Advertisement

ಕರಾವಳಿಯ ಎರಡು ಪ್ರಮುಖ ನಗರಗಳಲ್ಲಿ ಮಾಸ್ಕ್ ಧಾರಣೆ ನಿರೀಕ್ಷಿತ ಮಟ್ಟದಲ್ಲಿಲ್ಲ

01:17 AM Jan 24, 2022 | Team Udayavani |

ಕೊರೊನಾ 3ನೇ ಅಲೆ ಕರಾವಳಿಯಲ್ಲಿಯೂ ಹೆಚ್ಚುತ್ತಿದೆ. ಈ ನಡುವೆ ಎರಡೂ ಜಿಲ್ಲೆಗಳಲ್ಲಿ ಶೀತ, ಜ್ವರ, ಕಫ‌, ಕೆಮ್ಮು ಇತ್ಯಾದಿ ಶ್ವಾಸಾಂಗ ಸಂಬಂಧಿ ಅನಾರೋಗ್ಯ ವ್ಯಾಪಕವಾಗಿದೆ. ಕೊರೊನಾ ಸಾಂಕ್ರಾಮಿಕ ಆರಂಭ ಕಾಲದಲ್ಲಿ ಅದರ ಕಾಟದಿಂದ ಪಾರಾಗಲು ಮಾಸ್ಕ್ ಧಾರಣೆ ಪ್ರಮುಖ ಮುಂಜಾಗ್ರತೆಯ ಕ್ರಮವಾಗಿತ್ತು. ಆದರೆ ಈಗ ಮೂರನೇ ಅಲೆಯ ಹೊತ್ತಿಗೆ ಮಾಸ್ಕ್ ಧಾರಣೆಯ ಬಗ್ಗೆ ಎಲ್ಲೆಡೆ ನಿರ್ಲಕ್ಷ್ಯ ಕಂಡುಬರುತ್ತಿದೆ. ದಕ್ಷಿಣ ಕನ್ನಡದ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಉಡುಪಿ ನಗರದಲ್ಲಿ ಉದಯವಾಣಿ ನಡೆಸಿದ ಸಮೀಕ್ಷೆಯಲ್ಲಿ ಇದು ನಿಚ್ಚಳವಾಗಿದೆ.

Advertisement

ಮಂಗಳೂರಿನಲ್ಲಿ ಮಾಸ್ಕ್ ಧಾರಣೆಗೆ ನಿರ್ಲಕ್ಷ್ಯ
ಮಂಗಳೂರು: ಕೊರೊನಾ ವೇಗವಾಗಿ ಪ್ರಸರಣವಾಗುತ್ತಿದ್ದರೂ ಅದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮಾಸ್ಕ್ ಧಾರಣೆ ಬಗ್ಗೆ ನಗರದಲ್ಲಿ ದಿವ್ಯ ನಿರ್ಲಕ್ಷ ವಹಿಸುತ್ತಿರುವುದು ಉದಯವಾಣಿ ಸಹಯೋಗದಲ್ಲಿ ಹಂಪನಕಟ್ಟೆಯ ವಿ.ವಿ. ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ.

ಮಾರ್ಕೆಟ್‌
ಬೇರೆ ಬೇರೆ ಮಾರ್ಕೆಟ್‌ಗಳಲ್ಲಿ 300 ಮಂದಿಯ ಸಮೀಕ್ಷೆ ನಡೆಸಿದಾಗ ಕೇವಲ ಶೇ. 18 ಮಂದಿ ಪೂರ್ಣ ಪ್ರಮಾಣದಲ್ಲಿ ಮಾಸ್ಕ್ ಧರಿಸಿರುವುದು ಕಂಡು ಬಂತು. ಶೇ. 18 ಮಂದಿ ಅರೆಬರೆ ಧರಿಸಿದ್ದರೆ, ಶೇ. 64 ಮಂದಿ ಧರಿಸಿಯೇ ಇರಲಿಲ್ಲ. ಅಂತರ ಪಾಲನೆ ಎಲ್ಲೂ ಕಂಡುಬಂದಿಲ್ಲ. ಗುಂಪು ಗುಂಪಾಗಿ ಸೇರಿ ಖರೀದಿಯಲ್ಲಿ ತೊಡಗಿದ್ದರು. ಮಾರ್ಕೆಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರಕಾರಿ ನೌಕರರು ಮಾಸ್ಕ್ ಧರಿಸಿದ್ದರೂ ಕೆಲವರದು ಅರೆಬರೆಯಾಗಿತ್ತು. ಪೊಲೀಸ್‌ ಸಿಬಂದಿ ಇರಲಿಲ್ಲ. ಸ್ಥಳೀಯ ಸಂಸ್ಥೆಯ ಸಿಬಂದಿ ಮಾಸ್ಕ್ ಧರಿಸಿ ಸ್ಥಳದಲ್ಲಿ ಇದ್ದರೂ ನಿಯಮ ಪಾಲಿಸುವಂತೆ ಜನರಿಗೆ ತಿಳಿಹೇಳುವುದಾಗಲಿ, ದಂಡ ವಿಧಿಸುವುದಾಗಲಿ ಕಂಡುಬಂದಿಲ್ಲ.

