Advertisement

ಗಾಂಧೀಜಿ ಜೀವನ ತೆರೆದ ಪುಸ್ತಕ: ಎಸಿ ಕೃಷ್ಣಮೂರ್ತಿ

06:25 AM Jan 31, 2019 | |

ಪುತ್ತೂರು: ಮಹಾತ್ಮಾ ಗಾಂಧೀಜಿ ಅವರ ಆತ್ಮಚರಿತ್ರೆಯನ್ನು ಎಲ್ಲರೂ ಓದಲೇಬೇಕು. ತನ್ನ ಜೀವನದ ಎಲ್ಲ ಘಟನೆಗಳನ್ನು ತೆರೆದ ಪುಸ್ತಕದಂತೆ ಅದರಲ್ಲಿ ವಿವರಿಸಿದ್ದಾರೆ. ಇದರಿಂದಾಗಿ ಮಹಾತ್ಮಾ ಗಾಂಧೀಜಿ ಮಹಾನ್‌ ವ್ಯಕ್ತಿ ಎನ್ನುವುದು ವೇದ್ಯವಾಗುತ್ತದೆ ಎಂದು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಹೇಳಿದರು.

Advertisement

ಗಾಂಧಿ ಕಟ್ಟೆ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ಜ. 31ರಂದು ಬೆಳಗ್ಗೆ 10.58ಕ್ಕೆ ಪುತ್ತೂರು ಗಾಂಧೀ ಕಟ್ಟೆಯಲ್ಲಿ ನಡೆದ ಹುತಾತ್ಮ ದಿನಾಚರಣೆಯಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಮಹಾತ್ಮ ಎಲ್ಲರಿಗೂ ಆದರ್ಶ
ಗಾಂಧೀಜಿ ಜೀವನದ ಅನುಭವ, ಚಿಂತನೆ, ಋಣಾತ್ಮಕವಾದ ಆಲೋಚನೆ ಹೀಗೆ ಎಲ್ಲವನ್ನೂ ತನ್ನ ಆತ್ಮ ಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಹೀಗೆ ತನ್ನೆಲ್ಲ ವಿಷಯವನ್ನು ತೆರೆದ ಪುಸ್ತಕದಂತೆ ಹೇಳಿಕೊಳ್ಳಲು ಯಾರಿಗೂ ಸಾಧ್ಯವಾಗುವುದಿಲ್ಲ. ಆದರೆ ಗಾಂಧೀಜಿ ಹೇಳಿಕೊಂಡಿದ್ದಾರೆ. ಆದ್ದರಿಂದ ಅವರು ಮಹಾನ್‌ ವ್ಯಕ್ತಿ. ಐನ್‌ಸ್ಟೈನ್‌ ಅವರಂತಹ ಮಹಾನ್‌ ವ್ಯಕ್ತಿಗಳು ಕೂಡ ಗಾಂಧೀಜಿಯ ಜೀವನವನ್ನು ಆದರ್ಶ ಎಂದು ಸಾರುತ್ತಾರೆ ಎಂದರು.

ಮಹಾತ್ಮಾ ಗಾಂಧೀಜಿ ನಮಗೆ ಸಂತನಾಗಿ, ದಾರ್ಶನಿಕವಾಗಿ, ಸುಧಾರಣಾವಾದಿಯಾಗಿ, ಚಿಂತಕನಾಗಿ ಕಾಣಸಿಗುತ್ತಾರೆ. ವಿಶ್ವದಲ್ಲೇ ಮೊದಲ ಬಾರಿಗೆ ಶಾಂತಿಯಿಂದ ಸ್ವಾತಂತ್ರ್ಯ ಗಳಿಸಿಕೊಂಡ ವ್ಯಕ್ತಿ ಗಾಂಧೀಜಿ. ಅವರ ಆದರ್ಶಗಳು ಇಂದಿನ ಯುವಜನರಿಗೆ ಪ್ರೇರಣೆ ಆಗಬೇಕು. ಅವರ ಜೀವನದ ಬಗ್ಗೆ ಹೆಚ್ಚೆಚ್ಚು ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಯುವಕರು ಗಾಂಧೀಜಿಯನ್ನು ಆದರ್ಶವಾಗಿ ತೆಗೆದುಕೊಳ್ಳಬಹುದು ಎಂದರು.

ತಹಶೀಲ್ದಾರ್‌ ಡಾ| ಪ್ರದೀಪ್‌ ಕುಮಾರ್‌, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಕೆಪಿಸಿಸಿ ಸದಸ್ಯ ಎಂ.ಬಿ. ವಿಶ್ವನಾಥ ರೈ, ನಗರ ಕಾಂಗ್ರೆಸ್‌ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಪತ್ರಕರ್ತ ಯು.ಪಿ. ಶಿವಾನಂದ್‌ ಉಪಸ್ಥಿತರಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು ವಂದಿಸಿದರು. ಕೃಷ್ಣಪ್ರಸಾದ್‌ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Advertisement

ಉಪವಾಸ ಧರಣಿ
ಕೃಷ್ಣಪ್ರಸಾದ್‌ ಆಳ್ವ ಮಾತನಾಡಿ, ಗಾಂಧಿ ಕಟ್ಟೆ ಶಿಥಿಲಗೊಂಡಿದೆ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡುವ ಅಗತ್ಯವಿದೆ. ಗಾಂಧಿ ಕಟ್ಟೆಗಾಗಿ ಉಪವಾಸ ಧರಣಿ ನಡೆಸುವ ಮೊದಲು ಅಧಿಕಾರಿಗಳು, ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ನೀಡಿದರೆ ಉತ್ತಮ ಎಂದರು.

ಆದರ್ಶವನ್ನು ತಿಳಿಹೇಳಬೇಕಿದೆ
ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಮಾತನಾಡಿ, ಸಮಾಜಕ್ಕಾಗಿ, ದೇಶಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡ ವ್ಯಕ್ತಿ ಗಾಂಧೀಜಿ. ಪ್ರತಿ ಶಾಲೆ, ಗಲ್ಲಿಗಳಲ್ಲಿ ಅವರ ಕಾರ್ಯಕ್ರಮ ಹಮ್ಮಿಕೊಂಡಾಗ ಮಾತ್ರ ಅವರ ಬಗ್ಗೆ ಮಕ್ಕಳಿಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯ. ಅವರ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next