Advertisement

ಬೂತ್‌ಮಟ್ಟದಲ್ಲಿ ಮಾಸ್ಕ್ ತಯಾರಿಕಾ ಅಭಿಯಾನ

02:12 PM Apr 17, 2020 | mahesh |

ಬೆಂಗಳೂರು: ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಿಂದ ಪ್ರತಿ ಬೂತ್‌ಗಳಲ್ಲಿ ಕಾರ್ಯಕರ್ತರ ಮೂಲಕ ಮಾಸ್ಕ್ ಸಿದ್ಧಪಡಿಸಿ, ಬಡವರಿಗೆ ವಿತರಿಸಲು ನಿರ್ಧರಿಸಲಾಗಿದೆ.

Advertisement

ರಾಜ್ಯದಲ್ಲಿ ಸುಮಾರು 58ಸಾವಿರ ಬೂತ್‌ಗಳಿದ್ದು, ಪ್ರತಿ ಎರಡು ಬೂತೆಗೆ ಒರ್ವ ಕೋವಿಡ್-19, ಜಾಗೃತಿ ಪ್ರಮುಖ್‌ ನೇಮಕ ಮಾಡಲಾಗಿದೆ. ಇವರು ಬೂತ್‌ ಮಟ್ಟದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಹೊಂದುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್ ಸಿದ್ಧಪಡಿಸುವ ಕಾರ್ಯ ಆರಂಭವಾಗಿದೆ ಎಂದು ರಾಜ್ಯ
ಬಿಜೆಪಿ ಮೂಲಗಳು ಉದಯವಾಣಿಗೆ ಖಚಿತಪಡಿಸಿವೆ. ಪ್ರತಿ ಬೂತ್‌ಗಳಲ್ಲಿ ಕನಿಷ್ಠ 500ರಿಂದ 2ಸಾವಿರದ ವರೆಗೂ ಮಾಸ್ಕ್ ಸಿದ್ಧಪಡಿಸಲು ನಿರ್ದೇಶನ ನೀಡಲಾಗಿದೆ. ಅದರಂತೆ ಮಾಸ್ಕ್ ಸಿದ್ಧಪಡಿಸುವ ಕಾರ್ಯವೂ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯ ಮುಖಂಡರೊಬ್ಬರು ಮಾಹಿತಿ ನೀಡಿದರು. ಬೂತ್‌ಗಳಲ್ಲಿ ಯಾರ ಮನೆಗಳಲ್ಲಿ ಹೊಲಿಗೆ ಯಂತ್ರ ಇದೆ ಎಂಬುದರ ಮಾಹಿತಿ ಪಡೆಯಲಾಗಿದೆ. ಇವುಗಳಲ್ಲಿ ಅವರಾಗಿಯೇ ಮಾಸ್ಕ್ ಸಿದ್ಧಪಡಿಸುವವರನ್ನು ಗುರುತಿಸಲಾಗಿದೆ. ಅದರ ಜತೆಗೆ ಬಿಜೆಪಿಯಿಂದಲೇ ಮಾಸ್ಕ್ ಸಿದ್ಧಪಡಿಸಲು ಬಟ್ಟೆಯ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಬೂತ್‌ ಗಳಲ್ಲೇ ವಿತರಣೆ: ಬಿಜೆಪಿಯಿಂದ ಮಾಸ್ಕ್
ಸಿದ್ಧಪಡಿಸುವ ದೊಡ್ಡ ಮಟ್ಟದ ಅಭಿಯಾನ ಆರಂಭವಾಗಿದೆ. ಆಯಾ ಬೂತ್‌ಗಳಲ್ಲಿ ಸಿದ್ಧಪಡಿಸಿದ ಮಾಸ್ಕ್ಗಳನ್ನು ಸ್ಥಳೀಯವಾಗಿಯೇ ವಿತರಣೆ ಮಾಡಲಾಗುತ್ತದೆ. ಮಾಸ್ಕ್ ಕೊರತೆಯಾದ ಸಂದರ್ಭದಲ್ಲಿ ಸಮೀಪದ ಬೂತ್‌ಗಳಿಂದ ಎರವಲು ಪಡೆಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಮಾಸ್ಕ್ ಯಾರಿಗೆ ನೀಡಬೇಕು ಎಂಬುದರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು, ಬೂತ್‌ ನಲ್ಲಿರುವ ಬಡವರು,  ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಆದ್ಯತೆ ಮೇರೆಗೆ ಮಾಸ್ಕ್
ವಿತರಣೆ ಮಾಡಲಿದ್ದೇವೆ. ಮಾಸ್ಕ್ ಬಳಕೆ ಹೇಗೆ ಮತ್ತು ಪುನರ್‌ ಬಳಕೆ ಕುರಿತ ಮಾಹಿತಿ ನೀಡಲಾಗುವುದು ಎಂದರು.

