ನವದೆಹಲಿ: ಸಂಕಷ್ಟದಲ್ಲಿರುವ ದೇಶೀ ಮೋಟಾರು ರಂಗಕ್ಕೆ ಉತ್ತೇಜನ ನೀಡಲು ಕೇಂದ್ರ ಸರಕಾರ ಹಲವಾರು ಉಪಕ್ರಮಗಳನ್ನು ಘೋಷಿಸಿರುವಂತೆ ಮೋಟಾರು ಮಾರುಕಟ್ಟೆ ನಿಧಾನಕ್ಕೆ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.
ಇತ್ತ ದೇಶದ ಅಗ್ರಮಾನ್ಯ ಮೋಟಾರು ವಾಹನ ತಯಾರಿ ಸಂಸ್ಥೆ ಮಾರುತಿ ಸುಝುಕಿ ಕಾರ್ಪೊರೇಟ್ ತೆರಿಗೆ ಪ್ರಯೋಜನವನ್ನು ನೇರವಾಗಿ ತನ್ನ ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿದೆ. ಹಾಗಾಗಿ ತನ್ನ ಕೆಲವೊಂದು ಪ್ರಮುಖ ಮಾದರಿಗಳ ಎಕ್ಸ್-ಶೋ ರೂಂ ಬೆಲೆಯನ್ನು 5,000 ರೂಪಾಯಿಗಳವರೆಗೆ ಇಳಿಸಲು ಮಾರುತಿ ಸುಝುಕಿ ನಿರ್ಧರಿಸಿದೆ.
ಆಲ್ಟೋ 800, ಆಲ್ಟೋ ಕೆ10, ಸ್ವಿಫ್ಟ್ ಡಿಸೇಲ್, ಸಿಲೇರಿಯೋ, ಬಲೆನೋ ಡಿಸೇಲ್, ಇಗ್ನಿಸ್, ಡಿಸೈರ್ ಡಿಸೇಲ್, ಟೂರ್ ಎಸ್ ಡಿಸೇಲ್, ವಿಟಾರ ಬ್ರಿಝ್ಝಾ ಮತ್ತು ಎಸ್-ಕ್ರಾಸ್ ಮಾದರಿಗಳ ಕಾರುಗಳಿಗೆ ಈ ರಿಯಾಯ್ತಿ ಅನ್ವಯಿಸುತ್ತದೆ ಎಂದು ಕಾರು ತಯಾರಿಕಾ ಕಂಪೆನಿ ತಿಳಿಸಿದೆ.
ದರ ರಿಯಾಯ್ತಿಯಿಂದ ಪ್ರಥಮ ಬಾರಿಗೆ ಕಾರು ಖರೀದಿಸುವ ಗ್ರಾಹಕರಿಗೆ ಲಾಭವಾಗಲಿದೆ ಮತ್ತು ಅವರನ್ನು ಕಾರು ಖರೀದಿಗೆ ಆಕರ್ಷಿಸುವಲ್ಲಿ ಇದು ಸಹಕಾರಿಯಾಗಬಹುದು ಎಂದು ಕಂಪೆನಿ ಆಶಾವಾದವನ್ನು ವ್ಯಕ್ತಪಡಿಸಿದೆ. ಗ್ರಾಹಕರಿಗೆ ತೆರಿಗೆ ಲಾಭದ ವರ್ಗಾವಣೆಯಿಂದ ಮುಂಬರುವ ಹಬ್ಬದ ಋತುಗಳಲ್ಲಿ ಕಾರು ಮಾರಾಟ ತುಸು ಏರಿಕೆ ಕಾಣಬಹುದು ಎಂಬ ಆಶಾವಾದವನ್ನೂ ಈ ಕಾರು ತಯಾರಿಕಾ ಸಂಸ್ಥೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಭಾರತೀಯ ಮೋಟಾರು ಉತ್ಪಾದಕ ಸಂಘದ ವರದಿಗಳ ಪ್ರಕಾರ ದೇಶೀಯ ಕಾರು ಮಾರಾಟ ಪ್ರಮಾಣ 41 ಪ್ರತಿಶತ ಕುಸಿತಕಂಡಿತ್ತು. 2018ರ ಆಗಸ್ಟ್ ತಿಂಗಳಿನಲ್ಲಿ 196,847 ಕಾರುಗಳು ಮಾರಾಟವಾಗಿದ್ದರೆ 2019ರ ಆಗಸ್ಟ್ ತಿಂಗಳಿನಲ್ಲಿ 115,957 ಕಾರುಗಳು ಮಾರಾಟ ಆಗಿದ್ದವು.
ದೇಸೀ ಮೋಟಾರು ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ವಾರವಷ್ಟೇ ಕಾರ್ಪೊರೇಟ್ ತೆರಿಗೆ ಪ್ರಮಾಣವನ್ನು 30 ಪ್ರತಿಶತದಿಂದ 25.17 ಪ್ರತಿಶತಕ್ಕೆ ಕಡಿತಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದರು.