ಹುಬ್ಬಳ್ಳಿ: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಅನೇಕರ ಬದುಕಿಗೆ ಮಾಸ್ಕ್ ತಯಾರಿಕೆ ವೃತ್ತಿ ಮಹತ್ವದ ಆಸರೆಯಾಗಿದೆ. ತಾಲೂಕಿನ ಶಿರಗುಪ್ಪಿ ಗ್ರಾಮದ ಸಿರಿ ಫೌಂಡೇಶನ್ ಇಂತಹ ಅವಕಾಶವನ್ನು ಹಲವರಿಗೆ ಕಲ್ಪಿಸುವ ಕಾರ್ಯ ಮಾಡುತ್ತಿದೆ.
ಜಿಪಂ ಮಾಜಿ ಅಧ್ಯಕ್ಷೆ ಚೈತ್ರಾ ಶಿರೂರು ಅವರು ಸ್ವಗ್ರಾಮದಲ್ಲಿ ಈ ಕಾರ್ಯದಲ್ಲಿ ತೊಡಗಿದ್ದಾರೆ. ಲಾಕ್‌ಡೌನ್ ಆರಂಭವಾದಾಗಿನಿಂದ ಇಲ್ಲಿಯವರೆಗೆ 50 ಸಾವಿರಕ್ಕೂ ಹೆಚ್ಚು ಮಾಸ್ಕ್ಗಳನ್ನು ತಯಾರಿಸಿ, ದುಡಿಯುವ ಕೈಗಳಿಗೆ ಕೆಲಸ ನೀಡುವುದರೊಂದಿಗೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ತೊಡಗಿದ್ದಾರೆ. ಸೇನಾನಿಗಳಿಗೆ ಉಚಿತವಾಗಿ ಹಂಚುವ ಮೂಲಕ ಪರೋಕ್ಷವಾಗಿ ಕೊರೊನಾ ಹೋರಾಟಕ್ಕೆ ನೆರವಾಗಿದ್ದಾರೆ.
ಟೇಲರಿಂಗ್ ಕ್ಷೇತ್ರದಲ್ಲಿ ನೈಪುಣ್ಯತೆ ಹೊಂದಿರುವ ಚೈತ್ರಾ ಶಿರೂರು ರಾಜಕೀಯ ಜತೆಗೆ ಇದನ್ನು ಮುಂದುವರಿಸಿಕೊಂಡು ಹೋಗಬೇಕೆನ್ನುವ ಕಾರಣದಿಂದ ಸಿರಿ ಫೌಂಡೇಶನ್ ಮೂಲಕ ಗ್ರಾಮದ ಯುವತಿಯರಿಗೆ ಟೇಲರಿಂಗ್, ಕಸೂತಿ ಸೇರಿದಂತೆ ಇನ್ನಿತರೆ ತರಬೇತಿ ಹಾಗೂ ಸಣ್ಣ ಪ್ರಮಾಣದ ಗಾರ್ಮೆಂಟ್ ಆರಂಭಿಸಿದ್ದರು.
