Advertisement

ಶೇ. 60 ಸಾವುಗಳನ್ನು ಮರೆಮಾಚಿದ ಮಾಸ್ಕೊ

07:16 PM May 16, 2020 | sudhir |

ಮಾಸ್ಕೊ : ಇಡೀ ವಿಶ್ವಕ್ಕೆ ಕೋವಿಡ್‌-19 ಸೋಂಕನ್ನು ರಫ್ತು ಮಾಡಿರುವ ಚೀನ ಸೋಂಕಿಗೆ ತುತ್ತಾದವರ ಮತ್ತು ಬಲಿಯಾದವರ ಅಧಿಕೃತ ಅಂಶಗಳನ್ನು ಮರೆಮಾಚುತ್ತಿದೆ ಎಂದು ಅಮೆರಿಕ ಆರೋಪ ಮಾಡಿತ್ತು. ಆದರೆ ಸ್ವತಃ ನ್ಯೂಯಾರ್ಕ್‌ ರಾಜ್ಯದಲ್ಲೂ ಕೋವಿಡ್‌ಗೆ ಬಲಿಯಾದವರೆಷ್ಟು ಎಂಬ ಪ್ರಶ್ನೆಗೆ ಅಮೆರಿಕದ ಬಳಿ ಸಮರ್ಪಕ ಉತ್ತರವಿಲ್ಲ.

Advertisement

ಅಮೆರಿಕ ಮತ್ತು ಚೀನ ಮಾತ್ರವಲ್ಲದೆ ಇನ್ನೂ ಕೆಲವು ದೇಶಗಳು ಸುಳ್ಳು ಲೆಕ್ಕ ತೋರಿಸುತ್ತಿವೆ. ಇದೀಗ ಕೋವಿಡ್‌-19ನ ಹಾಟ್‌ಸ್ಪಾಟ್‌ ಎಂದು ಗುರುತಿಸಿಕೊಳ್ಳುತ್ತಿರುವ ರಷ್ಯಾ ಕೂಡ ಇದೇ ಮಾರ್ಗವನ್ನು ಅನುಸರಿಸುತ್ತಿದ್ದು, ಸೋಂಕಿನ ಪ್ರಸರಣ ಹೆಚ್ಚಿದ್ದರೂ ಸಾವಿನ ಪ್ರಮಾಣ ಕಡಿಮೆ ಇದೆ ಹೇಳಿಕೊಳ್ಳುವ ಮೂಲಕ ವಾಸ್ತವವನ್ನು ಮರೆಮಾಚಿದೆ.

ಇದೀಗ ರಷ್ಯಾದ ಮುಖವಾಡ ಕಳಚುವ ಮಾಹಿತಿ ಹೊರ ಬಿದ್ದಿದ್ದು, ಮಾಸ್ಕೊ ನಗರ ಶೇ.60ರಷ್ಟು ಸಾವಿನ ಪ್ರಕರಣವನ್ನು ಅಧಿಕೃತ ದತ್ತಾಂಶದಿಂದ ಹೊರ ಇಟ್ಟಿದೆ ಎಂದು ಸಿಎನ್‌ಎನ್‌ ವರದಿ ಮಾಡಿದೆ. ಮಾಧ್ಯಮಗಳ ವರದಿಯ ಬಳಿಕ ಎಚ್ಚೆತ್ತುಕೊಂಡ ಮಾಸ್ಕೊ ಆರೋಗ್ಯ ಇಲಾಖೆ ಅಧಿಕೃತ ಅಂಕಿಅಂಶಗಳನ್ನು ಹಂಚಿಕೊಂಡು ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಿದೆ.

ಕೇವಲ ಮರಣೋತ್ತರ ಪರೀಕ್ಷೆ ನಡೆಸಿದ ಪ್ರಕರಣಗಳನ್ನು ಮಾತ್ರ ಪರಿಗಣಿಸಿದ್ದೇವೆ ಎಂದು ತನ್ನ ತಪ್ಪು ಲೆಕ್ಕಕ್ಕೆ ಸಮಜಾಯಿಷಿ ನೀಡಿದೆ. ಸಾವಿಗೀಡಾಗಿರುವ ಶೇ.100ರಷ್ಟು ಸೋಂಕು ಶಂಕಿತರ ಶವ ಪರೀಕ್ಷೆ ನಡೆಸಿದ್ದು, ಎಪ್ರಿಲ್‌ನಲ್ಲಿ 639 ಜನರು ಚಿಕಿತ್ಸೆಗೆ ಒಳಗಾಗದೆ ನೇರವಾಗಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದೆ.

