ತುಮಕೂರು: ವಿಶ್ವದಲ್ಲಿ ಕೋವಿಡ್ 19 ವೈರಸ್ ಹೆಚ್ಚುತ್ತಲೇ ಎಲ್ಲಾ ಕಡೆ ಮಾಸ್ಕ್ಗಳಿಗೆ ಭಾರೀ ಬೇಡಿಕೆ ಬಂದು ಮಾರುಕಟ್ಟೆಯಲ್ಲಿ ಎಲ್ಲಿಯೂ ಮಾಸ್ಕ್ ಸಿಗದ ವೇಳೆಯಲ್ಲಿ ಕಲ್ಪತರು ನಾಡಿನ ಮಹಿಳಾ ಸ್ವ ಸಹಾಯ ಗುಂಪುಗಳು ಮಾಸ್ಕ್ ತಯಾರು ಮಾಡಲು ಮುಂದಾಗಿ ಯಶಸ್ಸು ಕಂಡಿದ್ದು ಈಗ ಮಹಿಳೆಯರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಕೋವಿಡ್ 19 ಸೋಂಕು ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಮುಖಗವಸು (ಮಾಸ್ಕ್) ಧರಿಸು ವುದೂ ಸಹ ಉತ್ತಮ ಮಾರ್ಗವಾಗಿರುವುದರಿಂದ ಜಿಲ್ಲೆಯ ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ ಮಹಿಳಾ ಸ್ವ-ಸಹಾಯ ಗುಂಪುಗಳು ಮುಖಗವಸು ತಯಾರಿಕೆಗೆ ಮುಂದಾಗಿವೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಸ್ಥೆ ಯ ಸಂಜೀವಿನಿ ಯೋಜನೆಯಡಿ ರಚಿಸಿರುವ ಗ್ರಾಪಂ ಒಕ್ಕೂಟಗಳ ಈ ಮಹಿಳಾ ಸ್ವಸಹಾಯ ಗುಂಪುಗಳ ಸುಮಾರು 60 ಸದಸ್ಯರು ಮಾಸ್ಕ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಲಾಕ್‌ಡೌನ್ ಜಾರಿ ಸಂದರ್ಭದಲ್ಲಿ ಕೈಕಟ್ಟಿ ಕೂರದ ಗುಂಪಿನ ಸದಸ್ಯರು ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್ ತಯಾರಿಕೆಯಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯವಾಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕು ಜೆ.ಸಿ.ಪುರದ ಶ್ರೀ ದಿವ್ಯಜ್ಯೋತಿ ಸಂಜೀವಿನಿ ಒಕ್ಕೂಟ, ದೊಡ್ಡ ಬಿದರೆ ಗ್ರಾಮದ ಜ್ಞಾನಜ್ಯೋತಿ ಸಂಜೀವಿನಿ, ಕೆಂಕೆರೆಯ ಓಂಕಾರ ಸಂಜೀವಿನಿ ಒಕ್ಕೂಟ, ಮುದ್ದೇನಹಳ್ಳಿಯ ಜೀವನ್ಮುಖೀ ಸಂಜೀವಿನಿ ಒಕ್ಕೂಟ, ಹಂದನಕೆರೆಯ ಸಾಧನ ಸಂಜೀವಿನಿ ಒಕ್ಕೂಟ, ಚೌಳಕಟ್ಟೆಯ ಸಮೃದ್ಧಿ ಸಂಜೀವಿನಿ ಒಕ್ಕೂಟ ಹಾಗೂ ತಿಪಟೂರು ತಾಲೂಕು ಈಚನೂರು ಅಮೃತಬಿಂದು ಸಂಜೀವಿನಿ ಒಕ್ಕೂಟ, ಕರಡಿ ಗ್ರಾಮದ ಚೇತನ ಸಂಜೀವಿನಿ ಒಕ್ಕೂಟ, ಬಿಳಿಗೆರೆಯ ಸ್ಪಂದನ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು ಮಾಸ್ಕ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲಾಧಿಕಾರಿಗಳಿಂದ ಮೆಚ್ಚುಗೆ: ವಿವಿಧ ಸರ್ಕಾರಿ ಕಚೇರಿಗಳ ಅಧಿಕಾರಿ, ಸಿಬ್ಬಂದಿಗೆ ವಿತರಿಸಲು ಜಿಲ್ಲಾಡಳಿತ ಹಾಗೂ ಜಿಪಂ ಆದೇಶದಂತೆ ಈಗಾಗಲೇ 10 ಸಾವಿರ ಮಾಸ್ಕ್ ಗಳನ್ನು ಸ್ವ-ಸಹಾಯ ಸಂಘಗಳು ತಯಾರಿಸಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಆರೋಗ್ಯಕ್ಕೆ ಹಾನಿಕರಕ ವಲ್ಲದ ಕಾಟನ್ ಬಟ್ಟೆಯಿಂದ ಕೂಡಿರುವ ಮಾಸ್ಕ್ಗಳ ಬಗ್ಗೆ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಮತ್ತಷ್ಟು ಮಾಸ್ಕ್ಗಳ ತಯಾರಿಕೆಗೆ ಸೂಚನೆ ನೀಡಿದ್ದಾರೆ.
ಮುಖಗವಸು ವಿತರಣೆ: ಮೊದಲ ಹಂತದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅದರಡಿ ಬರುವ ಎಲ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಹಾಗೂ ಅಂಗನವಾಡಿ ಕೇಂದ್ರಗಳಿಗೆ 6,800, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ 1,000, ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಕಚೇರಿಗೆ 1,000, ಜಿಲ್ಲಾ ಪಂಚಾಯತಿಯ ಅಧಿಕಾರಿ ಸಿಬ್ಬಂದಿಗೆ 500 ಮತ್ತಿತರೆ ಇಲಾಖೆ ಗಳಿಗೆ 700 ಮಾಸ್ಕ್ಗಳನ್ನು ವಿತರಿಸಲಾಗಿದೆ. ಕೋವಿಡ್ 19 ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಜಿಪಂ ಸಿಇಒ ಶುಭಾ ಕಲ್ಯಾಣ್, ಉಪ ಕಾರ್ಯದರ್ಶಿ (ಅಭಿವೃದ್ಧಿ) ಟಿ.ಕೆ.ರಮೇಶ್ ಜಂಟಿಯಾಗಿ ತಿಳಿಸಿದ್ದಾರೆ.
-ಚಿ.ನಿ.ಪುರುಷೋತ್ತಮ್