ಚಿತ್ರದುರ್ಗ: ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಸೂಚನೆಯಂತೆ ಗುರುವಾರ ಮಾಸ್ಕ್ ದಿನಾಚರಣೆಗೆ ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ನಗರಸಭೆ ಆವರಣದಲ್ಲಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕೋವಿಡ್ ವೈರಸ್ ಕಾರಣಕ್ಕೆ ಕೈ ಕುಲುಕುವುದನ್ನು ಬಿಟ್ಟು ನಮಸ್ಕಾರ ಮಾಡುವುದನ್ನು ಕಲಿತಿದ್ದೇವೆ. ಹೊರಗಿನಿಂದ ನೇರವಾಗಿ ಮನೆಗೆ ಬರದೆ, ಕೈಕಾಲು ಮುಖ ತೊಳೆದುಕೊಂಡು ಬರುತ್ತಿದ್ದೇವೆ. ಇದ್ಯಾವುದು ಹೊಸದಲ್ಲ. ನಮ್ಮ ಸಂಸ್ಕೃತಿ. ಮರೆತಿದ್ದನ್ನು ಮತ್ತೆ ನೆನಪಿಸಿಕೊಳ್ಳಬೇಕಾಗಿದೆ ಎಂದರು.
ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಮಾತನಾಡಿ, ಕೋವಿಡ್ ನಿಯಂತ್ರಣ ಎಲ್ಲರ ಜವಾಬ್ದಾರಿ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯವಾಗಬೇಕು.ಮೂರು ದಿನಕ್ಕೊಮ್ಮೆ ಮಾಸ್ಕ್ ಬದಲಾಯಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಮಾತನಾಡಿ, ಲಾಕ್ ಡೌನ್ ಸಡಿಲಿಸಿದ ಮಾತ್ರಕ್ಕೆ ಕೋವಿಡ್ ಸಂಪೂರ್ಣವಾಗಿ ಹೋಗಿದೆ ಎಂದಲ್ಲ. ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದೆ. ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ನಾವು ಮಾತ್ರ ಸುರಕ್ಷಿತವಾಗಿದ್ದರೆ ಸಾಲದು, ನಮ್ಮ ಅಕ್ಕಪಕ್ಕದವರೂ ಸುರಕ್ಷಿತವಾಗಿರಬೇಕು ಎಂದು ತಿಳಿಸಿದರು.
ಡಿಎಚ್‌ಒ ಡಾ| ಪಾಲಾಕ್ಷ ಮಾತನಾಡಿದರು. ಪೌರಾಯುಕ್ತ ಹನುಮಂತರಾಜು, ಉಪವಿಭಾಗಾಧಿಕಾರಿ ಪ್ರಸನ್ನ, ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ| ಬಿ.ವಿ. ಗಿರೀಶ್, ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ| ಬಸವರಾಜ್, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಚಿದಾನಂದಪ್ಪ, ಎನ್. ಎಸ್. ಮಂಜುನಾಥ, ನಗರಸಭೆ ಪರಿಸರ ಅಭಿಯಂತರ ಜಾಫರ್ ಮತ್ತಿತರರು ಇದ್ದರು.