ಹೊಸದಿಲ್ಲಿ : ಕಳೆದ ಶನಿವಾರ ಇಲ್ಲಿನ ಆರ್ಮಿ ರಿಸರ್ಚ್ ಆ್ಯಂಡ್ ರೆಫರಲ್ ಹಾಸ್ಪಿಟಲ್‌ನಲ್ಲಿ ನಿಧನ ಹೊಂದಿದ 98ರ ಹರೆಯದ ದೇಶದ ಹಿರಿಯ ವಾಯು ಪಡೆ ಮಾರ್ಶಲ್ ಅರ್ಜನ್ ಸಿಂಗ್ ಅವರ ಅಂತ್ಯ ಕ್ರಿಯೆ ಇಂದು ಸೋಮವಾರ ದಿಲ್ಲಿಯ ಬ್ರಾರ್ ಚೌಕದಲ್ಲಿ ಪೂರ್ಣ ಸರಕಾರಿ ಮತ್ತು ಮಿಲಿಟರಿ ಗೌರವಗಳೊಂದಿಗೆ ವಿಧ್ಯುಕ್ತವಾಗಿ ನಡೆಯಿತು.
ಭಾರತ ಮಾತೆಯ ಅಗಲಿದ ಹೆಮ್ಮೆಯ ವೀರ ಪುತ್ರನ ಗೌರವಾರ್ಥವಾಗಿ ದಿಲ್ಲಿಯಲ್ಲಿನ ಎಲ್ಲ ಸರಕಾರಿ ಕಾರ್ಯಾಲಯಗಳ ಕಟ್ಟಡಗಳಲ್ಲಿ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಯಿತು.
ಅರ್ಜನ್ ಸಿಂಗ್ ಅವರು 1965ರ ಭಾರತ-ಪಾಕ್ ಯುದ್ಧದ ಹೀರೋ ಆಗಿದ್ದಾರೆ. ಭಾರತೀಯ ವಾಯು ಪಡೆಯಲ್ಲಿ 5 ಸ್ಟಾರ್ ಮಟ್ಟಕ್ಕೆ ಭಡ್ತಿ ಪಡೆದ ಏಕೈಕ ಮಾರ್ಶಲ್ ಆಗಿದ್ದಾರೆ.
ಅಗಲಿದ ಅರ್ಜನ್ ಸಿಂಗ್ ಗೌರವಾರ್ಥ ಫ್ಲೈ ಪಾಸ್ಟ್ ನಡೆದ ಬಳಿಕ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ಗುಚ್ಚಗಳನ್ನು ಇರಿಸಲಾಯಿತು. ಭಾರತೀಯ ವಾಯು ಪಡೆ 17 ಗನ್ ಸೆಲ್ಯೂಟ್‌ಗಳನ್ನು ವಿಧ್ಯುಕ್ತವಾಗಿ ಸಲ್ಲಿಸಲಾಯಿತು.
ಅರ್ಜನ್ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎಲ್ ಕೆ ಆಡ್ವಾಣಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ದೇಶದ ಭೂ, ವಾಯು ಮತ್ತು ನೌಕಾ ಪಡೆಯ ಎಲ್ಲ ಮೂರು ಮುಖ್ಯಸ್ಥರು ಭಾಗಿ ಆಗಿದ್ದಾರೆ.