್ಳಿಗಳಲ್ಲಿ ಕುಡಿವ ನೀರು ಮತ್ತು ಅಂತರ್ಜಲ ಹೆಚ್ಚಳಕ್ಕಾಗಿ ಕೃಷ್ಣಾ ನದಿಯ ಏತ ನೀರಾವರಿ ಮೂಲಕ ಪೈಪ್‌ಲೈನ್‌
ಅಳವಡಿಸಿ ಇಲ್ಲಿನ ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ 17 ಕೆರೆಗಳಿಗೆ
ನೀರು ತುಂಬಿಸಲು ನೀಲನಕಾಶೆ ರೂಪಿಸಲಾಗಿತ್ತು.

ಇದಕ್ಕಾಗಿ ತಗಲುವ ವೆಚ್ಚ ಬರೋಬ್ಬರಿ 457.18 ಕೋಟಿ ರೂ. ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಡಿಪಿಆರ್‌ ತಯಾರಿಸಿದ್ದರು. ಕಳೆದ ಕೆಲ
ವರ್ಷಗಳಿಂದ ಈ ಅನುದಾನಕ್ಕಾಗಿ ಮಾಜಿ ಶಾಸಕರು ಸೇರಿ ಅವರ ಆಪ್ತರು ಹಲವು ಬಾರಿ ಸಚಿವಾಲಯ ಸುತ್ತಿದ್ದರು. ಅಲ್ಲದೇ ಮಸ್ಕಿಗೆ ಆಗಮಿಸಿದ್ದ ಬಿಜೆಪಿ
ವರಿಷ್ಠರು, ಮಂತ್ರಿಗಳ ಮುಂದೆಯೂ ಈ ವಿಷಯ ಪ್ರಸ್ತಾಪಿಸಿದ್ದರು. ಆದರೆ ಆರ್ಥಿಕ ಅನುದಾನದ ಕೊರತೆ ಕಾರಣಕ್ಕೆ ಇದುವರೆಗೂ ಈ ಯೋಜನೆಗೆ
ಅನುದಾನವೇ ಹಂಚಿಕೆಯಾಗಿರಲಿಲ್ಲ.

ದಿಢೀರ್‌ ಘೋಷಣೆ: ಆದರೆ ಇಷ್ಟೆಲ್ಲ ಕಸರತ್ತುಗಳ ನಡುವೆಯೂ ಘೋಷಣೆಯಾಗದೇ ಇದ್ದ ಅನುದಾನ ಈಗ ದಿಢೀರ್‌ ಘೋಷಣೆಯಾಗಿದೆ. ಮತ್ತೂಂದು
ಗಮನಾರ್ಹ ಸಂಗತಿ ಎಂದರೆ ಈ ಹಣಕಾಸಿನ ನೆರವು ಬಿಡುಗಡೆ ಯಾವುದೇ ಸಂಪುಟ ಸಭೆ ನಡೆಯುವ ಮುನ್ನವೇ ನೇರವಾಗಿ ಮುಖ್ಯಮಂತ್ರಿಗಳು
ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳ ಪರವಾಗಿ ಸರಕಾರದ ಅಧೀನ ಕಾರ್ಯದರ್ಶಿಗಳು ಹೊರಡಿಸಿದ ಆದೇಶ ಪತ್ರವೇ ಹೇಳುವಂತೆ ಮಸ್ಕಿ ತಾಲೂಕಿನ ಕೆರೆ ತುಂಬುವ 457.18 ಕೋಟಿಗಳ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಪ್ರಸಕ್ತ 2020-21ನೇ ಸಾಲಿನಲ್ಲಿ 82.33 ಕೋಟಿ ಮೊತ್ತದ ಮೊದಲನೇ ಹಂತ ಕಾಮಗಾರಿಗಳಿಗೆ ಟೆಂಡರ್‌ ಕರೆಯುವ ಷರತ್ತುಗೊಳಪಟ್ಟು ಕೂಡಲೇ ಆದೇಶ ಹೊರಡಿಸಿ ತದನಂತರ ಸಚಿವ ಸಂಪುಟದ ಘಟನೋತ್ತರ ಮಂಜೂರಾತಿಗೆ ಮಂಡಿಸಲು ಮುಖ್ಯಮಂತ್ರಿಗಳು ಅನುಮೋದಿಸಿರುತ್ತಾರೆ ಎಂದು ಪ್ರಸ್ತಾಪಿಸಿರುವುದು ಇಲ್ಲಿ ಗಮನ ಸೆಳೆಯುತ್ತಿದೆ.

Advertisement

ಹೆಚ್ಚಿದ ಟ್ವಿಸ್ಟ್‌: ಹಲವು ದಿನ ವಿಳಂಬವಾಗಿದ್ದ ಯೋಜನೆ ಘೋಷಣೆಯ ಹಿಂದೆ ರಾಜಕೀಯ ದಾಳವಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಈಗ ಉಪಚುನಾವಣೆ ಘೋಷಣೆ ಕಾಲವಿದೆ ಎನ್ನುವುದರ ಜತೆಗೆ ವಿಶೇಷವಾಗಿ ಮುಖ್ಯಮಂತ್ರಿ ಅವರ ಪುತ್ರ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಮಸ್ಕಿ ಉಪಚುನಾವಣೆ ಉಸ್ತುವಾರಿ ವಹಿಸಿಕೊಂಡ ಹೊತ್ತಲ್ಲೇ ಅನುದಾನ ಹಂಚಿಕೆಯಾಗಿರುವುದು ಅಚ್ಚರಿ ಮತ್ತು ಹಲವು ರೀತಿಯ ತಿರುವಿಗೆ ಸಾಕ್ಷಿಯಾಗಿದೆ.

ಮಸ್ಕಿ ತಾಲೂಕಿನಲ್ಲಿ ಕೆರೆ ತುಂಬುವ ಯೋಜನೆಗೆ ಅನುದಾನ ಬಿಡುಗಡೆ ಮಾಡುವಂತೆ ಹಲವು ಬಾರಿ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿತ್ತು. ಆದರೆ, ಈಗ ಅದರ ಮೊದಲ ಭಾಗವಾಗಿ 82 ಕೋಟಿ ನೀಡಿರುವುದು ಸಂತಸ ತಂದಿದೆ. ಇದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ.
ಪ್ರತಾಪಗೌಡ ಪಾಟೀಲ್‌, ಮಾಜಿ ಶಾಸಕ ಮಸ್ಕಿ

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next