ಹಾವೇರಿ: ಕೋವಿಡ್ ಸೋಂಕಿನಿಂದ ಸುರಕ್ಷತೆ ಕಾಪಾಡಿಕೊಳ್ಳಲು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಈ ಕುರಿತು ಮೊದಲು ಜಾಗೃತಿ ಹಮ್ಮಿಕೊಳ್ಳಲಾಗುತ್ತಿದ್ದು, ನಂತರದ ದಿನಗಳಲ್ಲಿ ಮಾಸ್ಕ್ ಧರಿಸದವರಿಗೆ ದಂಡ ಹಾಕಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದರು.
ಮಾಸ್ಕ್ ದಿನ ನಿಮಿತ್ತ ಮಾಸ್ಕ್ ಜಾಗೃತಿ ಜಾಥಾಕ್ಕೆ ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಹಸಿರು ನಿಶಾನೆ ತೋರಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಸ್ಥಳೀಯ ಆಡಳಿತಗಳ ಮೂಲಕ ಮಾಸ್ಕ್ ಧರಿಸುವ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಅರಿವು ಮೂಡಿಸಿದ ನಂತರ ಮಾಸ್ಕ್ ಧರಿಸದೇ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಿ ಕ್ರಮ ಜರುಗಿಸಲಾಗುತ್ತದೆ. ಈಗಾಗಲೇ ಮಾಸ್ಕ್ ಧರಿಸದೇ ನಿಯಮ ಉಲ್ಲಂಘಿಸಿದವರಿಗೆ 100 ರೂ. ದಂಡ ವಿಧಿಸಲು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಇಂತಹದೇ ಮಾಸ್ಕ್ ಹಾಕಬೇಕೆಂಬ ಕಡ್ಡಾಯವಿಲ್ಲ. ಮನೆಯಲ್ಲಿಯೇ ಬಟ್ಟೆಯ ಮಾಸ್ಕ್ ತಯಾರಿಸಿಕೊಂಡು ಬಳಕೆ ಮಾಡಬಹುದು. ಮಾರುಕಟ್ಟೆಯಲ್ಲಿ ಅನೇಕ ಬಣ್ಣ ಬಣ್ಣದ ಮಾಸ್ಕ್ ಬಂದಿವೆ. ಜನರು ಮಾಸ್ಕ್ಗಳನ್ನು ಖರೀದಿಸಿ ಕಡ್ಡಾಯವಾಗಿ ಧರಿಸಬೇಕು. ನಿಯಮಿತವಾಗಿ ಸ್ಯಾನಿಟೈಸರ್ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮಾಸ್ಕ್ ಧರಿಸುವ ಕುರಿತಂತೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕಂಟೇನ್ಮೆಂಟ್ ಜೋನ್‌ನಲ್ಲಿ ಕಾರ್ಯನಿರ್ವಹಿಸುವವರಿಗೆ ಹಾಗೂ ಆರೋಗ್ಯ ತಪಾಸಣೆಗೆ ಮನೆ ಮನೆಗೆ ಭೇಟಿ ನೀಡುವವರಿಗೆ, ಫೀವರ್ ಕ್ಲಿನಿಕ್‌ನಲ್ಲಿ ಕಾರ್ಯ ನಿರ್ವಹಿಸುವವರಿಗೆ, ಐಸೋಲೇಷನ್ ವಾರ್ಡ್ ಹಾಗೂ ಕೋವಿಡ್ ಚಿಕಿತ್ಸೆಯಲ್ಲಿ ನಿರತರಾದವರಿಗೆ ಪಿಪಿಇ ಕಿಟ್ ಮತ್ತು ಎನ್ -95 ಮಾಸ್ಕ್ ನೀಡಲಾಗುತ್ತಿದೆ. ಇತರರಿಗೆ ಸಾಮಾನ್ಯ ಮಾಸ್ಕ್ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಂದ್ರ ದೊಡ್ಮನಿ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪಿ.ಎಸ್. ಹಾವನೂರ ಮಾತನಾಡಿ, ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಮಾಸ್ಕ್ ಧರಿಸುವ ಅಗತ್ಯ, ನಿಯಮಿತ ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಂದೇಶವನ್ನು ಸಾರ್ವಜನಿಕರಿಗೆ ಸಾರುವ ಉದ್ದೇಶ ಹಾಗೂ ಮಾಸ್ಕ್ನ ಉಪಯೋಗದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಸ್ಕ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ರೆಡ್‌ಕ್ರಾಸ್ ವತಿಯಿಂದ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ ಮಾಡಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜ, ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ| ದಿಲೀಷ್ ಶಶಿ, ತಹಶೀಲ್ದಾರ್ ಶಂಕರ, ಜಿಲ್ಲಾ ವಾರ್ತಾಧಿಕಾರಿ ಡಾ| ಬಿ.ಆರ್. ರಂಗನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರಭಾಕರ ಕುಂದೂರ, ಡಾ| ವಿಶ್ವನಾಥ್, ತಾಪಂ ಇಒ ಬಸವರಾಜಪ್ಪ, ನಗರಸಭೆ ಆಯುಕ್ತ ಬಸವರಾಜ ಜಿದ್ದಿ, ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಡಾ| ನಿಲೇಶ ಇತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.