Advertisement

ದುಪ್ಪಟ್ಟು ಬೆಲೆಗೆ ಮಾಸ್ಕ್ ಮಾರಾಟ-ಜನಾಕ್ರೋಶ

12:04 PM Mar 15, 2020 | Suhan S |

ಬಾಗಲಕೋಟೆ: ಮಹಾ ಮಾರಿ ಕೊರೊನಾ ವೈರಸ್‌ ಭೀತಿಯೇ ಇವರಿಗೆ ದೊಡ್ಡ ವರವಾಗಿ ಪರಿಣಮಿಸಿದೆ. ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಖಾಸಗಿ ಔಷಧ ಅಂಗಡಿಗಳಲ್ಲಿ ಲೂಟಿ ನಡೆಯುತ್ತಿದೆ. ಕೇವಲ ಏಳು ರೂ.ಗೆ ದೊರೆಯುವ ಮಾಸ್ಕ್ಗೆ 20 ರೂ. ಪಡೆಯುತ್ತಿದ್ದಾರೆ. ಇದರಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ.

Advertisement

ಹೌದು, ಕೊರೊನಾ ವೈರಸ್‌ ಕುರಿತು ಎಲ್ಲೆಡೆ ಜಾಗೃತಿ ನಡೆಯುತ್ತಿದ್ದರೆ, ಖಾಸಗಿ ಔಷಧ ಅಂಗಡಿಗಳ ಮಾಲಿಕರು, ತಮ್ಮ ಮನಸೋಇಚ್ಛೆ ಹಣ ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತದ ಗಮನಕ್ಕೂ ಬಂದಿದ್ದು, ಆ ರೀತಿ ಹೆಚ್ಚಿನ ಹಣ ವಸೂಲಿ ಮಾಡುವವರ ಕುರಿತು ಮಾಹಿತಿ ನೀಡಲು ಕೋರಿದೆ.

ದುಪ್ಪಟ್ಟು ಬೆಲೆಗೆ ಮಾರಾಟ: ಖಾಸಗಿ ಔಷಧ ಅಂಗಡಿಗಳ ಮಾಲೀಕರು, ಮಾಸ್ಕ್ ಮಾರಾಟವೇ ಒಂದು ದೊಡ್ಡ ದಂಧೆಯಂತೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಜಿಲ್ಲೆಗೆ ಮಾಸ್ಕ್ಗಳ ಪೂರೈಕೆ ಮಾಡುವ ಕಂಪನಿಯವರೂ ಔಷಧ ಅಂಗಡಿಗಳಿಗೆ ಹೆಚ್ಚುವರಿ ಹಣ ಕೊಟ್ಟಾ ಗಲೇ ಪೂರೈಕೆ ಮಾಡುತ್ತಿದ್ದಾರೆ ಎಂದು ಔಷಧ ಅಂಗಡಿಗಳ ಮಾಲೀಕರು ಹೇಳುತ್ತಿದ್ದಾರೆ.

ಮಾಸ್ಕ ಪೂರೈಸುವ ಕಂಪನಿಯವರ ಹೆಚ್ಚುವರಿ ವಸೂಲಿಗೆ ಕೆಲ ಪ್ರಾಮಾಣಿಕ ಔಷಧ ವ್ಯಾಪಾರಸ್ಥರು ರೋಸಿ ಹೋಗಿದ್ದಾರೆ. ಮೊದಲೆಲ್ಲ ಬಲ್ಕ್ನಲ್ಲಿ ಅತ್ಯಂತ ಕಡಿಮೆ ಬೆಲೆಗೆ (ಮೂಲ ಮಾರಾಟ ಬೆಲೆಗೆ) ನೀಡುತ್ತಿದ್ದ ಮಾಸ್ಕ್ಗಳನ್ನು ಈಗ ಮನಸ್ಸಿಗೆ ಬಂದ ದರಕ್ಕೆ ಕೊಡುತ್ತಿದ್ದು, ಕೆಲ ಔಷಧ ಅಂಗಡಿಯವರು ಅವುಗಳನ್ನು ಪಡೆಯುತ್ತಿಲ್ಲ. ಇದೇ ಉತ್ತಮ ಅವಕಾಶವೆಂದು ಭಾವಿಸಿದ ಕೆಲವರು, ಹೆಚ್ಚಿನ ಬೆಲೆಗೆ ಪಡೆದು, ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದು ನಗರದಲ್ಲಿ ಕಂಡು ಬಂದಿದೆ.

ಇನ್ನೂ ತುಟ್ಟಿ ಆಗತಾವು: ಸಾಮಾನ್ಯ ಜನರು, ಕೊರೊನಾ ವೈರಸ್‌ಗೆ ಹೆದರಿ, ಹೇಗಾದರೂ ಅದರಿಂದ ಬಚಾವಾದರೆ ಸಾಕು ಎಂದು ಭಾವಿಸಿದ್ದಾರೆ. ಮಾಸ್ಕ್ ಧರಿಸಿದರೆ ಕೊರೊನಾ ವೈರಸ್‌ ಬರಲ್ಲ ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ. ಹೀಗಾಗಿ ಎಷ್ಟೇ ಹಣ ಪಡೆದರೂ ಪರವಾಗಿಲ್ಲ. ಹಣಕ್ಕಿಂತ ಜೀವ ಮುಖ್ಯ ಎಂದು ಜನರು, ದುಪ್ಪಟ್ಟು ಬೆಲೆ ತೆತ್ತು ಮಾಸ್ಕ ಖರೀದಿ ಮಾಡುತ್ತಿದ್ದಾರೆ. ಕೆಲ ಔಷಧ ಮಾರಾಟಗಾರರು, ಜನರನ್ನು ಮತ್ತಷ್ಟು ಭೀತಿಗೊಳಿಸಿಯೇ ಮಾರಾಟ ಮಾಡುತ್ತಿದ್ದಾರೆ. ಏಳು ರೂ.ನ ಮಾಸ್ಕ್ ಈಗ 20 ರೂಪಾಯಿಗಾದರೂ ಸಿಗುತ್ತಿದೆ. ಇನ್ನೆರಡು ದಿನ ಬಿಟ್ಟರೆ 100 ರೂ. ದಾಟುತ್ತದೆ. ಈಗಲೇ ತೆಗೆದುಕೊಳ್ಳಿ ಎಂದು ಹೇಳುತ್ತಿರುವುದು ಕೇಳಿ ಬಂದಿದೆ.

