Advertisement

ಮಕ್ಕಳಲ್ಲಿ ಆವಿಷ್ಕಾರ ಪ್ರವೃತ್ತಿ ಬೆಳೆಸಿ

01:30 PM Sep 01, 2019 | Naveen |

ಮಸ್ಕಿ: ಮಕ್ಕಳ ಕುತೂಹಲ ತಣಿಸಲು ಹಾಗೂ ಅವರಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸಬೇಕು. ದೇಶವನ್ನು ಸದೃಢವಾಗಿಸಲು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಅಗತ್ಯವಾಗಿದೆ. ವಿದ್ಯಾರ್ಥಿಗಳು ಪ್ರೌಢಶಾಲಾ ಹಂತದಲ್ಲೇ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸರ್ಕಾರಿ ಬಾಲಕಿಯರ ಕಾಲೇಜಿನ ವಿಜ್ಞಾನ ಉಪನ್ಯಾಸಕ ಮಹಾಂತೇಶ ಮಸ್ಕಿ ಹೇಳಿದರು.

Advertisement

ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಅಟಲ್ ಟಿಂಕರಿಂಗ್‌ ಪ್ರಯೋಗಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕುರಿತು ಆಸಕ್ತಿ ಬೆಳೆಸಬೇಕು. ಆ ದಿಶೆಯಲ್ಲಿ ಅಟಲ್ ಟಿಂಕರಿಂಗ್‌ ಪ್ರಯೋಗಾಲಯ ಯೋಜನೆ ಸಹಕಾರಿ ಆಗಲಿದೆ ಎಂದರು.

ಬೆಂಗಳೂರಿನ ಎಜುಲೈಫ್‌ ಇಂಡಿಯಾ ಕಂಪನಿ ತಾಂತ್ರಿಕ ಅಧಿಕಾರಿ ನವೀನಕುಮಾರ ಮಾತನಾಡಿ, ಪ್ರಪಂಚದಲ್ಲಿ ಚೀನಾ ದೇಶವೂ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿದಿದ್ದು, ಹೊಸ ಹೊಸ ಅವಿಷ್ಕಾರ ಮಾಡುತ್ತಿದೆ. ಆದರೆ ನಮ್ಮಲ್ಲಿ ತಂತ್ರಜ್ಞಾನದಲ್ಲಿ ಸ್ವಲ್ಪ ಮಟ್ಟಿಗೆ ಹಿಂದೆ ಇದ್ದೇವೆ. ಆದ್ದರಿಂದ ಕೇಂದ್ರ ಸರ್ಕಾರ ಈ ಅಟಲ್ ಲ್ಯಾಬ್‌ ಯೋಜನೆ ಮೂಲಕ ಭಾರತ ಬೇರೆ ರಾಷ್ಟ್ರಗಳಿಗಿಂತಲೂ ಮುಂದುವರಿಯಬೇಕೆನ್ನುವ ಉದ್ದೇಶದಿಂದ ಈ ಯೋಜನೆ ಪ್ರಾರಂಭ ಮಾಡಿದೆ. ಈ ಲ್ಯಾಬ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಬುದ್ದಿ ಮಟ್ಟಕ್ಕೆ ಅನುಗುಣವಾಗಿ ಹೊಸ-ಹೊಸ ಅವಿಷ್ಕಾರಗಳನ್ನು ಮಾಡುವ ಮೂಲಕ ಜಗತ್ತಿಗೆ ಹೊಸತನಗಳನ್ನು ಪರಿಚಯಿಸಬೇಕು. ಇದರಿಂದ ಭಾರತ ದೇಶ ಇತರ ರಾಷ್ಟ್ರಗಳಿಗಿಂತಲೂ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.

ಬಾಲಕಿಯರ ಪ್ರೌಢಶಾಲೆಯ ಮುಖ್ಯಗುರು ಬಸಪ್ಪ ತನಿಖೆದಾರ ಮಾತನಾಡಿ, ಅಟಲ್ ಟಿಂಕರಿಂಗ್‌ ಯೋಜನೆಗೆ ನಮ್ಮ ಶಾಲೆ ಆಯ್ಕೆಯಾಗಿರುವುದು ಸಂತೋಷದ ವಿಷಯ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ 20 ಲಕ್ಷ ರೂ. ಬಿಡುಗಡೆಯಾಗಿದೆ. ಮೊದಲ ಕಂತಿನಲ್ಲಿ 12 ಲಕ್ಷ ಅನುದಾನ ಬಂದಿದ್ದು, ಅದರಲ್ಲಿ ಕಂಪ್ಯೂಟರ್‌, ಸ್ಕ್ಯಾನರ್‌, ತ್ರಿಡಿ ಪ್ರಿಂಟಿಂಗ್‌ ಸೇರಿದಂತೆ ಇನ್ನಿತರ ವಿಜ್ಞಾನದ ಸಲಕರಣೆಗಳು ಬಂದಿವೆ. ಅಲ್ಲದೇ ಪ್ರಯೋಗಾಲಯ ನಿರ್ವಹಣೆ ಖರ್ಚು ವೆಚ್ಚಗಳಿಗೆ 5 ವರ್ಷದ ವರೆಗೆ ಪ್ರತಿ ವರ್ಷ 2 ಲಕ್ಷ ರೂ. ನೀಡುತ್ತದೆ ಎಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ರಜಾಕ್‌ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಬಸನಗೌಡ ಪಾಟೀಲ, ಲಕ್ಷ್ಮೀ, ಪತ್ರಕರ್ತ ವೀರೇಶ ಸೌದ್ರಿ, ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಾಂಶುಪಾಲ ರಂಗಪ್ಪ, ತಾಲೂಕು ಸರ್ಕಾರಿ ನೌಕರ ಸಂಘದ ಶಂಕರಗೌಡ ಪಾಟೀಲ, ಸಿಆರ್‌ಸಿ ನಾಗನಗೌಡ. ಸಿದ್ದಾರಡ್ಡಿ ಗಿಣಿವಾರ, ಸಿ.ಎ.ಮೇಟಿ, ಅಭಯಸಿಂಗ್‌ ಮಾಲಿಪಾಟೀಲ, ಆನಂದ ವೀರಾಪುರ ಹಾಗೂ ಶಿಕ್ಷಕರು, ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next