ಹೊಸದಾಗಿ 35 ವಿದ್ಯುತ್ ಚಾಲಿತ ಯಂತ್ರಗಳನ್ನು ಅಳವಡಿಸಿದ್ದರು. ಇನ್ನೇನು ಕಾರ್ಯ ಆರಂಭಿಸಬೇಕೆನ್ನುವ ಹಂತದಲ್ಲಿ ಕೊರೊನಾ ಮಹಾಮಾರಿ ಒಕ್ಕರಿಸಿಕೊಂಡಿತು. ಲಾಕ್‌ಡೌನ್ ಮುಗಿಯುವವರೆಗೂ ಇದನ್ನು ಬಂದ್ ಮಾಡುವ ಬದಲು ಅಗತ್ಯ ಮಾಸ್ಕ್ ತಯಾರಿಕೆಗೆ ಬಳಸಿಕೊಂಡರೆ ಉತ್ತಮ ಎಂದು ನಿರ್ಧರಿಸಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಸಾಮಾಜಿಕ ಅಂತರದಲ್ಲಿ ಹೊಲಿಗೆ ಯಂತ್ರಗಳನ್ನು ಅಳವಡಿಸಿ ಆರಂಭದಲ್ಲಿ ಸ್ನೇಹಿತೆಯರಷ್ಟೇ ಮಾಸ್ಕ್ ಹೊಲಿಯಲು ಆರಂಭಿಸಿದ್ದರು. ಸುಮಾರು 15 ಮಹಿಳೆಯರು ನಿತ್ಯವೂ ಮಾಸ್ಕ್ ತಯಾರಿಸುವಲ್ಲಿ ನಿರತರಾಗಿದ್ದಾರೆ. ಇವರಿಗೆ ಬೆಂಬಲವಾಗಿ ಚೈತ್ರಾ ಶಿರೂರ ಅವರ ಸ್ನೇಹಿತೆಯರೂ ಕೈಜೋಡಿಸಿದ್ದಾರೆ. ಈಗಾಗಲೇ ಸುಮಾರು 50 ಸಾವಿರಕ್ಕೂ ಹೆಚ್ಚು ಮಾಸ್ಕ್ ಸಿದ್ಧಪಡಿಸಿದ್ದು, 25 ಮಾಸ್ಕ್ ಮಾರಾಟವಾಗಿದ್ದು,
5 ಸಾವಿರಕ್ಕೂ ಹೆಚ್ಚು ಮಾಸ್ಕ್ಗಳನ್ನು ಕೋವಿಡ್ ವಿರುದ್ಧ ಹೋರಾಟಗಾರರಿಗೆ ಉಚಿತವಾಗಿ ವಿತರಿಸಿದ್ದಾರೆ.
ದುಡಿಯುವ ಕೈಗಳಿಗೆ ಕೆಲಸ: ಒಂದು ಮಾಸ್ಕ್ ತಯಾರಿಸಲು 2ರೂ. ನಿಗದಿ ಮಾಡಿದ್ದು, ನಿತ್ಯ ಕೆಲವರು 200-300 ಮಾಸ್ಕ್ ಸಿದ್ಧಪಡಿಸುತ್ತಿದ್ದಾರೆ. ಕನಿಷ್ಠ 400 ರೂ. ನಿತ್ಯ ಸಂಭಾವನೆ ಪಡೆಯುತ್ತಿದ್ದಾರೆ. ಟೇಲರಿಂಗ್ ಜ್ಞಾನವಿಲ್ಲದ ಯುವತಿಯರಿಗೂ ಮಾಸ್ಕ್ ತಯಾರಿಸುವ ತರಬೇತಿ ನೀಡಲಾಗಿದ್ದು, ಅವರು ಕೂಡ ಮಾಸ್ಕ್ ಸಿದ್ಧಪಡಿಸುತ್ತಿದ್ದಾರೆ. 15 ಕುಟುಂಬಗಳಿಗೆ ಇದರಿಂದ ಆದಾಯವೇ ಆಸರೆಯಾಗಿದೆ. ಮಾಸ್ಕ್ಗಳನ್ನು 8,10 ಹಾಗೂ 15ರೂ. ಒಂದರಂತೆ ಮಾರಾಟ ಮಾಡಿದ್ದಾರೆ. ಆಕಸ್ಮಿಕವಾಗಿ ನಡೆಯುತ್ತಿರುವ ಮಾಸ್ಕ್ ತಯಾರಿಕೆಯಲ್ಲಿ ಯಾವುದೇ ಲಾಭ ನಿರೀಕ್ಷಿಸಿಲ್ಲ. ಕಚ್ಚಾ ಸಾಮಗ್ರಿ, ತಯಾರಿಸುತ್ತಿರುವವರ ಸಂಭಾವನೆ, ವಿದ್ಯುತ್ ಬಿಲ್ ತಗಲುವ ವೆಚ್ಚಕ್ಕೆ ಸಮ ಮಾಡಲಾಗುತ್ತಿದೆ. ಕೆಲ ಎನ್‌ಜಿಒಗಳವರು ಖರೀದಿಸುತ್ತಿದ್ದಾರೆ ಎನ್ನುತ್ತಾರೆ ಜಿಪಂ ಸದಸ್ಯೆ ಚೈತ್ರಾ ಶಿರೂರು.