ಬಸ್‌ ನಿಲ್ದಾಣ
ಬಸ್‌ ನಿಲ್ದಾಣದಲ್ಲಿ ಶೇ. 30ರಷ್ಟು ಮಂದಿ ಮಾಸ್ಕ್ ಪೂರ್ಣವಾಗಿ ಧರಿಸಿದ್ದರು. ಶೇ. 50ರಷ್ಟು ಮಂದಿ ಅರೆಬರೆ ಧರಿಸಿದ್ದರು. ಶೇ. 20ರಷ್ಟು ಮಂದಿ ಮಾಸ್ಕ್ ಧರಿಸಿರಲಿಲ್ಲ. ಬಸ್‌ ಸಿಬಂದಿ ಪೈಕಿ ಹೆಚ್ಚಿನವರ ಮುಖದಲ್ಲಿ ಮಾಸ್ಕ್ ಇರಲಿಲ್ಲ.

ರೈಲು ನಿಲ್ದಾಣ
ರೈಲು ನಿಲ್ದಾಣದಲ್ಲಿ ಶೇ. 51ರಷ್ಟು ಜನರು ಪೂರ್ಣ, ಶೇ. 31ರಷ್ಟು ಜನರು ಅರೆಬರೆ, ಶೇ. 18ರಷ್ಟು ಮಂದಿ ಮಾಸ್ಕ್ ಧರಿಸದಿರುವುದು ಕಂಡುಬಂತು. ರೈಲು ನಿಲ್ದಾಣದಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡುತ್ತಿರಲಿಲ್ಲ.

Advertisement

ಹೊಟೇಲ್‌
ಹೊಟೇಲ್‌ನಲ್ಲಿ 50 ಜನರನ್ನು ಸಮೀಕ್ಷೆಗೆ ಒಳಪಡಿಸಿದಾಗ ಶೇ. 20 ಮಂದಿ ಪೂರ್ಣ ಪ್ರಮಾಣ ದಲ್ಲಿ, ಶೇ. 30 ಮಂದಿ ಅರೆ ಬರೆ ಧರಿಸಿದ್ದು, ಶೇ. 50 ಮಂದಿ ಧರಿಸಿ ರಲಿಲ್ಲ. ಸಿಬಂದಿ ಅರೆಬರೆ ಯಾಗಿ ಮಾಸ್ಕ್ ಧರಿಸಿದ್ದರು.

ಪಾರ್ಕ್‌
ಪಾರ್ಕ್‌ಗಳಲ್ಲಿ 200 ಮಂದಿಯ ಸಮೀಕ್ಷೆ ನಡೆಸಿದಾಗ ಶೇ. 4.5 ಮಂದಿಯಷ್ಟೇ ಪೂರ್ಣ ಪ್ರಮಾಣದಲ್ಲಿ ಮಾಸ್ಕ್ ಧರಿಸಿದ್ದರು. ಶೇ. 6 ಮಂದಿ ಅರೆಬರೆ ಮಾಸ್ಕ್ ಧರಿಸಿದ್ದರೆ, ಶೇ. 89.5 ಮಂದಿ ಮಾಸ್ಕ್ ಧರಿಸಿರಲಿಲ್ಲ.

