Advertisement

1.5ಲಕ್ಷ ಬಿಜೆಪಿ ಸದಸ್ಯತ್ವ ಗುರಿ

03:59 PM Jul 05, 2019 | Team Udayavani |

ಮಸ್ಕಿ: ಪ್ರಸಕ್ತ ಸಾಲಿನಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ 1.50 ಲಕ್ಷ ಸದಸ್ಯತ್ವ ನೋಂದಣಿ ಗುರಿ ಹೊಂದಲಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆರ್‌. ಬಸನಗೌಡ ತುರುವಿಹಾಳ ಹೇಳಿದರು.

Advertisement

ಪಟ್ಟಣದ ಭ್ರಮರಾಂಬ ದೇವಸ್ಥಾನ ಸಮುದಾಯ ಭವನದಲ್ಲಿ ಬಿಜೆಪಿ ಘಟಕದಿಂದ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಬಿಜೆಪಿ ವರಿಷ್ಠರ ಸೂಚನೆಯಂತೆ ಸದಸ್ಯತ್ವದ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಹಕಾರದಿಂದ ಕ್ಷೇತ್ರದಲ್ಲಿ 1.50 ಲಕ್ಷ ಬಿಜೆಪಿ ಸದಸ್ಯತ್ವದ ಗುರಿ ತಲುಪಲಾಗುವುದು ಎಂದರು.

ಕಳೆದ ಸಾಲಿನಲ್ಲಿ 93 ಸಾವಿರ ಸದಸ್ಯತ್ವದ ಗುರಿ ತಲುಪಲಾಗಿತ್ತು. ಈ ಬಾರಿ 1.5 ಲಕ್ಷ ಸದಸ್ಯತ್ವ ಗುರಿ ಹೊಂದಲಾಗಿದೆ ಎಂದರು. ಈಗಾಗಲೆ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿದ್ದು ಅದು ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಸಾಬೀತಾಗಿದೆ. ಪಕ್ಷವನ್ನು ಮತ್ತಷ್ಟು ತಳಮಟ್ಟದಿಂದ ಸಂಘಟಿಸುವ ದೃಷ್ಟಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥರೆಡ್ಡಿ ಅಮೀನಗಡ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಮಸ್ಕಿ ಕ್ಷೇತ್ರ ರಾಜ್ಯದಲ್ಲೇ ಮೂರನೇ ಸ್ಥಾನದಲ್ಲಿದೆ. ಇದನ್ನು ಮುಂದುವರಿಸಿ ಮೊದಲ ಸ್ಥಾನದ ತಲುಪುವ ಗುರಿಯನ್ನು ಇರಿಸಿಕೊಳ್ಳಬೇಕಿದೆ ಎಂದರು.

ಬಿಜೆಪಿ ಸದಸ್ಯತ್ವ ಅಭಿಯಾನ ತಾಲೂಕು ಸಂಚಾಲಕ ಅಪ್ಪಾಜಿಗೌಡ ಕಾರಲಕುಂಟಿ ಮಾತನಾಡಿ, ಕ್ಷೇತ್ರದಲ್ಲಿ ಪಕ್ಷದ ಭದ್ರಕೋಟೆ ನಿರ್ಮಾಣವಾಗಬೇಕಾದರೆ ಕ್ಷೇತ್ರದಲ್ಲಿನ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಸಹಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

Advertisement

ಮುಖಂಡರಾದ ಮಲ್ಲಪ್ಪ ಅಂಕುಶದೊಡ್ಡಿ, ತಮ್ಮನಗೌಡ ಗುಡದೂರು, ಪ್ರಾಣೇಶ ದೇಶಪಾಂಡೆ, ಮಹಿಳಾ ಘಟಕ ಅಧ್ಯಕ್ಷೆ ಶಾರದಾ ರಾಠೊಡ್‌ ಮಾತನಾಡಿದರು. ಸಿದ್ದಣ್ಣ ಹೂವಿನಬಾವಿ, ಬಸನಗೌಡ ಮುದುವಾಳ, ಗವಿಸಿದ್ದಪ್ಪ ಸಾಹುಕಾರ ಸಂತೆಕೆಲ್ಲೂರು, ಅಭಿಜಿತ್‌ ಮಾಲಿಪಾಟೀಲ, ಕೃಷ್ಣ ಡಿ. ಚಿಗರಿ, ವಿಜಯಕುಮಾರ ಹಳೆಕೋಟೆ, ಶಿವಪುತ್ರಪ್ಪ ಅರಳಳ್ಳಿ, ಮಲ್ಲಿಕಾರ್ಜುನ ಗ್ರೀನ್‌ಸಿಟಿ, ಮಹಾಂತೇಶ ಜಾಲವಾಡಗಿ, ಅಮರೇಗೌಡ ಕಡಬೂರು ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next