Advertisement

ಬೇಕಿದೆ ನಿಯಂತ್ರಣ: ಎರಡು ತೆರನಾದ ಮಾಸ್ಕಗಳಿದ್ದು, ಸಾಮಾನ್ಯ ಮಾಸ್ಕ್ 7 ರೂ.ಗೆ ದೊರೆಯುತ್ತವೆ. ಇನ್ನು ಉತ್ತಮ ದರ್ಜೆಯ ಮಾಸ್ಕಗಳೂ ಇದ್ದು, ಅವುಗಳನ್ನು ಮೂಲ ಬೆಲೆಗೆ ಮಾರಾಟ ಮಾಡಬೇಕು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮಾಸ್ಕ್ ಮಾರಾಟವೇ ಒಂದು ದಂಧೆ ಮಾಡಿಕೊಂಡ ಔಷಧ ಅಂಗಡಿಗಳ ಮೇಲೆ ಹಠಾತ್‌ ದಾಳಿ ನಡೆಸಿ, ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇನ್ನೂ ಕೆಲವು ಅಂಗಡಿಕಾರರು, ತಮ್ಮಲ್ಲಿ ಮಾಸ್ಕ್ಗಳಿದ್ದರೂ ಸಂಗ್ರಹ (ಸ್ಟಾಕ್‌) ಇಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಹೀಗಾಗಿ ಜನರು, ಮಾಸ್ಕಗಾಗಿ ಔಷಧ ಅಂಗಡಿಯಿಂದ ಮತ್ತೂಂದು ಅಂಗಡಿಗೆ ಅಲೆದಾಡುವ ಪ್ರಸಂಗ ಬಾಗಲಕೋಟೆ ನಗರದಲ್ಲೇ ನಡೆಯುತ್ತಿದೆ.

ನಗರವೊಂದರಲ್ಲೇ ಸುಮಾರು 192 ಔಷಧ ಮಾರಾಟ ಅಂಗಡಿಗಳಿದ್ದು, ಬಹುತೇಕ ಅಂಗಡಿಗಳಲ್ಲೂ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಈ ಕುರಿತು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ಮಾಸ್ಕ್ ಮಾರಾಟವೇ ದಂಧೆಯನ್ನಾಗಿ ಮಾಡಿಕೊಂಡರೆ ತಕ್ಷಣ ಮಾಹಿತಿ ನೀಡಬೇಕು. ಯಾವುದೇ ಅಂಗಡಿಯವರು ಹೆಚ್ಚಿನ ಹಣಕ್ಕೆ ಮಾರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಇಲಾಖೆಯಲ್ಲಿ ಔಷಧ ಮಾರಾಟ ನಿಯಂತ್ರಣ-ಪರಿಶೀಲನೆಗಾಗಿಯೇ ಪ್ರತ್ಯೇಕ ವಿಭಾಗವಿದ್ದು, ಆ ತಂಡದಿಂದ ಎಲ್ಲೆಡೆ ದಾಳಿ ನಡೆಸಲು ಸೂಚಿಸಲಾಗಿದೆ. ಸ್ಟಾಕ್‌ ಇದ್ದರೂ ಕೊಡದಿದ್ದರೆ, ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದರೆ ಪ್ರಕರಣ ದಾಖಲಿಸಲಾಗುವುದು.-ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ, ಜಿಲ್ಲಾಧಿಕಾರಿ

ನಗರದ ಅಂಗಡಿಯೊಂದರಲ್ಲಿ ಮಾಸ್ಕ್ ಖರೀದಿಸಲು ಹೋಗಿದ್ದೆ. ಸಾಮಾನ್ಯ ಮಾಸ್ಕಗೆ 20 ರೂ. ಹೇಳಿದರು. ಪ್ರಶ್ನಿಸಿದರೆ ಬೇಕಾದರೆ ತಗೆದುಕೊಳ್ಳಿ, ಬೇಡವಾದರೆ ಬಿಡಿ ಎಂದು ಹೇಳಿ, ಇನ್ನೆರಡು ದಿನ ಬಿಟ್ಟರೆ 20 ರೂಪಾಯಿಗೂ ಸಿಗಲ್ಲ ಎಂದು ಹೇಳುತ್ತಿದ್ದಾರೆ. ಜನರೆಲ್ಲ ಭೀತಿಯಲ್ಲಿದ್ದರೆ ಔಷಧ ಅಂಗಡಿಯವರು ಅದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರಿಂದ ಹಣ ಸುಲುಗೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. -ಸಂತೋಷ ಹಂಜಗಿ, ನಗರದ ಯುವಕ

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next