Advertisement

“ಮಾರುತಿ’ಚಿಕ್ಕದಾದರೂ, ಕೀರ್ತಿ ದೊಡ್ಡದು!

10:10 AM Jan 19, 2020 | Lakshmi GovindaRaj |

ಹಂಪಿಯಲ್ಲೊಂದು ವಿಶೇಷ ಹರಕೆಯೂ ಉಂಟು. ಹುಡುಗರಿಗೆ ಕಾಯಿಲೆ- ಕಸಾಲೆಗಳಾದರೆ ಜಾತ್ರೆಯಲ್ಲಿ ಅವನಿಗೆ ಹನುಮನ ವೇಷ ಹಾಕಿಸುತ್ತೇವೆ ಎಂದು ಹರಕೆ ಹೊರುತ್ತಾರೆ…

Advertisement

ಶ್ರೀರಾಮ ದೂರದಿಂದ ಬಂದು ಹಂಪಿಯಲ್ಲಿ ತುಸುಕಾಲ ಇದ್ದು ಹೋದನಷ್ಟೇ. ಆದರೆ, ಹನುಮನಿಗೆ ಇದು ಸ್ವಂತ ಸ್ಥಳ. ಇಲ್ಲಿ ಜನವಸತಿ ಆರಂಭವಾಗುವ ಮೊದಲು ಅದು ಕೇವಲ ವಾನರ ರಾಜ್ಯ. ಹೀಗಾಗಿ, ಇಲ್ಲಿನ ಜನರಿಗೆ ಹನುಮನ ಮೇಲೆ ವಿಶೇಷ ಪ್ರೀತಿ, ಭಕ್ತಿ. ರಾಜರು ಕೂಡ ವಾನರರ ನೆಲವನ್ನು ನಾವು ಆಕ್ರಮಿಸಿದ್ದರಿಂದ ಅವುಗಳಿಗೆ ಅನ್ಯಾಯವಾಯಿತೆಂದು ಭಾವಿಸಿ, ಇಪ್ಪತ್ತು ಎಕರೆ ಕೃಷಿಭೂಮಿಯನ್ನು ಹಂಪಿಯಲ್ಲಿ ಬಿಟ್ಟಿದ್ದರಂತೆ.

“ಕೋತಿ ಇನಾಂ’ ಎಂದು ಗುರುತಿಸಲ್ಪಡುವ ಆ ಭೂಮಿಯನ್ನು ಈಗ ಅನುಭವಿಸುತ್ತಿರುವ ಯಜಮಾನರು, ಈಗಲೂ ಮಧ್ಯಾಹ್ನ ಭೋಜನದ ಮುನ್ನ ವಿರೂಪಾಕ್ಷೇಶ್ವರನ ಗುಡಿಗೆ ಬಂದು ಅಲ್ಲಿನ ಕೋತಿಗಳಿಗೆ ಆಹಾರ ಕೊಡುತ್ತಾರಂತೆ. ನಮ್ಮ ಜನರ ಈ ನಂಬಿಕೆ ಪಶುಪಕ್ಷಿಗಳೆಡೆಗಿನ ಪ್ರೀತಿಗೆ ದೊಡ್ಡ ಶರಣು. ಹಂಪಿಯಲ್ಲೊಂದು ವಿಶೇಷ ಹರಕೆಯೂ ಉಂಟು. ಹುಡುಗರಿಗೆ ಕಾಯಿಲೆ- ಕಸಾಲೆಗಳಾದರೆ ಜಾತ್ರೆಯಲ್ಲಿ ಅವನಿಗೆ ಹನುಮನ ವೇಷ ಹಾಕಿಸುತ್ತೇವೆ ಎಂದು ಹರಕೆ ಹೊರುತ್ತಾರೆ. ಹೀಗಾಗಿ, ಜಾತ್ರೆಯ ದಿನ ಅಲ್ಲಲ್ಲಿ ಹನುಮ ವೇಷಧಾರಿಗಳೂ ಕಾಣಸಿಗುತ್ತಾರೆ.

