ಮಸ್ಕಿ: ಪಟ್ಟಣದಲ್ಲಿ ಹರಿದಿರುವ ಐತಿಹಾಸಿಕ ಪ್ರಸಿದ್ಧ ಹಳ್ಳದ ಸ್ವಚ್ಛತೆಗೆ ಸಂಕಲ್ಪ ಮಾಡಿದ ಗಚ್ಚಿನಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಗುರುವಾರ ಬೆಳಗ್ಗೆ ಹಳ್ಳಕ್ಕೆ ಭೇಟಿ ನೀಡಿ ಅಲ್ಲಿನ ಪರಿಸರ ಪರಿಶೀಲಿಸಿದರು.
ಹಳದ ಸ್ವಚ್ಛತೆಗಾಗಿ ಶೀಘ್ರದಲ್ಲಿ ಸ್ಥಳೀಯ ಮುಖಂಡರು, ಸಂಘ-ಸಂಸ್ಥೆ ಪದಾಧಿಕಾರಿಗಳು ಪುರಸಭೆ ಸದಸ್ಯರ ಸಭೆ ಕರೆಯಲಾಗುವುದು ಎಂದು ಶ್ರೀಗಳು ತಿಳಿಸಿದರು.
ಹಳ್ಳದಲ್ಲಿ ಹಾಪು, ಜಾಲಿಗಿಡಗಳು ಅಪಾರ ಪ್ರಮಾಣದಲ್ಲಿ ಬೆಳೆದು ನಿಂತಿವೆ. ಪಟ್ಟಣದಲ್ಲಿನ ಬಹುತೇಕ ಚರಂಡಿ ನೀರು ಹಳ್ಳ ಸೇರುತ್ತಿದೆ. ಇದರಿಂದ ಅಲ್ಲಿನ ಪರಿಸರ ಹಾಳಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಮುನ್ಸೂಚನೆ ಇದೆ. ಆದ್ದರಿಂದ ಶ್ರಮದಾನದ ಮೂಲಕ ಹಳ್ಳದ ಸ್ವಚ್ಛತಾ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಶೀಘ್ರದಲ್ಲಿ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪುರಸಭೆ ಸದಸ್ಯರ ಸಭೆ ನಡೆಸಿ ಹಳ್ಳದ ಸ್ವಚ್ಛತೆ ಕುರಿತು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.
ಹಳ್ಳದ ದಂಡೆ ಮೇಲೆ ಬರುವ ಗ್ರಾಮಗಳ ಜನತೆ, ಮುಖಂಡರ ಮನವೊಲಿಸಿ ಆಯಾ ಗ್ರಾಮಗಳಲ್ಲೂ ಹಳ್ಳದ ಸ್ವಚ್ಛತೆ ಮಾಡುವಂತೆ ಕೋರಲಾಗುವುದು ಎಂದು ಹೇಳಿದರು.
ಡಾ| ಶಿವಶರಣಪ್ಪ ಇತ್ಲಿ, ಪುರಸಭೆ ಸದಸ್ಯರಾದ ದೇವಣ್ಣ ನಾಯಕ, ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಮಸ್ಕಿ, ವೀರೇಶ ಪಾಟೀಲ, ಡಾ| ಮಲ್ಲಿಕಾರ್ಜುನ ಇತ್ಲಿ, ವೀರೇಶ ಸೌದ್ರಿ, ಅಮರೇಶ ಬ್ಯಾಳಿ, ಶಿಕ್ಷಕ ಲಕ್ಷ್ಮಣ ಮೋಚಿ ಇತರರು ಇದ್ದರು.
ಜಿಲ್ಲಾಧಿಕಾರಿಗೆ ಮನವಿ: ಹಳ್ಳದ ಸ್ವಚ್ಛತೆಗೆ ಕ್ರಮ ವಹಿಸುವಂತೆ ಪುರಸಭೆ ಸದಸ್ಯ ಎಂ. ಅಮರೇಶ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಮಸ್ಕಿಯ ಹೃದಯ ಭಾಗದಲ್ಲಿರುವ ಹಳ್ಳದಲ್ಲಿ ಗಿಡಗಂಟಿಗಳು ಬೆಳೆದಿದ್ದು, ಕಲುಷಿತಗೊಂಡಿದೆ. ಪಟ್ಟಣದ ಎಲ್ಲ ವಾರ್ಡ್‌ಗಳ ಕೊಳಚೆ ನೀರನ್ನು ಮಸ್ಕಿ ಹಳ್ಳಕ್ಕೆ ಹರಿಬಿಟ್ಟಿರುತ್ತಾರೆ. ಇದರಿಂದ ಹಳ್ಳ ಮಾಲಿನ್ಯಗೊಂಡಿದೆ. ಈ ಬಗ್ಗೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಬಾರಿ ಚರ್ಚಿಸಿದ್ದರೂ ಸ್ವಚ್ಛತೆ ಕಾರ್ಯ ರೂಪಕ್ಕೆ ಬಂದಿಲ್ಲ. ಹಳ್ಳದ ಸುತ್ತಮುತ್ತ ವಾಸಿಸುವ ಜನರು ಸೊಳ್ಳೆ, ಕ್ರಿಮಿಕೀಟಗಳ ಹಾವಳಿಗೆ ಕಾಯಿಲೆಗೆ ತುತ್ತಾಗುವಂತಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಹಳ್ಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಳ್ಳದ ಸ್ವಚ್ಛತೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.