ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಚಿತ್ರ “ಮಾರ್ಟಿನ್’ ಅಕ್ಟೋಬರ್ 11ಕ್ಕೆ ತೆರೆಕಾಣುತ್ತಿದೆ. ಕನ್ನಡದಿಂದ ಈ ವರ್ಷ ಬಿಡುಗಡೆ ಯಾಗುತ್ತಿರುವ ಬಿಗ್ ಬಜೆಟ್ ಚಿತ್ರದ ಜೊತೆಗೆ ನಿರೀಕ್ಷಿತ ಚಿತ್ರ ಕೂಡಾ ಹೌದು.
ಈಗ ಈ ಚಿತ್ರಕ್ಕೆ ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ “ಮಾರ್ಟಿನ್’ ಜೊತೆ ಕೈ ಜೋಡಿಸಿದೆ. ಅದು ಮೈತ್ರಿ ಮೂವೀ ಮೇಕರ್. “ಪುಷ್ಪಾ’ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಈ ಸಂಸ್ಥೆ ಈಗ “ಮಾರ್ಟಿನ್’ ಚಿತ್ರದ ವಿತರಣೆಗೆ ಮುಂದಾಗಿದೆ.
ನಿಜಾಂ ಏರಿಯಾದ ವಿತರಣೆಯ ಹಕ್ಕನ್ನು ಈ ಸಂಸ್ಥೆ ಪಡೆದುಕೊಂಡಿದೆ. ಇದರ ಜೊತೆಗೆ “ಮಾರ್ಟಿನ್’ ವಿತರಣೆಗೆ ಬೇರೆ ಬೇರೆ ಭಾಷೆಗಳ ಪ್ರತಿಷ್ಠಿತ ವಿತರಣಾ ಸಂಸ್ಥೆಗಳು ಮುಂದೆ ಬರುತ್ತಿವೆ. ಉದಯ್ ಕೆ. ಮೆಹ್ತಾ ನಿರ್ಮಾಣ ದಲ್ಲಿ “ಮಾರ್ಟಿನ್’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರ 13 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಎ.ಪಿ.ಅರ್ಜುನ್ ಈ ಸಿನಿಮಾದ ನಿರ್ದೇಶಕರು.
ಧ್ರುವ ಸರ್ಜಾ ಸಿನಿಮಾ ಎಂದರೆ ಅಲ್ಲಿ ಭರ್ಜರಿ ಆ್ಯಕ್ಷನ್‌ಗೆ ಕೊರತೆ ಇರುವುದಿಲ್ಲ. ಆದರೆ, ಈ ಬಾರಿ “ಮಾರ್ಟಿನ್’ ಚಿತ್ರ ಆ್ಯಕ್ಷನ್‌ನಲ್ಲಿ ಈ ಹಿಂದಿನ ಸಿನಿಮಾಗಳನ್ನು ಮೀರಿಸಲಿದೆ ಎಂಬುದು ಈಗಾಗಲೇ ಸಿನಿಮಾದ ತುಣುಕುಗಳನ್ನು ನೋಡಿದವರ ಮಾತು. ಅಲ್ಲಿಗೆ “ಮಾರ್ಟಿನ್’ ಮಾಸ್ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.
ಇನ್ನು, ಮಾರ್ಟಿನ್ ಚಿತ್ರದ ಮೊದಲ ಟ್ರೇಲರ್ ಇತ್ತೀಚೆಗೆ ಮುಂಬೈನಲ್ಲಿ ಬಿಡುಗಡೆಯಾಗಿದ್ದು, ಟ್ರೇಲರ್ ನೋಡಿ ಖುಷಿಯಾದ ವಿದೇಶಿ ಪತ್ರಕರ್ತರು, ಮೆಚ್ಚುಗೆ ವ್ಯಕ್ತಪಡಿಸುವುದಲ್ಲದೇ, ತಮ್ಮ ದೇಶಗಳಲ್ಲೂ ಮಾರ್ಟಿನ್‌ಗೆ ವ್ಯಾಪಕ ಪ್ರಚಾರ ಹಾಗೂ ಬೆಂಬಲ ನೀಡುವ ಮಾತುಗಳನ್ನಾಡಿದರು.
ಜತೆಗೆ ಮಾರ್ಟಿನ್ ಕಥೆಯ ಹುಟ್ಟು, ಬೆಳವಣಿಗೆ, ನಟನೆ, ಆ್ಯಕ್ಷನ್ ಸೇರಿದಂತೆ ಸಿನಿಮಾದ ಎಲ್ಲ ವಿಭಾಗಗಳ ತಮ್ಮ ಕುತೂಹಲದ ಪ್ರಶ್ನೆಗಳನ್ನು ಧ್ರುವ ಹಾಗೂ ಮಾರ್ಟಿನ್ ತಂಡದ ಮುಂದೆ ಇಟ್ಟರು. ಸದ್ಯ “ಮಾರ್ಟಿನ್’ಗೆ ಬೇರೆ ಬೇರೆ ಭಾಷೆಗಳಿಂದ ಬೇಡಿಕೆ ಬರುತ್ತಿರುವುದಂತೂ ಸುಳ್ಳಲ್ಲ.