ಸಾವಿನ ಪ್ರಮಾಣ ಶೇ.20 ಏರಿಕೆ
ರಷ್ಯಾದ ಕೋವಿಡ್‌ ಮರಣಗಳ ಕುರಿತಾಗಿ ಕಳೆದ ಒಂದು ವಾರದಿಂದ ಮಾಧ್ಯಮಗಳು ವರದಿಗಳು ಬಿತ್ತರಿಸುತ್ತಲಿವೆ. ಮಾಸ್ಕೊ ನಗರದಲ್ಲಿ ಕೋವಿಡ್‌-19 ರಣ ಕೇಕೆಗೆ ಬಲಿಯಾಗಿರುವವರ ಪ್ರಮಾಣ ಹೆಚ್ಚಾಗಿದೆ. ಆದರೆ ಸಿವಿಲ್‌ ರಿಜಿಸ್ಟರ್‌ಅಂಕಿಅಂಶಗಳು ಇದನ್ನು ಮರೆಮಾಚಿ ಅನಧಿಕೃತವಾದ ಲೆಕ್ಕ ತೋರಿಸುತ್ತಿದೆ ಎಂದು ಸಾಕ್ಷಿ ಸಮೇತ ನಿರೂಪಿಸಿವೆ. ನಗರದಲ್ಲಿ ಈ ತಿಂಗಳಲ್ಲಿ 11,846 ಮರಣ ಪ್ರಮಾಣಪತ್ರಗಳ ವಿತರಣೆಯಾಗಿದ್ದು, ಹತ್ತು ವರ್ಷಗಳ ಸರಾಸರಿ (9,866) ಸಾವುಗಳ ಪ್ರಮಾಣಕ್ಕೆ ಹೋಲಿಸಿದ್ದರೆ ಸುಮಾರು ಶೇ.20ರಷ್ಟು ಹೆಚ್ಚಾಗಿದೆ ಎಂದು ವರದಿ ಉಲ್ಲೇಖ ಮಾಡಿದೆ.

Advertisement

ಈಗ ರಷ್ಯಾದ ರಾಜಧಾನಿಯ ಅಂಕಿಅಂಶಗಳು ಪರಿಶೀಲನೆಗೆ ಒಳಪಟ್ಟಿವೆ. ರಷ್ಯಾದಲ್ಲಿ ಸೋಂಕಿತರ ಸಂಖ್ಯೆ ಕಾಡ್ಗಚ್ಚಿನಂತೆ ಹೆಚ್ಚುತ್ತಿದ್ದು, ಎರಡನೇ ಸ್ಥಾನಕ್ಕೇರಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ ಪ್ರಸ್ತುತ ರಷ್ಯಾದಲ್ಲಿನ ಮರಣ ಪ್ರಮಾಣ 2,305 ರಷ್ಟಿದ್ದು, ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ ಇದೆ.

ಆದರೆ ಅಸುನೀಗುತ್ತಿರುವ ಪ್ರತಿಯೋರ್ವರು ಕೂಡ ಸೋಂಕಿನಿಂದಲೇ ಸಾಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಏಕಾಏಕಿ ಎಪ್ರಿಲ್‌ನಲ್ಲಿ ಮರಣ ಪ್ರಮಾಣ ಹೆಚ್ಚಾಗಿದೆ. ಆ ಪೈಕಿ ಶೇ.60ರಷ್ಟು ಸಾವುಗಳು ಕೋವಿಡ್‌ನ‌ ಪಾರ್ಶ್ವ ಸಮಸ್ಯೆಯಿಂದಲೋ ಅಥವಾ ಹೃದಯಾಘಾತದಂತಹ ಮಾರಣಾಂತಿಕ ಕಾಯಿಲೆಗಳಿಂದಲೂ ಸಂಭವಿಸಿವೆ. ಪಾರ್ಶ್ವ ಪರಿಣಾಮ ಎಂದರೆ ಕೋವಿಡ್‌ ಹಾವಳಿಯಿಂದಾಗಿ ಉಳಿದ ರೋಗಿಗಳಿಗೆ ಸಕಾಲಕ್ಕೆ ಆಸ್ಪತ್ರೆಗಳು ಸಿಗದಿರುವುದು, ಸಮರ್ಪಕ ಶುಶ್ರೂಷೆಯ ಕೊರತೆ, ನಿತ್ಯದ ಔಷಧಗಳ ಪೂರೈಕೆ ವ್ಯತ್ಯಯಗೊಂಡಿದ್ದು, ಹೆದರಿಕೆಯಿಂದಾದ ಸಾವು ಇತ್ಯಾದಿಗಳು. ಈ ಸಾವುಗಳನ್ನೂ ಕೋವಿಡ್‌ನ‌ ಲೆಕ್ಕಕ್ಕೆ ಸೇರಿಸಬೇಕೆಂದು ಕೆಲವರು ಸಲಹೆ ಮಾಡಿದ್ದಾರೆ. ಕೋವಿಡ್‌ನ‌ ವೈರಸ್‌ನಿಂದ ಮಾತ್ರವಲ್ಲದೆ ಅದರ ಪಾರ್ಶ್ವ ಪರಿಣಾಮಗಳಿಂದ ಸಂಭವಿಸಿರುವ ಸಾವುಗಳನ್ನು ಪತ್ತೆಹಚ್ಚುವುದು ಕೂಡ ಮುಖ್ಯವಾಗುತ್ತದೆ. ಆಗ ಮಾತ್ರ ಕೋವಿಡ್‌ ವೈರಸ್‌ನಿಂದ ಸಂಭವಿಸಿದ ನಿಜವಾದ ಹಾನಿಯನ್ನು ನಿಖರವಾಗಿ ಅಂದಾಜಿಸಬಹುದು. ಸಾವಿರದ ಲೆಕ್ಕದಲ್ಲಿ ಸಂಭವಿಸಿರುವ ಇತರ ಸಾವುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next