ಮುಂಬಯಿ, ಜು. 9: ಕಳೆದ ಆರು ದಿನಗಳಲ್ಲಿ ಮುಖವಸ್ತ್ರ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಿದ್ದ 88 ಮಂದಿಯ ವಿರುದ್ಧ ಮುಂಬಯಿ ಮಹಾನಗರ ಪಾಲಿಕೆ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿದೆ. ಬಿಎಂಸಿಯು ಸಾರ್ವಜನಿಕ ಸ್ಥಳಗಳಲ್ಲಿ ಮುಖವಸ್ತ್ರ ಧರಿಸುವ ನಿಯಮವನ್ನು ಏಪ್ರಿಲ್‌ನಲ್ಲಿ ಕಡ್ಡಾಯಗೊಳಿಸಿತ್ತು. ಆದೇಶದಲ್ಲಿ ದಂಡವನ್ನು ಉಲ್ಲೇಖೀಸದಿದ್ದರೂ, ಘನತ್ಯಾಜ್ಯ ನಿರ್ವಹಣೆ (ಎಸ್‌ಡಬ್ಲ್ಯುಎಂ) ಇಲಾಖೆಯಿಂದ ನೇಮಿಸಲ್ಪಟ್ಟ ಸ್ವಚ್ಚಗೊಳಿಸುವ ಮಾರ್ಷಲ್ ಗಳು ಅಪರಾಧಿಗಳಿಗೆ ದಂಡ ವಿಧಿಸಲು ಪ್ರಾರಂಭಿಸಿದ್ದರು. ನಿಗಮವು ಜೂನ್ ಅಂತ್ಯದವರೆಗೆ ದಿನಕ್ಕೆ ಸರಾಸರಿ 25 ಜನರ ವಿರುದ್ಧ ಕ್ರಮ ಕೈಗೊಳ್ಳುತ್ತಿತ್ತು. ಜೂನ್ 29 ರಂದು ಪುರಸಭೆ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಅವರು ಮಾಸ್ಕ್ ಧರಿಸದವರಿಗೆ 1,000 ರೂ. ದಂಡ ವಿಧಿಸುವುದಾಗಿ ಆದೇಶ ಹೊರಡಿಸಿದ್ದರು. ಆದೇಶದ ಬಳಿಕ ಈ ಕ್ರಿಯೆಯು ತೀವ್ರವಾಗಿ ನಿಧಾನವಾಗಿದೆ. ಕಳೆದ ವಾರದಲ್ಲಿ, ಮಾರ್ಷಲ್‌ಗಳು ಮುಖವಸ್ತ್ರ ಧರಿಸದ 602 ಮಂದಿಗೆ ಎಚ್ಚರಿಕೆ ನೀಡಿದ್ದಾರೆ. ಹಲವರು ಮುಖವಸ್ತ್ರಗಳಿಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಡುತ್ತಿದ್ದಾರೆ ಮತ್ತು ಯಾವುದೇ ಸಾಮಾಜಿಕ ಅಂತರವಿಲ್ಲದೆ ಗುಂಪು ಸೇರುತ್ತಿದ್ದಾರೆ. ನಾವು ಮಾಸ್ಕ್ ಧರಿಸುವಂತೆ ಸೂಚಿಸಿದರೂ ಅದನ್ನು ನಿರಾಕರಿಸುತ್ತಾರೆ ಎಂದು ಬೊರಿವಲಿ ನಿವಾಸಿ ಸ್ಮತಿ ಕುಲಕರ್ಣಿ ಇತ್ತೀಚೆಗೆ ಮುಂಬಯಿ ಮಹಾನಗರ ಪಾಲಿಕೆಗೆ ದೂರು ನೀಡಿದ್ದರು.
ದಂಡ ವಿಧಿಸುವ ಪ್ರಕ್ರಿಯೆಯಲ್ಲಿ ತೊಡಗಿರುವ ಮುಂಬಯಿ ಮಹಾನಗರ ಪಾಲಿಕೆಯ ಕ್ಲೀನ್-ಅಪ್ ಮಾರ್ಷಲ್ ಗಳ ಸಂಖ್ಯೆಯೂ ಕಡಿಮೆಯಿದೆ. ಅಲ್ಲದೆ ನಗರವನ್ನು ಸ್ವಚ್ಚವಾಗಿಡುವುದು ಅವರ ಕಾರ್ಯದ ಮುಖ್ಯ ಉದ್ದೇಶವಾಗಿದ್ದು, ಇತರ ಅಧಿಕಾರಿಗಳು ಕೋವಿಡ್-19 ಕೆಲಸಗಳಲ್ಲಿ ನಿರತರಾಗಿದ್ದಾರೆ ಎಂದು ನಾಗರಿಕ ಅಧಿಕಾರಿಯೊಬ್ಬರು ಹೇಳಿದರು. ನಾಗರಿಕರಲ್ಲಿ ಜಾಗೃತಿ ಹೆಚ್ಚಾಗಿದೆ ಮತ್ತು ಕೆಲವೇ ಕೆಲವರು ನಿಯಮವನ್ನು ಮೀರುತ್ತಿದ್ದಾರೆ ಎಂದು ಹೇಳಿದ್ದಾರೆ.