ರಾಮಾಯಣದಲ್ಲೂ ಕಪಿಚೇಷ್ಟೆ: ಹಂಪಿಯಲ್ಲಿ ಹನುಮ ಅಷ್ಟು ಜಾಗೃತನಿದ್ದುದರಿಂದಲೇ ವ್ಯಾಸರಾಯರು ಯಂತ್ರೋದ್ಧಾರಕ ಹನುಮಂತನನ್ನು ಇಲ್ಲಿ ಸ್ಥಾಪಿಸಿದರೇನೋ! ಹನುಮ ಎಷ್ಟೇ ಸಭ್ಯ, ಸುಸಂಸ್ಕೃತನಾದರೂ ಆಗಾಗ್ಗೆ ತನ್ನ ಹುಟ್ಟುಗುಣ “ಕಪಿಚೇಷ್ಟೆ’ಯನ್ನು ತೋರಿಸುವುದು ರಾಮಾಯಣದಲ್ಲೂ ಕಂಡುಬರುತ್ತದೆ. ಹಾಗೆಯೇ, ವ್ಯಾಸರಾಯರು ಪೂಜಿಸುವಾಗಲೂ ಕಪಿಚೇಷ್ಟೆಯಿಂದಲೋ ಅಥವಾ ಅವರ ಸಹನೆ, ಭಕ್ತಿ, ಪರೀಕ್ಷಿಸಲೋ ಮತ್ತೆ ಮತ್ತೆ ಜಿಗಿದು ಹೋಗತೊಡಗಿದನಂತೆ. ಆಗ ಅವನನ್ನು ಯಂತ್ರದಲ್ಲಿ ಬಂಧಿಸಿಟ್ಟರಂತೆ. ಚಕ್ರತೀರ್ಥದ ಎದುರಿರುವ ಈ ಸ್ಥಳವೀಗ ಅತ್ಯಂತ ಜಾಗೃತ ಕ್ಷೇತ್ರ.

ಬೆಲ್ಲ ತಂದ ಹನುಮಪ್ಪ…: ನನ್ನ ಸಂಶೋಧನೆಯಲ್ಲಿ ಬೆಳಕಿಗೆ ಬಂದ ನಿದರ್ಶನವೊಂದನ್ನು ಇಲ್ಲಿ ಹೇಳಲೇಬೇಕು. ಹಂಪಿಯ ಮಹಾಗೋಪುರ ನಿರ್ಮಾಪಕರಾದ ಗುರು ಭಿಷ್ಟಪ್ಪಯ್ಯನವರು ಹನುಮನ ಆರಾಧಕರು. ಅವರು ರಚಿಸಿದ ಆಂಜನೇಯ ಯಂತ್ರವೂ ವಿಶಿಷ್ಟವಾಗಿದೆ. ಅವರ ಮೊಮ್ಮಗ ಗುರು ಮಹಾದೇವಪ್ಪಯ್ಯನವರೂ ಇದೇ ಪರಂಪರೆಯನ್ನು ಮುಂದುವರಿಸಿದರು.

Advertisement

ಮಹಾದೇವಪ್ಪಯ್ಯನವರು ಕ್ರಿ.ಶ. 1717ರಲ್ಲಿ ಹಂಪಿ ಗೋಪುರಕ್ಕೆ ಅತ್ಯಂತ ವಿಜೃಂಭಣೆಯಿಂದ ಕಲಶ ಸಮಾರೋಪ ಏರ್ಪಡಿಸಿದ್ದರು. ಒಂದು ಲಕ್ಷ ಭಕ್ತರಿಗೆ ಅನ್ನ ಸಂತರ್ಪಣೆಯ ವ್ಯವಸ್ಥೆ ನಡೆದಿತ್ತು. ಅದಾಗಲೇ ಭೋಜನ ಸಮಯ ಸಮೀಪಿಸತೊಡಗಿತ್ತು; ಗೋಧಿ ಹುಗ್ಗಿಗೆ ಬೆಲ್ಲವೇ ಕೊರತೆಯಾಗಿಬಿಟ್ಟಿತು. ಗಾಬರಿಯಾದ ಅಡುಗೆಯವರು ಗುರುವಿಗೆ ತಿಳಿಸಿದರು. ಮಹಾದೇವಪ್ಪಯ್ಯನವರು ಒಂದು ಕ್ಷಣ ಕಣ್ಮುಚ್ಚಿ ಹೇಳಿದರು, “ತುಸು ತಡೆಯಿರಿ…