ಮಾಸ್ಕ್ ತಯಾರಿ: ಬಿಜೆಪಿಯ ಮಹಿಳಾ ಮೋರ್ಚಾದ ಸದಸ್ಯೆರು ಬೂತ್‌, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಂತರ ಕಾಯ್ದುಕೊಂಡು ಮಾಸ್ಕ್ ತಯಾರಿಸುವ ಕಾರ್ಯದಲ್ಲಿ ತಲ್ಲಿನರಾಗಿದ್ದಾರೆ. ಮಾಸ್ಕ್ ನ ಅಗತ್ಯ ಹೆಚ್ಚಿರುವುದರಿಂದ ದೊಡ್ಡ ಪ್ರಮಾಣದಲ್ಲೇ ಮಾಸ್ಕ್ ತಯಾರಿಸುವ ಕಾರ್ಯ ನಡೆಯುತ್ತಿದೆ ಎಂದು ಮಹಿಳಾ ಮೋರ್ಚಾ ತಿಳಿಸಿದೆ. ಬಿಜೆಪಿಯಿಂದ ಈಗಾಗಲೇ 15.60ಲಕ್ಷಕ್ಕೂ ಅಧಿಕ ಮಾಸ್ಕ್ಗಳ ವಿತರಣೆ ಮಾಡಿಯಾಗಿದೆ. ಹಾಗೆಯೇ ಬಡವರಿಗೆ, ನಿರ್ಗತಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಆಹಾರದ ಕಿಟ್‌, ಊಟದ ಪೊಟ್ಟಣ ನೀಡಿವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ಆಯುಷ್‌ ಸಲಹೆ
ನಮ್ಮಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದು ಹೇಗೆ ಎಂಬುದರ ಕುರಿತಂತೆ ಆಯುಷ್‌ ಇಲಾಖೆ ಈಗಾಗಲೇ ಆಯುರ್ವೇದ ಸಲಹೆಗಳನ್ನು ನೀಡಿದೆ. ಇದನ್ನು ಅನುಸರಿ ಸುವಂತೆ ಪ್ರಧಾನಿ ಮೋದಿಯವರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಇದರ ವ್ಯಾಪಕ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ನಿಯಮಿತವಾಗಿ ಬಿಸಿನೀರು ಕುಡಿಯುವುದು, ಯೋಗಾಸನ ಪ್ರಾಣಾಯಾಮ, ಕಷಾಯ ಇತ್ಯಾದಿ ಜತೆಗೆ ಆಹಾರದಲ್ಲಿ ಅರಶಿನ, ಜಿರಿಗೆ, ಧನಿಯಾ, ಬೆಳ್ಳುಳ್ಳಿ ಹೆಚ್ಚು ಬಳಸುವುದು ಸೇರಿ ಆಯುಷ್‌ ಮಾರ್ಗಸೂಚಿಯ ಮಾಹಿತಿ, ಆಹಾರ ಸಾಮಗ್ರಿ ವಿತರಣೆ ಸಂದರ್ಭದಲ್ಲಿ ನೀಡಲಿದ್ದಾರೆ.

Advertisement

ಬಿಜೆಪಿಯಿಂದ ಬೂತ್‌ ಮಟ್ಟದಲ್ಲಿ ಮಾಸ್ಕ್ ತಯಾರಿಸುವ ದೊಡ್ಡ ಯೋಜನೆ ರೂಪಸಿದ್ದೇವೆ. ಇದಕ್ಕಾಗಿ ಪ್ರಮುಖರ ನೇಮಕ ಮಾಡಿದ್ದೇವೆ. ಪ್ರತಿ ಬಡವರಿಗೂ ಮಾಸ್ಕ್ ದೊರೆಯುವಂತೆ ಆಗಬೇಕು. ಬಡವರಿಗೆ, ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ಮಾಸ್ಕ್ ಜತೆಗೆ ಅಗತ್ಯ ಆಹಾರ
ಸಾಮಗ್ರಿ ಕಿಟ್‌ ಕೂಡ ನೀಡುತ್ತಿದ್ದೇವೆ.
ಎನ್‌.ರವಿಕುಮಾರ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next