Advertisement

ಮಾಜಿ ಸೈನಿಕನ ಮಾರುತಿ ಪ್ರತಾಪ

06:00 AM Sep 28, 2018 | |

ಸೈನಿಕರ ಸೇವೆಯನ್ನು ಗೌರವಿಸುವ, ಸ್ಮರಿಸುವ, ಸ್ಫೂರ್ತಿ ತುಂಬುವ, ಸೈನಿಕರ ಯುದ್ಧ ಅನಾಹುತ ಕಲ್ಯಾಣ ನಿಧಿಗೆ ದೇಣಿಗೆ, ರಸ್ತೆ ಸುರಕ್ಷತಾ ನಿಯಮ ಹಾಗೂ ಪ್ಲಾಸ್ಟಿಕ್‌ ನಿಷೇಧಿಸಿ ಪರಿಸರ ಸಂರಕ್ಷಣೆ ಪ್ರಚುರಪಡಿಸಲು ವಕೀಲ ಎಸ್‌. ಗೋಪಾಲಕೃಷ್ಣ ಶೆಟ್ಟಿ ಶಿರಿಯಾರ ಸಂಯೋಜನೆಯಲ್ಲಿ ಮಾರುತಿ ಪ್ರತಾಪ, ಶ್ರೀನಾಥ ಸುದರ್ಶನ ಯಕ್ಷಗಾನ ನಡೆಯಿತು.

Advertisement

ಕುಮಟಾ ಗಣಪತಿ ನಾಯ್ಕರು ತಂದೆ  ವಿಶಿಷ್ಟ ಹನುಮಂತ ಪಾತ್ರಧಾರಿ ಕುಮಟಾ ಗೋವಿಂದ ನಾಯ್ಕರ ನೆನಪು ಮರುಕಳಿಸಿದಂತೆಯೇ.ಇವರನ್ನೇ ಕೇಂದ್ರೀ ಕರಿಸಿ ಹನುಮಂತನಿಗೆ ಸಂಬಂಧಿಸಿದ ಪ್ರಸಂಗಗಳು ಅನೇಕ ಕಡೆ ನಡೆಯುತ್ತದೆ. ಅದರಂತೆಯೇ ಕುಂದಾಪುರದ ಸಹನಾ ಕನ್ವೆನನ್‌ ಸಭಾಂಗಣದಲ್ಲಿ ನಡೆದ ಮಾರುತಿ ಪ್ರತಾಪದಲ್ಲೂ ಕುಮಟಾದವರ ಹನುಮಂತ. ಆದರೆ ಇಲ್ಲೊಂದು ವಿಶೇಷವಿದೆ. ಇದು ಕಾರ್ಗಿಲ್‌ ಯುದ್ಧದಲ್ಲಿ ಸತತ 48 ತಾಸು ಭಾಗಿಯಾದ ಯೋಧ ಕ್ಯಾ| ನವೀನ್‌ ನಾಗಪ್ಪ ಅವರ ಅನುಭವ ಕಥನದ ಸ್ಫೂರ್ತಿಭರಿತ ವಾತಾವರಣ ಉಂಟು ಮಾಡುವ ಕಾರ್ಯಕ್ರಮ. ಅದರಲ್ಲಿ ಸಂಗ್ರಹವಾದ ದೇಣಿಗೆಯನ್ನು ಸೈನಿಕ ಕಲ್ಯಾಣ ನಿಧಿಗೆ ಹಸ್ತಾಂತರಿಸುವ ಉದ್ದೇಶ. ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ನಡೆದ ಯಕ್ಷಗಾನದಲ್ಲಿ ಹನುಮಂತನ ಪಾತ್ರ ಮಾಡಿದ ಕುಮಟಾ ಗಣಪತಿ ನಾಯ್ಕ ಸ್ವತಃ ಮಾಜಿ ಸೈನಿಕ. ಆದ್ದರಿಂದ ಈ ಯಕ್ಷಗಾನಕ್ಕೆ ಇನ್ನಷ್ಟು ಮೆರುಗು ಬಂದಿತ್ತು. ಭಾಗವತಿಕೆಯಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರು ಸುಶ್ರಾವ್ಯವಾಗಿ ಭಕ್ತಿತುಂಬುವ ಹಾಡುಗಾರಿಕೆ ಮೂಲಕ ರಂಗದ ಮೇಲೆ ಪೌರಾಣಿಕ ವಾತಾವರಣದ ಸಾಕ್ಷಾತ್ಕಾರಕ್ಕೆ ಕಾರಣರಾದರು. ಅವರಿಗೆ ಸುನಿಲ್‌ ಕುಮಾರ್‌ ಕಡತೋಕ ಹಾಗೂ ಶಿವಾನಂದ ಕೋಟ ಅವರ ಹಿಮ್ಮೇಳ ಸಹಕಾರವಿತ್ತು. 

