Advertisement

ಮಸಾಲೆ ದೋಸೆಗೆ ಶಾಸ್ತ್ರಿಯ ಸ್ಥಾನಮಾನ

02:21 PM Dec 04, 2017 | |

ಚಿಂತಾಮಣಿ ಅಂದಾಕ್ಷಣ ಎಲ್ಲರಿಗೂ ಥಟ್‌ ಅಂತ ಕಡ್ಲೆ ಬೀಜ ನೆನಪಾಗುತ್ತದೆ. ಅದನ್ನು ತಿನ್ನದವರೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅಲ್ಲಿನ ಕಡಲೇ ಬೀಜ ದೇಶ ವಿದೇಶಗಳ ಆಚೆಗೂ ಸದ್ದು ಮಾಡಿದೆ. ಆದೇ ರೀತಿ ಚಿಂತಾಮಣಿ ನಗರದ ಶಾಸ್ತ್ರೀ ಹೋಟೆಲ್‌ ಅಂದರೆ ಸಾಕು; ಘಮಘಮಿಸುವ ತುಪ್ಪದ ಮಸಾಲೆ ದೋಸೆ ಎಲ್ಲರ ಬಾಯಲ್ಲೂ ನೀರು ತರಿಸಿಬಿಡುತ್ತದೆ.

Advertisement

ಬರೋಬ್ಬರಿ 50 ವರ್ಷಗಳ ಇತಿಹಾಸ ಹೊಂದಿರುವ ಚಿಂತಾಮಣಿ ಗಾಯಿತ್ರಿ ಹೋಟೆಲ್‌ ಜನ ಮಾನಸದೊಳಗೆ ಇಂದಿಗೂ ಶಾಸ್ತ್ರಿ ಹೋಟೆಲ್‌ ಎಂದೇ ಖ್ಯಾತಿ. 1969ರಲ್ಲಿ ರಾಮಾಶಾಸ್ತ್ರಿ ಎಂಬುವರು ಚಿಂತಾಮಣಿ ನಗರದ ಮಧ್ಯೆಭಾಗದಲ್ಲಿರುವ ಖಾಸಗಿ ಬಸ್‌ ನಿಲ್ದಾಣದ ಸಮೀಪ ಸ್ಥಾಪಿಸಿದ ಹೋಟೆಲ್‌ ಇದು. ಈಗ ಅವರ ಮಕ್ಕಳಾದ ನರಸಿಂಹಮೂರ್ತಿ, ಮುರಳೀಧರ್‌ ನಡೆಸಿಕೊಂಡು ಬರುತ್ತಿದ್ದಾರೆ. 

ಮೊದಲ ಏರ್‌ ಕೂಲರ್‌ ಹೋಟೆಲ್‌..
ರಾಮಶಾಸ್ತ್ರಿಯವರು ಹೋಟೆಲ್‌ ಆರಂಭದ ದಿನಗಳಲ್ಲಿಯೇ ಗ್ರಾಹಕರಿಗಾಗಿ ಏರ್‌ ಕೂಲರ್‌ರನ್ನು ಹೋಟೆಲ್‌ಗೆ ಅಳವಡಿಸಿ ಗಮನ ಸೆಳೆದಿದ್ದರು. ಜೊತೆಗೆ ಗ್ರಾಹಕರು ಊಟ, ತಿಂಡಿ ಮಾಡಿಕೊಂಡು ಹೋಗಲು ಅನುಕೂಲವಾಗುವಂತೆ ಕೂರಲು ಉತ್ತಮ ಟೇಬಲ್‌ ಹಾಗೂ ಕುರ್ಚಿಗಳ ವ್ಯವಸ್ಥೆ ಮಾಡಿದ್ದು ಸುತ್ತಮುತ್ತಲ ಊರುಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಪ್ರತಿ ಭಾನುವಾರ ಸಂತೆಗೆ ಬರುವ ಜನ, ಗಾಯಿತ್ರಿ ಹೋಟೆಲ್‌ ಗೆ ತಪ್ಪದೇ ದಾಂಗುಡಿ ಇಡುತ್ತಾರೆ. ಇನ್ನೂ ಪ್ರವಾಸೋದ್ಯಮದ ಜೊತೆಗೆ ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಚಿಂತಾಮಣಿ ತಾಲೂಕಿನ ಪ್ರವಾಸಕ್ಕೆಂದು ಬರುವ ಪ್ರವಾಸಿಗರು ಕೂಡ ಮಸಾಲೆದೋಸೆ ಚಪ್ಪರಿಸಿ ಹೋಗುತ್ತಾರೆ. 

 ಶಾಸ್ತ್ರೀ ಹೋಟೆಲ್‌ನಲ್ಲಿ ತಯಾರಿಸುವ ಇಡ್ಲಿ ವಡೆ, ಚಿತ್ರಾನ್ನ, ಪೊಂಗಲ್‌, ಸೆಟ್‌ ದೋಸೆ ಮಸಾಲೆ ದೋಸೆಯಷ್ಟೇ ಫೇಮಸ್ಸು. ದೂರದ ಬೆಂಗಳೂರು, ನೆರೆಯ ಆಂಧ್ರಪ್ರದೇಶದ ಹಿಂದೂಪುರ, ಆನಂತಪುರ, ಕದಿರಿ, ಚಿತ್ತೂರು ಮದನಪಲ್ಲಿಗಳಿಂದ ಬರುವ
ವ್ಯಾಪಾರಸ್ಥರು ಶಾಸ್ತ್ರೀ ಹೋಟೆಲ್‌ಗೆ ಬಂದು ಬಿಸಿಬಿಸಿ ಮಸಾಲೆ ದೋಸೆ ಸವಿದೇ ಹೋಗುತ್ತಾರೆ. ಭಾನುವಾರವಂತೂ ಹೋಟೆಲ್‌ನಲ್ಲಿ ಜನವೋ ಜನ.

ಗುಣಮಟ್ಟದಲ್ಲಿ ರಾಜಿ ಇಲ್ಲ
ನಾವು ಹೋಟೆಲ್‌ ಆರಂಭಗೊಂಡಾಗನಿಂದಲೂ ಬ್ರಾಂಡೆಡ್‌ ವಸ್ತುಗಳನ್ನೇ ಬಳಸುತ್ತಿದ್ದೇನೆ. ಇದೇ ಗುಣಮಟ್ಟದ ಗುಟ್ಟು. ಇಂದು ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗುತ್ತಲೇ ಇದ್ದರೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ. ಹಾಗಾಗಿಯೇ ನಾವು 50
ವರ್ಷಗಳಿಂದ ಹೋಟೆಲ್‌ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲು ಸಾಧ್ಯವಾಗಿದೆ ಎನ್ನುತ್ತಾರೆ ಹೋಟೆಲ್‌ನ ಮಾಲೀಕ ಮುರಳೀಧರ್‌.

Advertisement

ಕಾಗತಿ ನಾಗರಾಜಪ್ಪ 

Advertisement

Udayavani is now on Telegram. Click here to join our channel and stay updated with the latest news.

Next