ಹೊಸದಿಲ್ಲಿ: ಪ್ರತೀ ಲೀಟರ್ ಪೆಟ್ರೋಲ್‌ಗೆ 104.98 ರೂ. ಆಗುತ್ತಿರುವಂತೆಯೇ ವಿದ್ಯುತ್ ಚಾಲಿತ ಕಾರುಗಳಿಗೆ ಬೇಡಿಕೆ ಹೆಚ್ಚಲಾರಂಭಿಸಿದೆ.
ಆದರೆ ಸೂಕ್ತ ರೀತಿಯಲ್ಲಿ ಚಾರ್ಜಿಂಗ್ ವ್ಯವಸ್ಥೆಯೇ ಸವಾಲಾಗಿದೆ. ಅದಕ್ಕೆ ಪರಿಹಾರ ಸೂತ್ರ ವನ್ನು ದೇಶದ ಜನಪ್ರಿಯ ಕಾರು ತಯಾರಿಕ ಕಂಪೆನಿ ಮಾರುತಿ ಸುಜುಕಿ ಕಂಡುಹಿಡಿಯಲು ಮುಂದಾಗಿದೆ. ಚಲಿಸುತ್ತಲೇ ಸ್ವಯಂ ಚಾಲಿತವಾಗಿ ಚಾರ್ಜ್ ಆಗುವ ಹೈಬ್ರಿಡ್ (ಎಚ್‌ಇವಿ) ವ್ಯವಸ್ಥೆ ಹೊಂದಿರುವ ಕಾರನ್ನು ಸಂಶೋಧಿಸಿ ಅಭಿವೃದ್ಧಿ ಪಡಿಸಲು ಟೊಯೊಟಾ ಜತೆಗೆ ಒಪ್ಪಂದಕ್ಕೆ ನಿರ್ಧರಿಸಿದೆ.
ಟಾಟಾ ಮೋಟಾರ್ಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಮತ್ತು ಹ್ಯುಂಡೈ ಈಗಾಗಲೇ ವಿದ್ಯುತ್‌ಚಾಲಿತ ಕಾರುಗಳನ್ನು ಮಾರುಕಟ್ಟೆಗೆ ತಂದಿವೆ. ವಿದ್ಯುತ್ ಕಾರುಗಳ ತಯಾರಿಕೆಯಲ್ಲಿ ಮಾರುತಿ ಸುಜುಕಿ ಉಳಿದವುಗಳಂತೆ ಮುಂದಿಲ್ಲ. ಮಾರುತಿ ಸುಜುಕಿಯ ಕಾರ್ಪೊರೇಟ್ ಯೋಜನೆಗಳು ಮತ್ತು ಸರಕಾರಿ ವ್ಯವಹಾರಗಳ ವಿಭಾಗದ ಉಪಾಧ್ಯಕ್ಷ ರಾಹುಲ್ ಭಾರತಿ ಮಾತನಾಡಿ “ಟೊಯೊಟಾ ಜತೆಗೂಡಿ ಕೆಲವು ವಾಹನಗಳವನ್ನು ಹೈಬ್ರಿಡ್ ವ್ಯಾಪ್ತಿಯಲ್ಲಿ ಮುಂದಿನ ತಿಂಗಳು ಪರೀಕ್ಷೆಗೆ ಒಳಪಡಿಸಲಾಗುತ್ತದೆ’ ಎಂದಿದ್ದಾರೆ.
ಸ್ವಯಂ ಚಾಲಿತವಾಗಿ ಚಾರ್ಜ್ ಆಗುವ ಕಾರುಗಳಲ್ಲಿ ಇಂಟರ್‌ನಲ್ ಕಂಬಷನ್ ಎಂಜಿನ್ (ಐಸಿಇ)ಮೂಲಕ ಬ್ಯಾಟರಿ ಗಳಿಗೆ ಇಂಧನ ಪೂರೈಸುತ್ತದೆ. ಜತೆಗೆ ಟೈರ್‌ಗಳು ಚಲಿಸುತ್ತಿರುವಂತೆಯೇ ಹೆಚ್ಚುವರಿ ವಿದ್ಯುತ್ ಪೂರೈಸಲಿವೆ. ಹೀಗಾಗಿ ಐಸಿಇ ವ್ಯವಸ್ಥೆಯ ಮೂಲಕ ಹೆಚ್ಚಿನ ಮೈಲೇಜ್ ಕೂಡ ಸಿಗಲಿದೆ. ಜತೆಗೆ ಪರಿಸರ ಮಾಲಿನ್ಯ ಕೂಡ ಕಡಿಮೆಯಾಗಲಿದೆ ಎಂದಿದ್ದಾರೆ.
ಇಂಥ ಕಾರುಗಳು ಮಾರುಕಟ್ಟೆಗೆ ಬಂದರೆ, ದೂರ ಸಂಚಾರದ ವೇಳೆ ಕ್ಷಿಪ್ರ ಚಾರ್ಜಿಂಗ್ ಕೇಂದ್ರಗಳನ್ನು ಹುಡುಕುವ ಪರಿಸ್ಥಿತಿಯೂ ಬರುವುದಿಲ್ಲ. 2018 ರಿಂದಲೇ ವ್ಯಾಗನ್ ಆರ್ ಕಾರುಗಳ ಬ್ಯಾಟರಿಗಳನ್ನು ಬದಲಾಯಿಸಿ ಪರೀಕ್ಷೆಗೆ ಒಳಪಡಿಸುವ ಕ್ರಮ ಜಾರಿಗೆ ತಂದಿದೆ. 2025ರ ವೇಳೆಗೆ ಮಾರುತಿ ಸುಜುಕಿ ವಿದ್ಯುತ್ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, 10 ಲಕ್ಷ ರೂ. ಒಳಗೆ ಬೆಲೆ ಇರಬಹುದೆಂದು ಅಂದಾಜಿಸಲಾಗುತ್ತಿದೆ.