ಆಸ್ಪತ್ರೆ
ಆಸ್ಪತ್ರೆಗಳಲ್ಲಿ 50 ಮಂದಿಯ ಸಮೀಕ್ಷೆ ನಡೆಸಿದಾಗ ಶೇ. 86 ಮಂದಿ ಮಾಸ್ಕ್ ಪೂರ್ಣವಾಗಿ ಹಾಕಿರುವುದು ಕಂಡು ಬಂತು.ಶೇ. 10ರಷ್ಟು ಮಂದಿ ಅರೆಬರೆ ಮತ್ತು ಶೇ. 4 ಮಂದಿ ಮಾಸ್ಕ್ ಧರಿಸಿರಲಿಲ್ಲ. ಸಿಬಂದಿ ಮತ್ತು ಅಲ್ಲಿದ್ದ ಪೊಲೀಸರು ಧರಿಸಿದ್ದರು. ಸಾಮಾಜಿಕ ಅಂತರ ಪಾಲನೆ ಭಾಗಶಃ ಇತ್ತು. ಮಾಸ್ಕ್ ಧರಿಸದವರಿಗೆ ಧರಿಸುವಂತೆ ಸಿಬಂದಿ ಸೂಚನೆ ನೀಡುತ್ತಿರುವುದು, ದಂಡ ವಿಧಿಸುತ್ತಿರುವುದೂ ಕಂಡುಬಂತು.

ಕಾಲೇಜು
ಕಾಲೇಜು ಪರಿಸರದಲ್ಲಿನ 50 ಮಂದಿಯನ್ನು ಸಮೀಕ್ಷೆ ನಡೆಸಿದಾಗ ಶೇ. 70 ಮಂದಿ ಮಾಸ್ಕ್ ಧರಿಸಿದ್ದರು. ಶೇ. 25 ಮಂದಿ ಅರೆಬರೆ ಮಾಸ್ಕ್ ಧರಿಸಿದ್ದರು. ಶೇ. 5 ಮಂದಿ ಮಾಸ್ಕ್ ಧರಿಸಿರಲಿಲ್ಲ. ಕಾಲೇಜು ಆವರಣದಲ್ಲಿ ಸಿಬಂದಿ ಮಾಸ್ಕ್ ಧರಿಸುವಂತೆ ಸೂಚಿಸುತ್ತಿದ್ದರು. ಸಿಬಂದಿಗಳೆಲ್ಲ ಮಾಸ್ಕ್ ಧರಿಸಿದ್ದರು. ಒಟ್ಟು 14 ವಿದ್ಯಾರ್ಥಿಗಳು ಒಟ್ಟು 628 ಜನರ ಸಮೀಕ್ಷೆ ನಡೆಸಿದ್ದರು.

ಉಡುಪಿ: ಮಾಸ್ಕ್ ಇದ್ದರೂ ಸಾಮಾಜಿಕ ಅಂತರವಿಲ್ಲ
ಉಡುಪಿ: ನಗರದ ಬಸ್‌, ರೈಲು ನಿಲ್ದಾಣ, ಪಾರ್ಕ್‌, ಹೊಟೇಲ್‌ ಮೊದಲಾದ ಕಡೆ ಗಳಲ್ಲಿ ಮಾಸ್ಕ್ ಧಾರಣೆಯತ್ತ ನಿರ್ಲಕ್ಷ್ಯ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.

ಉದಯವಾಣಿ ಸಹಯೋಗದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಗಳು ನಡೆಸಿದ ಸಮೀಕ್ಷೆಯಲ್ಲಿ ಇದು ಕಂಡುಬಂದಿದೆ.

ಮಾರ್ಕೆಟ್‌
ಮಾರ್ಕೆಟ್‌ಗಳಲ್ಲಿ 100 ಮಂದಿಯ ಸಮೀಕ್ಷೆ ನಡೆಸಿದಾಗ ಕೇವಲ ಶೇ. 40 ಮಂದಿ ಪೂರ್ಣ ಪ್ರಮಾಣದಲ್ಲಿ ಮಾಸ್ಕ್ ಧರಿಸಿರುವುದು ಕಂಡು ಬಂತು. ಶೇ. 30 ಮಂದಿ ಅರೆಬರೆ ಧರಿಸಿದ್ದರೆ, ಶೇ. 30 ಮಂದಿ ಧರಿಸಿಯೇ ಇರಲಿಲ್ಲ. ಅಂತರ ಪಾಲನೆ ಎಲ್ಲೂ ಕಂಡುಬಂದಿಲ್ಲ. ಪೊಲೀಸ್‌ ಸಿಬಂದಿ ಅಲ್ಲಿರಲಿಲ್ಲ. ಸ್ಥಳೀಯ ಸಂಸ್ಥೆಯ ಸಿಬಂದಿ ಮಾಸ್ಕ್ ಧರಿಸಿ ಸ್ಥಳದಲ್ಲಿ ಇದ್ದರೂ ನಿಯಮ ಪಾಲಿಸುವಂತೆ ಜನರಿಗೆ ತಿಳಿಹೇಳುವುದು ಕಂಡುಬಂದಿಲ್ಲ.

