ಪಣಜಿ: ಕೋವಿಡ್ ಲಾಕ್‍ನಿಂದಾಗಿ ಮದುವೆ ಸಮಾರಂಭ ನಡೆಸಲು ಸಾಧ್ಯವಾಗದ ಕಾರಣ ಮದುಮಗಳು ಮದುವೆಗೆ ಅನುಮತಿ ನೀಡುವಂತೆ ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠದ ಮೆಟ್ಟಿಲೇರಿದ ಘಟನೆ ನಡೆದಿದೆ.
ಈ ಪ್ರಕರಣದಲ್ಲಿ ಮದುವೆಗೆ ಷರತ್ತುಬದ್ಧ ಪರವಾನಗಿ ನೀಡುವಂತೆ ನ್ಯಾಯಾಲಯವು ದಕ್ಷಿಣಗೋವಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಪೊಂಡಾದ ಶ್ರುತಿ ವೈದ್ಯ ಇವರ ವಿವಾಹವು ಮೇ 30 ರಂದು ಬೆಳಿಗ್ಗೆ 9.30 ಕ್ಕೆ ನಿಗದಿಯಾಗಿತ್ತು. ಆದರೆ ರಾಜ್ಯದಲ್ಲಿ ಮೇ 31 ರವರೆಗೆ ಕರ್ಫ್ಯೂ ಜಾರಿಯಾಗಿ ಮದುವೆ ಸಮಾರಂಭ ನಡೆಸಲು ನಿರ್ಬಂಧ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಮದುವೆಗೆ ಪರವಾನಗಿ ಪಡೆಯಲು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿತ್ತು, ಆದರೆ ಜಿಲ್ಲಾಧಿಕಾರಿಗಳು ಮದುವೆ ಸಮಾರಂಭಕ್ಕೆ ಪರವಾನಗಿ ನೀಡಿರಲಿಲ್ಲ.
ಇದನ್ನೂ ಓದಿ : ವೆಂಟಿಲೇಟರ್‌ನಲ್ಲಿದ್ದು ಕೋವಿಡ್ ವಿರುದ್ಧ ಗೆಲುವು ಕಂಡ 75ರ ಅಜ್ಜಿ
ಈ ಹಿನ್ನೆಲೆಯಲ್ಲಿ ಮದುಮಗಳು ಶ್ರುತಿ ಮುಂಬಯಿ ಉಚ್ಛ ನ್ಯಶಾಯಾಲಯದ ಗೋವಾ ಪೀಠಕ್ಕೆ ಅರ್ಜಿ ಸಲ್ಲಿಸಿ ಮೇ 30 ರಂದು ತಮ್ಮ ಮದುವೆ ಸಮಾರಂಭಕ್ಕೆ ಪರವಾನಗಿ ನೀಡುವಂತೆ ಮನವಿ ಮಾಡಿದ್ದರು. ನ್ಯಾಯಾಲಯವು ಷರತ್ತುಬದ್ಧ ರೀತಿಯಲ್ಲಿ ಈ ಮದುವೆಗೆ ಸಮ್ಮತಿ ಸೂಚಿಸಿರುವುದರಿಂದ ಈ ಮದುವೆ ಸಮಾರಂಭವು ಕೇರಿ-ಪೊಂಡಾದ ಶ್ರೀ ವಿಜಯದುರ್ಗಾ ದೇವಸ್ಥಾನದ ಸಭಾಗೃಹದಲ್ಲಿ ಮೇ 30 ರಂದು ನಡೆಯಲಿದೆ.