ಬೆಂಗಳೂರು: ನಗರದ ಒಳ ಮತ್ತು ಹೊರ ವರ್ತುಲ ರಸ್ತೆಗಳಲ್ಲಿ ಅನಧಿಕೃತವಾಗಿ ತ್ಯಾಜ್ಯ ಹಾಗೂ ಕಟ್ಟಡ ಅವಶೇಷಗಳ ವಿಲೇವಾರಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮಾರ್ಷಲ್‌ಗಳ ಗಸ್ತು ವ್ಯವಸ್ಥೆ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ.
ನಗರದ ಹೊರ ಹಾಗೂ ಒಳ ವರ್ತುಲ ರಸ್ತೆಗಳ ಬದಿಯಲ್ಲಿ ರಾತ್ರಿ ವೇಳೆಯಲ್ಲಿ ತ್ಯಾಜ್ಯ ಹಾಗೂ ಕಟ್ಟಡ ಅವಶೇಷಗಳನ್ನು ಸುರಿಯಲಾಗುತ್ತಿದೆ. ಇದರಿಂದಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಬಿಬಿಎಂಪಿಗೆ ನೂರಾರು ದೂರುಗಳು ಬಂದಿದ್ದು, ಪೊಲೀಸರ ಸಹಕಾರದೊಂದಿಗೆ ಇಂತಹ ಚಟುವಟಿಕೆಗಳ ತಡೆಗೆ ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ.
ಸ್ಥಳೀಯ ಪೊಲೀಸರು ಸದಾ ಒಂದಿಲ್ಲ ಒಂದು ಕೆಲಸಕ್ಕೆ ನಿಯೋಜನೆ ಆಗುವುದರಿಂದ ಅವರ ಸೇವೆಯನ್ನು ಪಡೆಯಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ವರ್ತುಲ ರಸ್ತೆಗಳಲ್ಲಿ ರಾತ್ರಿ ವೇಳೆ ಗಸ್ತು ನಡೆಸಲು ಮಾರ್ಷಲ್‌ಗಳನ್ನು ನೇಮಿಸಿಕೊಳ್ಳಲು ಮುಂದಾಗಿರುವ ಅಧಿಕಾರಿಗಳು ಅನುಮೋದನೆಗಾಗಿ ಪ್ರಸ್ತಾವನೆಯನ್ನು ಮುಂದಿನ ಕೌನ್ಸಿಲ್ ಮುಂದಿಡಲಿದ್ದಾರೆ.
ವರ್ತುಲ ರಸ್ತೆ ಗಸ್ತು: ಈ ಹಿಂದೆ ಪಾಲಿಕೆಯಿಂದ ತ್ಯಾಜ್ಯ ವಿಲೇವಾರಿಗೆ ಬಳಸಿಕೊಳ್ಳುತ್ತಿರುವ ಕ್ವಾರಿಗಳಿಗೆ ಅತಿಕ್ರಮ ಪ್ರವೇಶ ಹಾಗೂ ಅನಧಿಕೃತ ತ್ಯಾಜ್ಯ ವಿಲೇವಾರಿಯನ್ನು ತಡೆಯುವ ಉದ್ದೇಶದಿಂದ ಮೂರು ಕ್ವಾರಿಗಳ ಬಳಿ ಮೂರು ಪಾಳಿಯಲ್ಲಿ ಕೆಲಸ ಮಾಡಲು 20 ಮಂದಿ ಮಾರ್ಷಲ್‌ಗಳನ್ನು ನೇಮಿಸಿಕೊಳ್ಳಲಾಗಿತ್ತು. ಇದರೊಂದಿಗೆ ಪ್ರತಿ ವಾರ್ಡ್‌ಗೆ ಒಬ್ಬರು ಮಾರ್ಷಲ್‌ಗಳನ್ನು ನೇಮಿಸಿಕೊಳ್ಳು ಪ್ರಸ್ತಾವ ಪಾಲಿಕೆಯ ಮುಂದಿದ್ದು, ಕೌನ್ಸಿಲ್ ಅನುಮೋದನೆ ಬಾಕಿಯಿದೆ.
ಮಾರುಕಟ್ಟೆಗೂ ನೇಮಕ: ಕ್ವಾರಿ ಹಾಗೂ ವರ್ತುಲ ರಸ್ತೆಗಳೊಂದಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಮಾರುಕಟ್ಟೆಗಳಲ್ಲಿಯೂ ಮಾರ್ಷಲ್‌ಗಳನ್ನು ನೇಮಿಸಲು ಅಧಿಕಾರಿಗಳು ನಿರ್ಧರಿಸಿದ್ದು, ಆ ಮೂಲಕ ಮಾರುಕಟ್ಟೆಗಳಲ್ಲಿ ನಡೆಯುವ ಅಕ್ರಮ ಚುಟುವಟಿಕೆಗಳಿಗೆ ಕಡಿವಾಣ ಹಾಕಲು ತೀರ್ಮಾನಿಸಿದ್ದಾರೆ. ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವುದು, ತ್ಯಾಜ್ಯ ವಿಂಗಡಣೆ ಸೇರಿದಂತೆ ಹಲವಾರು ಶಿಸ್ತು ಕ್ರಮಗಳಿಗೆ ಮಾರ್ಷಲ್‌ಗಳನ್ನು ನೇಮಿಸಿಕೊಳ್ಳು ಮುಂದಾಗಿದ್ದೇವೆ ಎಂದು ಪಾಲಿಕೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ವಲಯಕ್ಕಿಬ್ಬರು ಮಾರ್ಷಲ್: ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ರಾತ್ರಿ ವೇಳೆ ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಗೂ ಕಟ್ಟಡ ಅವಶೇಷಗಳನ್ನು ವಿಲೇವಾರಿ ಮಾಡುವವರ ವಿರುದ್ಧ ಕ್ರಮಕ್ಕೆ ಇಬ್ಬರು ಮಾರ್ಷಲ್‌ಗಳನ್ನು ನೇಮಿಸಿಕೊಳ್ಳಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಇದರೊಂದಿಗೆ ಪ್ರತಿ ಮಾರುಕಟ್ಟೆಗೆ ಒಬ್ಬರು ಅಥವಾ ಇಬ್ಬರು ಮಾರ್ಷಲ್‌ಗಳನ್ನು ನೇಮಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ.
ವರ್ತುಲ ರಸ್ತೆಗಳಲ್ಲಿ ರಾತ್ರಿ ವೇಳೆಯಲ್ಲಿ ತ್ಯಾಜ್ಯ, ಕಟ್ಟಡ ಅವಶೇಷ ತಂದು ಸುರಿಯುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರತಿ ವಲಯಕ್ಕೆ ಇಬ್ಬರಂತೆ ಮಾರ್ಷಲ್‌ಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲೂ ಶಿಸ್ತು ತರುವ ಉದ್ದೇಶದಿಂದ ಅಲ್ಲೂ ಮಾರ್ಷಲ್‌ಗಳ ನೇಮಕಕ್ಕೆ ನಿರ್ಧರಿಸಿದ್ದು, ಪ್ರಸಾವನ್ನು ಅನುಮತಿಗಾಗಿ ಕೌನ್ಸಿಲ್ ಮುಂದಿಡಲಾಗುವುದು.
-ಸಫ್ರಾಜ್ ಖಾನ್, ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