ಬಸ್‌ ನಿಲ್ದಾಣ
ಬಸ್‌ ನಿಲ್ದಾಣದಲ್ಲಿ ಶೇ. 30ರಷ್ಟು ಮಂದಿ ಮಾಸ್ಕ್ ಪೂರ್ಣವಾಗಿ ಧರಿಸಿದ್ದರು. ಶೇ. 50ರಷ್ಟು ಮಂದಿ ಅರೆಬರೆ ಧರಿಸಿದ್ದರು. ಶೇ. 20ರಷ್ಟು ಮಂದಿ ಮಾಸ್ಕ್ ಧರಿಸಿರಲಿಲ್ಲ. ಬಸ್‌ ಸಿಬಂದಿ ಪೈಕಿ ಹೆಚ್ಚಿನವರ ಮುಖದಲ್ಲಿ ಮಾಸ್ಕ್ ಇತ್ತು. ಕೆಲವೆಡೆ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.

ರೈಲು ನಿಲ್ದಾಣ
ರೈಲು ನಿಲ್ದಾಣದಲ್ಲಿ ಶೇ. 50ರಷ್ಟು ಜನರು ಪೂರ್ಣವಾಗಿ, ಶೇ. 10ರಷ್ಟು ಜನರು ಅರೆಬರೆ ಮತ್ತು ಶೇ. 40ರಷ್ಟು ಮಾಸ್ಕ್ ಧರಿಸದಿರುವುದು ಕಂಡುಬಂತು. ರೈಲು ನಿಲ್ದಾಣದಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡುತ್ತಿರಲಿಲ್ಲ; ಹೆಚ್ಚಿನ ಸಿಬಂದಿ ಮತ್ತು ನೌಕರರು ಮಾಸ್ಕ್ ಧರಿಸಿರುವುದು ಕಂಡುಬಂತು.

ಹೊಟೇಲ್‌
ಹೊಟೇಲ್‌ನಲ್ಲಿ 100 ಜನರನ್ನು ಸಮೀಕ್ಷೆಗೆ ಒಳಪಡಿಸಿದಾಗ ಶೇ. 30 ಮಂದಿ ಪೂರ್ಣ ಪ್ರಮಾಣದಲ್ಲಿ, ಶೇ. 20 ಮಂದಿ ಅರೆಬರೆ ಧರಿಸಿದ್ದು, ಶೇ. 50 ಮಂದಿ ಧರಿಸಿರಲಿಲ್ಲ. ಸಿಬಂದಿ ಪೈಕಿ ಹೆಚ್ಚಿನವರು ಧರಿಸಿದ್ದರು. ಸಾಮಾಜಿಕ ಅಂತರ ಪಾಲನೆಯೂ ಕಂಡುಬರಲಿಲ್ಲ.

ಪಾರ್ಕ್‌
ಪಾರ್ಕ್‌ಗಳಲ್ಲಿ 100 ಮಂದಿಯ ಸಮೀಕ್ಷೆ ನಡೆಸಿದಾಗ ಶೇ. 18 ಮಂದಿ ಪೂರ್ಣ ಪ್ರಮಾಣದಲ್ಲಿ ಮಾಸ್ಕ್ ಧರಿಸಿದ್ದರು. ಶೇ. 50 ಮಂದಿ ಅರೆಬರೆ ಮಾಸ್ಕ್ ಧರಿಸಿದ್ದರೆ, ಶೇ. 32 ಮಂದಿ ಮಾಸ್ಕ್ ಧರಿಸಿರಲಿಲ್ಲ. ಇಲ್ಲಿ ಸರಕಾರಿ ಸಿಬಂದಿಯಾಗಲಿ, ಪೊಲೀಸರಾಗಲಿ ಕಂಡುಬರಲಿಲ್ಲ. ಸಾಮಾಜಿಕ ಅಂತರ ಪಾಲನೆಯೂ ಇರಲಿಲ್ಲ.

