ಅಕ್ಕಿಆಲೂರು: ಪಟ್ಟಣದ ಕುಮಾರ ನಗರದ ನಿವಾಸಿ ಪೊಲೀಸ್ ಪೇದೆ ಕರಬಸಪ್ಪ ಗೊಂದಿ, ವಿನುತಾ ಗೊಂದಿಯವರ ಮದುವೆ ಆಮಂತ್ರಣ ಪ್ರತಿಕೆಯನ್ನು ಇನ್‌ಕ್ರೆಡಿಬಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಸಾಂಪ್ರದಾಯಕ, ಸಾಂಸ್ಕೃತಿಕ ಮತ್ತು ಮೌಲ್ಯಯುತ ಪತ್ರಿಕೆ ಎಂದು ಪರಿಗಣಿಸಿ ವಿಶ್ವದಾಖಲೆಗೆ ಸೇರ್ಪಡೆ ಮಾಡಿದೆ.
ನೇತ್ರದಾನ, ರಕ್ತದಾನ ಮತ್ತು ದೇಹದಾನ ಜಾಗೃತಿಯಲ್ಲಿ ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ವಿಶೇಷ ಛಾಪು ಮೂಡಿಸಿ ಈ ಭಾಗದ ಜನತೆ ಹೆಮ್ಮೆಗೆ ಕಾರಣವಾಗಿರುವ ಪೊಲೀಸ್ ಪೇದೆ ಕರಬಸಪ್ಪ ಗೊಂದಿ, 2014ರಲ್ಲಿ ವಿನುತಾ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ವತಃ ತಾವೇ ತಮ್ಮ ಕೈಬರಹದೊಂದಿಗೆ ರಚಿಸಿದ್ದ ಕರಬಸಪ್ಪ ಗೊಂದಿ, ಸಪ್ತಪದಿ, ಮಾಂಗಲ್ಯ ಧಾರಣೆ, ಅಕ್ಷತೆ ಹಾಕುವುದು, ಕನ್ಯಾದಾನ, ಕಂಕಣ ಧಾರಣೆಗಳ ಮಹತ್ವ, ಹಾಗೂ ಸನಾತನ ಹಿಂದೂ ಧರ್ಮದ ಮದುವೆ ಸಾಂಪ್ರದಾಯಿಕ ವಿಧಿ ವಿಧಾನಗಳ ಹಿಂದೆ ಇರುವ ವೈಜ್ಞಾನಿಕ ವಿವರಣೆಗಳನ್ನು ಸಹ ನೀಡಿ ಒಟ್ಟು 8 ಪುಟದ ವಿವಾಹ ಆಮಂತ್ರಣ ಪತ್ರಿಕೆ ರಚಿಸಿದ್ದರು. ಅಷ್ಟೆ ಅಲ್ಲದೇ ಮದುವೆ ದಿನ ನೂತನ ದಂಪತಿ ನೇತ್ರದಾನ ಒಪ್ಪಿಗೆ ಪತ್ರ ಬರೆದುಕೊಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ನಂತರದ ದಿನದಲ್ಲಿ ಪತ್ನಿ ವಿನುತಾ ಅವರ ಸೀಮಂತ ಕಾರ್ಯವನ್ನು ಅಂಧ ಮಕ್ಕಳಿಂದ ನೆರವೇರಿಸಿ ಗಮನ ಸೆಳೆದಿದ್ದ ಕರಬಸಪ್ಪ, ಈವರೆಗೂ ಪ್ರತಿ ತಿಂಗಳು ತಮಗೆ ಬರುವ ವೇತನದಲ್ಲಿ ಅವರ ಮನೆ ಎದುರು ಉಚಿತ ನೇತ್ರ ತಪಾಸಣೆ ಶಿಬಿರ ಏರ್ಪಡಿಸುತ್ತಾರೆ. ಈ ವರೆಗೂ ಹಲವಾರು ಭಾರಿ ನೇತ್ರದಾನ ಶಿಬಿರಗಳನ್ನು ಆಯೋಜನೆ ಮಾಡಿದ್ದಾರೆ. ಅಕ್ಕಿಆಲೂರು ಹಾಗೂ ಸುತ್ತಲಿನ ಭಾಗದಲ್ಲಿ ನಿಧನ ಹೊಂದಿದವರ ಪೈಕಿ 20ಕ್ಕೂ ಹೆಚ್ಚು ಜನರ ನೇತ್ರವನ್ನು ದಾನವಾಗಿ ಪಡೆದು ಅಂಧರ ಬಾಳಿಗೆ ಬೆಳಕಾಗಿರುವ ಕರಬಸಪ್ಪ ಅವರ ವಿಶಿಷ್ಟ ಮದುವೆ ಆಮಂತ್ರಣ ವಿಶ್ವದಾಖಲೆಗೆ ಸೇರ್ಪಡೆಯಾಗಿ ಜನತೆಯ ಪ್ರಶಂಸೆಗೆ ಪಾತ್ರವಾಗಿದೆ.
ನಮ್ಮ ಇಲಾಖೆಯಲ್ಲಿರುವ ಪ್ರತಿಯೊಬ್ಬರು ಒತ್ತಡ ಬದುಕಿನಲ್ಲಿ ಜೀವಿಸುತ್ತಾರೆ. ಸಮರ್ಥ ಕಾರ್ಯ ನಿರ್ವಹಿಸಿ ಕರಬಸಪ್ಪ ಗೊಂದಿ ಸದಾ ನೇತ್ರದಾನ, ರಕ್ತದಾನ ಜಾಗೃತಿಯಂತಹ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದರಿಂದ ನಮ್ಮ ಇಲಾಖೆ ಹೆಮ್ಮೆ ಪಡುತ್ತದೆ.
.
ಕೆ.ಪರಶುರಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