ಕೃಷ್ಣನಾಗಿ ತುಂಟತನ, ಮುಗ್ಧತನ, ಸತ್ಯಭಾಮೆ ಜತೆಗೆ ನಸುಗೋಪ, ಹುಸಿಗೋಪ, ಸರಸ, ವಿರಸ, ಹೀಗೆ ನವರಸಗಳನ್ನು ಪ್ರದರ್ಶಿಸುತ್ತಾ ಕಪಟನಾಟಕ ಸೂತ್ರಧಾರಿಯಾಗಿ ಪಾತ್ರಪೋಷಣೆ ಮಾಡಿದ್ದು ತೀರ್ಥಹಳ್ಳಿ ಗೋಪಾಲಾಚಾರ್‌. ಅವರಿಗೆ ಸತ್ಯಭಾಮೆಯಾಗಿ ಸಾಥಿಯಾದದ್ದು ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ. ಹದಮೀರದ ಪಾತ್ರೋಚಿತವಾದ ನೃತ್ಯ, ಅದಕ್ಕೊಪ್ಪುವ ಮಾತುಗಾರಿಕೆ ಅವರ ಪ್ರೌಢಿಮೆ. ಬಲರಾಮನಾಗಿ ಶ್ರೀಪಾದ ಭಟ್‌ ಥಂಡಿಮನೆ ಹಾಗೂ ದ್ವಾರಪಾಲಕನಾಗಿ ಶ್ರೀಧರ ಕಾಸರಕೋಡು ಅವರದ್ದು ಮನರಂಜಿಸಿದ ಜತೆಗೂಡುವಿಕೆ. ವಿಜಯನಾಗಿಯೂ ಮನಗೆದ್ದವರು ಕಾಸರಕೋಡು. ಸತ್ಯಭಾಮೆಯ ಸಖೀಯಾಗಿ ವಂಡಾರು ಗೋವಿಂದ ಮರ ಕಾಲರ ಪಾತ್ರಗಾರಿಕೆ. ಆ ದಿನ ನಿರೀಕ್ಷೆ ಇದ್ದದ್ದು ಕುಮಟಾದವರ ಹನುಮಂತ. ಸತ್ಯಭಾಮೆಯ ಗರ್ವ ಮುರಿಯುವ, ರಾಮನೊಬ್ಬನೇ ತನಗೆ ದೇವರು ಎಂದು ಹೃದಯಸ್ಥನಾದ ರಾಮನ ಕುರಿತಾಗಿಯಷ್ಟೇ ಭಕ್ತಿಯನ್ನು ತೋರಿಸುವ ಹನುಮಂತ, ರಾಮನೂ ಕೃಷ್ಣನೂ ಒಬ್ಬನೇ ದೇವರ ಅವತಾರ ಎಂದು ನಿರೂಪಿಸಿದ ಕೃಷ್ಣ, ಗರ್ವದಿಂದ ಯಾವುದೇ ಸಾಧ್ಯವಿಲ್ಲ ಎಂದು ತಪ್ಪೊಪ್ಪಿಕೊಂಡ ಸತ್ಯಭಾಮೆ ಎಲ್ಲವೂ ಮನಮುಟ್ಟಿತು.ಹನುಮಂತನ ಪಾತ್ರವನ್ನು ಮಾಡುವಾಗ ಗಣಪತಿ ನಾಯ್ಕರ ತಾದಾತ್ಮé, ಶ್ರದ್ಧೆ, ಎಷ್ಟು ಹೊತ್ತಾದರೂ ರಂಗದಲ್ಲಿ ಅವರು ನಿಲ್ಲುವ ಮಾರುತಿಯ ಭಂಗಿ ಮೆಚ್ಚುಗೆಯಾಯಿತು. 

ಎರಡನೆಯದಾಗಿ ಸುದರ್ಶನ ವಿಜಯ ಆಖ್ಯಾನವನ್ನು ಶ್ರೀನಾಥ ಸುದರ್ಶನ ಎಂಬ ಹೆಸರಿನಲ್ಲಿ ಪ್ರದರ್ಶಿಸಲಾಯಿತು. ಭಾಗವತರಾಗಿ ಚಂದ್ರಕಾಂತ್‌ ಮೂಡುಬೆಳ್ಳೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ, ಚೆಂಡೆಯಲ್ಲಿ ಶ್ರೀನಿವಾಸ ಪ್ರಭು ಭಾಗವಹಿಸಿದ್ದರು. ವಿಷ್ಣುವಾಗಿ ಈಶ್ವರ ನಾಯ್ಕ ಮಂಕಿ, ಲಕ್ಷ್ಮೀಯಾಗಿ ಶಶಿಕಾಂತ್‌ ಶೆಟ್ಟಿ ಕಾರ್ಕಳ, ಸುದರ್ಶನನಾಗಿ ಉದಯ ಹೆಗಡೆ ಕಡಬಾಳು, ಶತ್ರು ಪ್ರಸೂದನನಾಗಿ ಪ್ರಸನ್ನ ಶೆಟ್ಟಿಗಾರ್‌ ಮಂದರ್ತಿ, ದೇವೇಂದ್ರನಾಗಿ ಆದಿತ್ಯ ಹೆಗಡೆ ಪಾತ್ರಾಭಿನಯಿಸಿದ್ದರು. 

ಲಕ್ಷ್ಮೀ ಮಚ್ಚಿನ

Advertisement
Advertisement

Udayavani is now on Telegram. Click here to join our channel and stay updated with the latest news.

Next