Advertisement

ಪೌರಕಾರ್ಮಿಕರಿಂದ ಅರೆಬೆತ್ತಲೆ ಪ್ರತಿಭಟನೆ

04:56 PM May 23, 2019 | Team Udayavani |

ಗದಗ: ಏಳು ತಿಂಗಳಿಂದ ಬಾಕಿ ಇರುವ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪೌರಕಾರ್ಮಿಕರು ಇಲ್ಲಿನ ನಗರಸಭೆ ಪ್ರವೇಶ ದ್ವಾರದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

Advertisement

ಕಳೆದ ಆರೇಳು ತಿಂಗಳಿಂದ ವೇತನವಿಲ್ಲದೇ ಪೌರ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದು, ಮಕ್ಕಳ ಶಾಲಾ-ಕಾಲೇಜು ಫೀ ತುಂಬುವುದಕ್ಕೂ ಪರದಾಡುವಂತಾಗಿದೆ. ನಗರಸಭೆ ಇದೇ ಧೋರಣೆ ಮುಂದುವರಿಸಿದರೆ ಆತ್ಮಹತ್ಯೆಗೂ ಹಿಂಜರಿಯುವುದಿಲ್ಲ ಎಂದು ಪ್ರತಿಭಟನಾನಿರತ ಪೌರ ಕಾರ್ಮಿಕರು ಎಚ್ಚರಿಸಿದರು.

ಪ್ರತಿಭಟನಾ ನಿರತರ ಮನವಿ ಆಲಿಸಿದ ನಗರಸಭೆ ಪೌರಾಯುಕ್ತ ದೀಪಕ್‌ ಹರಡೆ ಮನವಿ ಸ್ವೀಕರಿಸಿ, ತಾಂತ್ರಿಕ ತೊಂದರೆ ಹಾಗೂ ನಗರಸಭೆ ಸಿಬ್ಬಂದಿ ಅಶೋಕ ದೊಡ್ಡಮನಿ ಎಂಬುವವರ ನಿರ್ಲಕ್ಷ್ಯದಿಂದ ವೇತನ ಬಟವಡೆ ವಿಳಂಬವಾಗಿದೆ. ಅಶೋಕ ದೊಡ್ಡಮನಿ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗುವುದು. ಅಲ್ಲದೇ, 3-4 ದಿನಗಳಲ್ಲಿ ಪೌರಕಾರ್ಮಿಕರಿಗೆ ನಾಲ್ಕು ತಿಂಗಳ ವೇತನ ಬಿಡುಗಡೆ ಮಾಡಲಾಗುವುದು. ಬಳಿಕ ತಾಂತ್ರಿಕ ಸಮಸ್ಯೆ ಪರಿಹರಿಸಿ, ಬಾಕಿ ಇರುವ ಸಂಪೂರ್ಣ ವೇತನ ಪಾವತಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಪೌರ ಕಾರ್ಮಿಕರ ಮಹಾಸಂಘದ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ರಾಮಗಿರಿ, ಪೌರಕಾರ್ಮಿಕ ಮುಖಂಡ ಎಸ್‌.ಪಿ. ಬಳ್ಳಾರಿ, ನಾಗೇಶ ಬಳ್ಳಾರಿ, ಹೇಮೇಶ ಯಟ್ಟಿ, ಚಂದ್ರಶೇಖರ ಆರ್‌. ಹಾದಿಮನಿ, ವೆಂಕಟೇಶ ಬಳ್ಳಾರಿ, ಕೆಂಚಪ್ಪ ಪೂಜಾರ, ಅರವಿಂದ ಕುರ್ತಕೋಟಿ, ಯಲ್ಲಪ್ಪ ರಾಮಗಿರಿ, ಅನಿಲ ಕಾಳೆ, ಪರಶು ಕಾಳೆ, ಮುತ್ತು ಬಿಳೆಯಲಿ, ಲಕ್ಷ್ಮಣ ಕೊಟ್ನಿಕಲ್, ಆಂಜನೇಯ ಪೂಜಾರ, ರಮೇಶ ಬಾರಕೇರ, ಅಣ್ಣಪ್ಪ ಜಂಬಲದಿನ್ನಿ, ವಿಶ್ವನಾಥ ದೊಡ್ಡಮನಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next