ಈಗ ಮಾರುತಿ ದೇವರು ನೂರು ಸೇರು ಬೆಲ್ಲ ಹೊತ್ತು ತರುತ್ತಾನೆ’ ಎಂದು. ಅದರಂತೆ ಮುಂದೆ ತುಸುವೇ ಹೊತ್ತಿನಲ್ಲಿ ನೂರಾರು ಜನರು ಬೆಲ್ಲದ ಪೆಂಟಿಗಳನ್ನು ಹೊತ್ತು ತರುತ್ತಾರೆ. ಅಡುಗೆಗೆ ಹಾಕಲು ಅವನ್ನು ಒಡೆದಾಗ ಒಂದರಲ್ಲಿ ಪುಟಾಣಿ, ಚೆಂದದ ಮಾರುತಿ ಶಿಲ್ಪ ಸಿಗಬೇಕೆ? ಅಂದೇ ಅಲ್ಲಿ ಮಾರುತಿಗೆ ಪೂಜೆ ಸಲ್ಲಿಸಿ, ನಂತರ ತಮ್ಮ ನೆಲೆಗೆ ಒಯ್ದು ಸ್ತಾಪಿಸಿದ್ದಾರೆ. ಅದೀಗ “ಬೆಲ್ಲದ ಹನುಮಪ್ಪ’ ಎಂಬ ಹೆಸರಿನಿಂದಲೇ ಪೂಜಿಸಲ್ಪಡುತ್ತಿದೆ’.

ಹೌದು! ಹನುಮಂತ, ಶಿವನಂತೆಯೇ ನಂಬಿದ ಭಕ್ತರಿಗೆ ಬಹುಬೇಗ ಒಲಿಯುವಾತ. ಅದಕ್ಕೇ ಈಚೆಗೆ ವಿದೇಶಿಯರೂ ಈತನನ್ನು “ಮಂಕೀ ಗಾಡ್‌’ ಎಂದು ಆರಾಧಿಸತೊಡಗಿದ್ದಾರೆ. ಈತ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ, ಐಟಿ ದಿಗ್ಗಜರಾದ ಸ್ಟೀವ್‌ ಜಾಬ್ಸ್, ಮಾರ್ಕ್‌ ಝುಕರ್‌ಬರ್ಗ್‌ರವರಿಂದಲೂ ಪೂಜಿತನಾಗಿದ್ದಾನೆ. ಅಮೆರಿಕದ ಹಾರ್ವರ್ಡ್‌ ವಿಶ್ವವಿದ್ಯಾಲಯ ಈಚೆಗೆ ರಾಮಾಯಣ, ಮಹಾಭಾರತಗಳ ಅಧ್ಯಯನಕ್ಕಾಗಿ ವಿಶೇಷ ಪೀಠ ಶುರುಮಾಡಿವೆಯಂತೆ. ರಾಮಜನ್ಮಭೂಮಿಯ ಅಯೋಧ್ಯಾ ಟ್ರಸ್ಟ್‌ಗೆ ಸೇರಿಸಿಕೊಂಡು ಅಭಿವೃದ್ಧಿಪಡಿಸಲಿದೆಯಂತೆ.

ಯಾವತ್‌ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇಣ
ತಾವದ್ರಾಮಾಯಣ ಕಥಾ ಲೋಕೇಷು ಪ್ರಚರಿಷ್ಯತೀಣಣ’

“ಭೂಮಿಯ ಮೇಲೆ ಪರ್ವತಗಳು, ನದಿಗಳು, ಇರುವವರೆಗೆ ರಾಮಾಯಣ ಕಥೆಯ ಪ್ರಚಾರವೂ ನಡೆಯುತ್ತಲೇ ಇರುತ್ತದೆ’- ಎಂದು ಬ್ರಹ್ಮ ಹೇಳಿರುವ ಮಾತು ನಿಜವಾಗುತ್ತಿದೆ.

* ವಸುಂಧರಾ ದೇಸಾಯಿ

Advertisement

Udayavani is now on Telegram. Click here to join our channel and stay updated with the latest news.

Next