ಆಸ್ಪತ್ರೆ
ಆಸ್ಪತ್ರೆಗಳಲ್ಲಿ 100 ಮಂದಿಯ ಸಮೀಕ್ಷೆ ನಡೆಸಿದಾಗ ಶೇ. 75 ಮಂದಿ ಮಾಸ್ಕ್ ಪೂರ್ಣವಾಗಿ ಹಾಕಿರುವುದು ಕಂಡು ಬಂತು.ಶೇ. 20ರಷ್ಟು ಮಂದಿ ಅರೆಬರೆ ಮತ್ತು ಶೇ. 5 ಮಂದಿ ಮಾಸ್ಕ್ ಧರಿಸಿರಲಿಲ್ಲ. ಸಿಬಂದಿ ಮತ್ತು ಅಲ್ಲಿದ್ದ ಪೊಲೀಸರು ಧರಿಸಿದ್ದರು. ಸಾಮಾಜಿಕ ಅಂತರ ಪಾಲನೆ ಭಾಗಶಃ ಇತ್ತು. ಮಾಸ್ಕ್ ಧರಿಸದವರಿಗೆ ಧರಿಸುವಂತೆ ಸಿಬಂದಿ ಸೂಚನೆ ನೀಡುತ್ತಿರುವುದು ಕಂಡುಬಂತು.

ಕಾಲೇಜು
ಕಾಲೇಜು ಪರಿಸರದಲ್ಲಿನ 100 ಮಂದಿಯನ್ನು ಸಮೀಕ್ಷೆ ನಡೆಸಿದಾಗ ಶೇ. 60 ಮಂದಿ ಮಾಸ್ಕ್ ಧರಿಸಿದ್ದರು. ಶೇ. 25 ಮಂದಿ ಅರೆಬರೆ ಮಾಸ್ಕ್ ಧರಿಸಿದ್ದರು. ಶೇ. 15 ಮಂದಿ ಮಾಸ್ಕ್ ಧರಿಸಿರಲಿಲ್ಲ. ಕಾಲೇಜು ಆವರಣದಲ್ಲಿ ಸಿಬಂದಿ ಮಾಸ್ಕ್ ಧರಿಸುವಂತೆ ಸೂಚಿಸುತ್ತಿದ್ದರು. ಸಿಬಂದಿಗಳೆಲ್ಲ ಮಾಸ್ಕ್ ಧರಿಸಿದ್ದರು. ಒಟ್ಟು 7 ವಿದ್ಯಾರ್ಥಿಗಳು ಒಟ್ಟು 700 ಜನರ ಸಮೀಕ್ಷೆ ನಡೆಸಿದ್ದರು.

ಸಮೀಕ್ಷೆಯಲ್ಲಿ ಭಾಗವಹಿಸಿದವರು: ಮಂಗಳೂರು ವಿ.ವಿ. ಕಾಲೇಜಿನ ವಿದ್ಯಾರ್ಥಿಗಳು: ಲತೇಶ್‌ ಸಾಂತ, ಗುರುದೇವ್‌ ಡಿ. ಪೂಜಾರಿ, ಹಿತಾಕ್ಷಿ, ವಿಧಿಶ್ರೀ, ಶೈನಿತಾ ಆರ್‌.ಎಸ್‌., ಸಿಂಚನಾ ಪಿ.ಜೆ., ನಿಸರ್ಗಾ ಕೆ., ಪ್ರತೀಕ್ಷಾ, ಮೆರ್ವಿನ್‌ ಸ್ಪಿನೊಜಾ, ಶಿವಪ್ರಸಾದ್‌ ಬೊಳಂತೂರು, ನಿವೇದಿತಾ, ದೀಪಾ, ಪ್ರತೀಕ್ಷಾ, ಸಹನಾ. ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು: ನಿಕ್ಷಿತಾ, ಸುರಕ್ಷಾ ದೇವಾಡಿಗ, ದೀಪಿಕಾ, ಕೆ.ಎಸ್‌. ಕಾರ್ತಿಕ್‌, ನವ್ಯಶ್ರೀ ಶೆಟ್ಟಿ, ಜೈದೀಪ್‌ ಪೂಜಾರಿ, ಷಣ್ಮುಖ.

Advertisement

Udayavani is now on Telegram. Click here to join our channel and stay updated with the latest news.

Next