ಲಾಕ್‌ಡೌನ್ ಪರಿಣಾಮ ಉಚಿತ ತರಬೇತಿ ಹಾಗೂ ಗಾರ್ಮೆಂಟ್ ಆರಂಭಿಸುವ ಉದ್ದೇಶ ಈಡೇರಲ್ಲ. ಕೊರೊನಾ ವಿರುದ್ಧದ ಹೋರಾಟಕ್ಕೆ ಇದನ್ನು ಬಳಸಿಕೊಳ್ಳೋಣ ಎಂದು ನಿರ್ಧರಿಸಿ ಮಾಸ್ಕ್ ತಯಾರಿಸಲು ಆರಂಭಿಸಿದೆವು. ಕೆಲವರಿಗೆ ಉದ್ಯೋಗ ನೀಡುವುದರ ಜತೆಗೆ ಕೋವಿಡ್ ವಿರುದ್ಧದ ಹೋರಾಟಕ್ಕೆ ಕೊಂಚ ನಮ್ಮ ಸೇವೆಯಾಗಿದೆ. ದುಡಿಮೆಯೊಂದಿಗೆ ಕೊರೊನಾ ಹೋರಾಟದಲ್ಲಿ ತೊಡಗಿರುವವರಿಗೆ ಉಚಿತ ಹಂಚಲಾಗಿದೆ.
ಚೈತ್ರಾ ಶಿರೂರು, ಕಾರ್ಯದರ್ಶಿ, ಸಿರಿ ಫೌಂಡೇಶನ್
ಒಂದಿಷ್ಟು ಕುಟುಂಬಗಳಿಗೆ ಆಸರೆಯಾಗಬೇಕೆನ್ನುವ ಕಾರಣಕ್ಕೆ ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದೇವೆ. ಉತ್ತಮ ಗುಣಮಟ್ಟದ ಮಾಸ್ಕ್ಗಳಿದ್ದು, ಮಾರುಕಟ್ಟೆ ನಮಗೆ ಹೊಸ ಕ್ಷೇತ್ರ. ಹೀಗಾಗಿ ಸಿದ್ಧಪಡಿಸಿರುವ ಇನ್ನಷ್ಟು ಮಾಸ್ಕ್ಗಳು ಉಳಿದಿದ್ದು, ಯಾರಾದರೂ ಖರೀದಿಸಿದರೆ ಮತ್ತಷ್ಟು ಮಹಿಳೆಯರಿಗೆ ಕೆಲಸ ಕೊಡಬಹುದು.
ಗಂಗಾ ಶಿರಗುಪ್ಪಿ, ಅಧ್ಯಕ್ಷರು, ಸಿರಿ ಫೌಂಡೇಶನ್
ಲಾಕ್‌ಡೌನ್ ಪರಿಣಾಮ ಮನೆ ಕೆಲಸ ಮುಗಿಸಿದ ಮೇಲೆ ಬೇರಾವ ಕೆಲಸಗಳು ಇರುತ್ತಿಲ್ಲ. ಸಿರಿ ಫೌಂಡೇಶನ್ ವತಿಯಿಂದ ಕೆಲಸ ನೀಡುವ ಮೂಲಕ ನಮಗೆ
ಆಸರೆಯಾಗಿದೆ. ನಮ್ಮ ದುಡಿಮೆಗೆ ತಕ್ಕಂತೆ ಕೂಲಿ ದೊರೆಯುತ್ತಿದೆ. ದುಡಿಮೆಗೆ ಏನು ಮಾಡಬೇಕೆಂದು ಚಿಂತಿಸುತ್ತಿರುವ ಸಂದರ್ಭದಲ್ಲಿ ಕುಟುಂಬಕ್ಕೆ ಈ ದುಡಿಮೆ
ಆಧಾರವಾಗಿದೆ.
ಗೀತಾ ಧರ್ಮಣ್ಣನವರ, ಶಿರಗುಪ್ಪ ನಿವಾಸಿ
ಹೇಮರಡ್ಡಿ ಸೈದಾಪುರ