ನವದೆಹಲಿ: ದೇಶದ ಪ್ರಮುಖ ಕಾರು ಉತ್ಪಾದಕ ಕಂಪೆನಿ ಮಾರುತಿ ಸುಝುಕಿ ತನ್ನ ಜನಪ್ರಿಯ ಮಾದರಿಗಳಲ್ಲಿ ಒಂದಾಗಿರುವ ಬಲೆನೋ ಆರ್.ಎಸ್. ಕಾರಿನ ಎಕ್ಸ್-ಶೋರೂಂ ದರವನ್ನು ಒಂದು ಲಕ್ಷ ರೂಪಾಯಿಗಳಷ್ಟು ಇಳಿಸಿದೆ.
ಬಲೆನೋ ಕಾರಿನ ಎಕ್ಸ್ ಶೋರೂಂ ದರ ದೆಹಲಿಯಲ್ಲಿ 8.89 ಲಕ್ಷ ರೂಪಾಯಿಗಳಾಗಿತ್ತು ಈಗ ಕಂಪೆನಿಯ ಈ ಹೊಸ ಆಫರ್ ಬಳಿಕ ಆ ದರ 7.89 ಲಕ್ಷ ರೂಪಾಯಿಗಳಾಗಲಿವೆ.
ಇದು 3-ಸಿಲಿಂಡರ್ ಸಾಮರ್ಥ್ಯದ 1.0 ಲೀಟರ್ ಬೂಸ್ಟರ್ ಜೆಟ್ ಡಿಐಟಿಸಿ ಪೆಟ್ರೋಲ್ ಎಂಜಿನ್ ಕಾರು ಇದಾಗಿದೆ. 5 ಗೇರ್ ಗಳನ್ನು ಹೊಂದಿರುವ ಈ ಕಾರಿನ ಮೈಲೇಜ್ ಸಾಮರ್ಥ್ಯ ತಯಾರಕರ ಪ್ರಕಾರ ಲೀಟರ್ ಗೆ 21.1 ಕಿಲೋಮೀಟರ್ ಗಳಾಗಿವೆ.
ನಿನ್ನೆಯಷ್ಟೇ ಮಾರುತಿ ಸುಝುಕಿ ತನ್ನ ಇತರೇ ಮಾದರಿಗಳಾದ ಆಲ್ಟೋ 800, ಆಲ್ಟೋ ಕೆ 10,ಸಿಲೆರಿಯೋ, ಇಗ್ನಿಸ್, ಮತ್ತು ಡಿಸೇಲ್ ಕಾರುಗಳಾದ ಸ್ವಿಫ್ಟ್, ಬಲೇನೋ, ಡಿಸೈರ್, ಟೂರ್ ಎಸ್, ವಿಟಾರಾ ಬ್ರಿಝಾ ಮತ್ತು ಎಸ್-ಕ್ರಾಸ್ ಕಾರುಗಳ ದರವನ್ನು 5000 ರೂಪಾಯಿಗಳಷ್ಟು ಇಳಿಸಿತ್ತು.
ನಿರಂತರ ಏಳು ತಿಂಗಳುಗಳಿಂದ ಮಾರುತಿ ಸುಝುಕಿ ಕಾರುಗಳ ಮಾರಾಟದಲ್ಲಿ ಕುಸಿತ ಕಂಡು ಬರುತ್ತಿದ್ದು ಆಗಸ್ಟ್ ತಿಂಗಳಿನಲ್ಲಿ ಈ ಕಂಪೆನಿಯ ಕಾರುಗಳ ಒಟ್ಟಾರೆ ಮಾರಾಟ ಪ್ರಮಾಣದಲ್ಲಿ 32.7 ಪ್ರತಿಶತ ಕುಸಿತ ದಾಖಲಾಗಿತ್ತು.