Advertisement

ಲಡಾಖ್: ಹಲೋ…ನಾನಿನ್ನೂ ಜೀವಂತವಾಗಿದ್ದೇನೆ; ಪತ್ನಿಗೆ ಕರೆ ಮಾಡಿದ “ಹುತಾತ್ಮ”ಯೋಧ!

03:13 PM Jun 18, 2020 | Nagendra Trasi |

ಬಿಹಾರ:ಲಡಾಖ್ ನ ಗಾಲ್ವಾನ್ ಪ್ರದೇಶದಲ್ಲಿ ನಡೆದ ಭಾರತ, ಚೀನಾ ಸಂಘರ್ಷದಲ್ಲಿ ಹುತಾತ್ಮರಾಗಿದ್ದರು ಎಂದುಕೊಂಡಿದ್ದ ಯೋಧರೊಬ್ಬರು ಬುಧವಾರ ಪತ್ನಿಗೆ ಕರೆ ಮಾಡಿ “ಅಭಿ ಜಿಂದಾ ಹೂ”(ನಾನಿನ್ನೂ ಬದುಕಿದ್ದೇನೆ) ಎಂದು ಹೇಳಿದ್ದ ಘಟನೆ ಬಿಹಾರದ ಸರಣ್ ಜಿಲ್ಲೆಯಲ್ಲಿ ನಡೆದಿದೆ.

Advertisement

ಗಾಲ್ವಾನ್ ನ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಬಿಹಾರ್ ಸರಣ್ ಜಿಲ್ಲೆಯ ಸುನೀಲ್ ರಾಯ್ ಎಂಬ ಯೋಧ ಹುತಾತ್ಮರಾಗಿರುವುದಾಗಿ ಸೇನಾ ಅಧಿಕಾರಿಗಳು ದೂರವಾಣಿ ಕರೆ ಮಾಡಿ ಮನೆಯವರಿಗೆ ಮಾಹಿತಿ ನೀಡಿದ್ದರು. ಆದರೆ ಬುಧವಾರ ಹುತಾತ್ಮ ಯೋಧ ರಾಯ್ ಪತ್ನಿ ಮೆನೇಕಾ ರಾಯ್ ಗೆ ಕರೆ ಮಾಡಿ ನಾನಿನ್ನೂ ಬದುಕಿದ್ದೇನೆ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.

ಈ ಗೊಂದಲಕ್ಕೆ ಕಾರಣವೇನು ಗೊತ್ತಾ?
ಈ ರೀತಿ ಗೊಂದಲಕ್ಕೆ ಕಾರಣವಾಗಿದ್ದು, ಇಬ್ಬರು ಯೋಧರು ಹೆಸರು ಒಂದೇಯಾಗಿತ್ತು ಅದು ಸುನೀಲ್ ರಾಯ್. ಅಷ್ಟೇ ಅಲ್ಲ ಇಬ್ಬರ ತಂದೆಯ ಹೆಸರು (ಸುಖ್ ದೇವೋ ರಾಯ್) ಕೂಡಾ ಒಂದೇ ತೆರನಾಗಿದ್ದದ್ದು! ನಿಜಕ್ಕೂ ಹುತಾತ್ಮರಾಗಿದ್ದದ್ದು ಹವಾಲ್ದಾರ್ ಸುನೀಲ್. ಭಾರತ, ಚೀನಾ ಸೈನಿಕರ ನಡುವೆ ಲಡಾಖ್ ನಲ್ಲಿ ನಡೆದ ಘರ್ಷಣೆಯಲ್ಲಿ ಸುನೀಲ್ ಹುತಾತ್ಮರಾಗಿದ್ದರು.

ಮಂಗಳವಾರ ಸಂಜೆ ಸೇನಾ ಅಧಿಕಾರಿಗಳು ಬಿಹಾರದ ಸರಣ್ ಜಿಲ್ಲೆಯಲ್ಲಿರುವ ಸುನೀಲ್ ಪತ್ನಿ ಮನೇಕಾಗೆ ದೂರವಾಣಿ ಕರೆ ಮಾಡಿ ಪತಿ ಹುತಾತ್ಮರಾಗಿರುವ ವಿಷಯ ತಿಳಿಸಿದ್ದರು. ಸರಣ್ ಜಿಲ್ಲಾಧಿಕಾರಿಯೂ ಈ ಮಾಹಿತಿ ಬಂದಿರುವುದನ್ನು ಖಚಿತಪಡಿಸಿದ್ದರು. ಹೆಚ್ಚಿನ ಮಾಹಿತಿಗಾಗಿ ನಾವು ಕಾಯುತ್ತಿದ್ದೇವೆ ಎಂದು ತಿಳಿಸಿದ್ದರು.

ಏತನ್ಮಧ್ಯೆ ಬುಧವಾರ ಸುನೀಲ್ ಖುದ್ದಾಗಿ ಪತ್ನಿಗೆ ಕರೆ ಮಾಡಿದಾಗ ಪತ್ನಿಗೆ ಅಚ್ಚರಿ! ನಂತರ ಸುನೀಲ್ ತಾನು ಜೀವಂತವಾಗಿರುವುದಾಗಿ ತಿಳಿಸಿದ್ದು, ಗಡಿಯಲ್ಲಿ ನಿಯೋಜನೆಗೊಂಡಿರುವ ಇಬ್ಬರು ಹೆಸರು ಒಂದೇಯಾಗಿದ್ದ ಪರಿಣಾಮ ಈ ಗೊಂದಲಕ್ಕೆ ಕಾರಣವಾಯ್ತು ಎಂದು ತಿಳಿಸಿದ್ದರು. ಹುತಾತ್ಮ ಯೋಧ ಸುನೀಲ್ ಲಡಾಖ್ ನಲ್ಲಿದ್ದು, ಮತ್ತೊಬ್ಬ ಯೋಧ (ಜೀವಂತವಾಗಿರುವ) ಸುನೀಲ್ ಲೇಹ್ ನಲ್ಲಿ ಕರ್ತವ್ಯದಲ್ಲಿದ್ದರು ಎಂದು ವರದಿ ವಿವರಿಸಿದೆ. ದೂರವಾಣಿಯಲ್ಲಿ ನನ್ನ ಪತಿ ಜತೆ ಮಾತನಾಡಿದ ಮೇಲೆ ನನಗೆ ದೇವರು ಹೊಸ ಜನ್ಮ ಕೊಟ್ಟಂತಾಗಿದೆ ಎಂದು ಮೆನೇಕಾ ಪ್ರತಿಕ್ರಿಯೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next