Advertisement

ಸೋಂಕು ತಡೆಗೆ ಮುಖಗವಸೇ ಆಧಾರ

05:21 AM Jun 19, 2020 | Lakshmi GovindaRaj |

ಬೆಂಗಳೂರು: ಕೋವಿಡ್‌-19 ಹರಡುವಿಕೆ ತಡೆಗೆ ಜನಜಾಗೃತಿ ಮೂಡಿಸಲು ಮಾಸ್ಕ್ ದಿನ ಆಚರಣೆಗೆ ಸರ್ಕಾರ ಸೂಚಿಸಿದೆ. ಅದರಂತೆ ಗುರುವಾರ ನಗರಾದ್ಯಂತ ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳು ಮಾಸ್ಕ್ ಧರಿಸಿ, ಜಾಥಾ ನಡೆಸುವ  ಮೂಲಕ ಮಹತ್ವವನ್ನು ತಿಳಿಸುವ ಕೆಲಸ ಮಾಡಿದವು.

Advertisement

ಜಿಲ್ಲಾಡಳಿತ: ಕಂದಾಯ, ಆರೋಗ್ಯ, ಸಮಾಜಕಲ್ಯಾಣ, ಆಹಾರ ಮತ್ತು ಸರಬರಾಜು ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಸಿಬ್ಬಂದಿ ಮತ್ತು ಅಧಿಕಾರಿಗಳು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ನೇತೃತ್ವದಲ್ಲಿ ಜಾಥಾ ನಡೆಸಿದರು.  ಜಿಲ್ಲಾ ವೈದ್ಯಾಧಿಕಾರಿ ಡಾ.ಗುಳೂರು ಶ್ರೀನಿವಾಸ, ದಕ್ಷಿಣ ವಲಯ ಉಪವಿಭಾಗಾಧಿಕಾರಿ ಡಾ ಎಂ.ಜಿ. ಶಿವಣ್ಣ, ಜಿಲ್ಲಾ ಆರೋಗ್ಯ ಕಣ್ಗಾವಲು ತಂಡದ ಮುಖ್ಯಸ್ಥ ಡಾ.  ಮನೋಹರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿರಾಜುದ್ದೀನ್‌ ಮದನಿ ಭಾಗವಹಿಸಿದ್ದರು. ಈ ಮಧ್ಯೆ ಮುಖಗವಸು ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದವರಿಗೆ ಚಾಕೊಲೇಟ್‌ ಹಾಗೂ ಮಾಸ್ಕ್‌ ಕೊಡುಗೆ ನೀಡುವ ಮೂಲಕ  ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ವಿಭಿನ್ನವಾಗಿ ಜಾಗೃತಿ ಮೂಡಿಸಿದರು.

ಕೆಎಸ್‌ಆರ್‌ಟಿಸಿ: ನಿಗಮದ ಎಲ್ಲಾ ವಿಭಾಗಗಳಲ್ಲಿ ಗುರುವಾರ ಮಾಸ್ಕ್‌ ದಿನ ಆಚರಿಸಲಾಯಿತು. ದಿನಾಚರಣೆ ಅಂಗವಾಗಿ ಆಯಾ ಘಟಕಗಳ ಆವರಣದಲ್ಲಿ ಸಿಬ್ಬಂದಿಯು ಮಾಸ್ಕ್ ಧರಿಸುವ ಕುರಿತ ಸಂವಹನ ಫ‌ಲಕಗಳನ್ನು ಪ್ರದರ್ಶಿಸಿ, ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಮಾಸ್ಕ್ ವಿತರಿಸಿ ಕಡ್ಡಾಯವಾಗಿ ಧರಿಸಲು ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಅಧಿಕಾರಿಗಳು,  “ಮಾಸ್ಕ್ ದಿನಾಚರಣೆಯು ಕೇವಲ  ಒಂದು ದಿನಕ್ಕೆ ಸೀಮಿತವಾಗದೆ, ಜಾಗೃತಿ ನಿರಂತರವಾಗಿರಬೇಕು’ ಎಂದು ಹೇಳಿದರು. ನಗರದ ಕೇಂದ್ರೀಯ ವಿಭಾಗ ಘಟಕ- 2ರಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮಾತನಾಡಿ, ಕೊರೊನಾ ಹಾವಳಿಯಿಂದ  ರಕ್ಷಿಸಿಕೊಳ್ಳಲು ಮಾಸ್ಕ್‌ ಧರಿಸುವ ಅವಶ್ಯಕತೆ ಇದೆ. ರಕ್ಷಣೆಗೆ ಮುಂಜಾಗ್ರತಾ ಕ್ರಮವೊಂದೇ ಮಾರ್ಗ ಎಂದು ತಿಳಿಸಿದರು. ನಿರ್ದೇಶಕಿ (ಸಿಬ್ಬಂದಿ-ಪರಿಸರ) ಕವಿತಾ ಎಸ್‌. ಮನ್ನಿಕೇರಿ ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರು ವಿವಿ:  ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌. ವೇಣುಗೋಪಾಲ್‌ ನೇತೃತ್ವದಲ್ಲಿ ಮಾಸ್ಕ್‌ ದಿನ ಆಚರಿಸಲಾಯಿತು. ಮಾಸ್ಕ್‌ ಬಳಕೆ ಮಹತ್ವ ಕುರಿತು ವಿವಿ ಎನ್‌ಎಸ್‌ಎಸ್‌ ಘಟಕಗಳ ಸಂಯೋಜಿತ ಕಾಲೇಜುಗಳಿಗೆ ಹಾಗೂ ಎಲ್ಲ ವಿಭಾಗಗಳಿಗೆ ತಿಳಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next