ಗಾಯಾಳು ಮಣಿಕಂಠ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆಯಾದ ಪ್ರತಾಪ್ ಮತ್ತು ಕೊಲೆ ಮಾಡಿದವರೆಲ್ಲರೂ ಸ್ನೇಹಿತರಾಗಿದ್ದು, ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಘಟನೆಯ ವಿವರಮಣಿಕಂಠ ಗಾರೆ ಕೆಲಸ ಮಾಡುತ್ತಿದ್ದು, ಶನಿವಾರ ಬೆಳಗ್ಗೆ ನಿಡ್ಡೇಲ್‌ನಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಆಗ ಅಲ್ಲಿಗೆ ಬಂದಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರೆನ್ನಲಾದ ವಿನೇಶ್, ನೀಶೂ ಹಾಗೂ ಇತರ ನಾಲ್ಕು ಮಂದಿಯ ಗುಂಪು ಮನೆಗೆ ನುಗ್ಗಿ ಜಗಳಕ್ಕಿಳಿದಿದೆ. ಈ ವೇಳೆ ಮನೆಯಲ್ಲಿದ್ದ ಇತರರು ಅವರನ್ನು ಅಲ್ಲಿಂದ ಓಡಿಸಿದ್ದಾರೆ. ಇದೇ ತಂಡ ಸಂಜೆ ವೇಳೆ ಅದೇ ಪರಿಸರದ ಹಿಂಜಾವೇ ಕಾರ್ಯಕರ್ತ ಅಚ್ಚು ಎಂಬವನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿತ್ತು. ಅಲ್ಲಿಗೆ ಪ್ರತಾಪ್ ಹಾಗೂ ಮಣಿಕಂಠ ತೆರಳಿದ್ದನ್ನು ಕಂಡ ಅಚ್ಚು, ವಿನೇಶ್, ನೀಶೂ ಸೇರಿದಂತೆ ಸುಮಾರು 10 ಮಂದಿಯಿದ್ದ ತಂಡ ಅವರನ್ನು ಅಟ್ಟಾಡಿಸಿಕೊಂಡು ಹೋಗಿದೆ.
ತಡರಾತ್ರಿ 2 ಗಂಟೆಯ ಸುಮಾರಿಗೆ ಮರೋಳಿ ನಿಡ್ಡೇಲಬಳಿ ಕಾದು ಕುಳಿತಿದ್ದ ತಂಡ ಪ್ರತಾಪ್ ಹಾಗೂ ಮಣಿಕಂಠನ ಮೇಲೆ ತಲವಾರು, ಮಚ್ಚಿನಿಂದ ದಾಳಿ ನಡೆಸಿದೆ. ತಲೆ ಹಾಗೂ ಎಡ ತೊಡೆಗೆ ಗಂಭೀರ ಸ್ವರೂಪದ ಗಾಯಗೊಂಡ ಪ್ರತಾಪ್ ವಿಪರೀತ ರಕ್ತಸ್ರಾವಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಂಡ ಮಣಿಕಂಠನ ಮೇಲೂ ದಾಳಿ ನಡೆಸಿದೆ. ತಲೆ, ಕೈಗೆ ಗಂಭೀರ ಗಾಯಗೊಂಡಿದ್ದ ಮಣಿಕಂಠ ಓಡಿ ತಪ್ಪಿಸಿಕೊಂಡು ಮನೆಯೊಂದರ ಹಿಂಭಾಗ ಅವಿತು ಪ್ರಾಣ ಉಳಿಸಿಕೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಸ್ಥಳೀಯರು ಕಂಕನಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಕಟೀಲಿನಲ್ಲಿ ಯಕ್ಷಗಾನ ಬಯಲಾಟ ನಡೆಯುತ್ತಿದ್ದ ಸಂದರ್ಭ ಅಲ್ಲಿಗೆ ತೆರಳಿದ್ದ ವಿನೇಶ್ ಮತ್ತು ಇತರರು ಯಕ್ಷಗಾನ ಕಲಾವಿದರೊಬ್ಬರ ಬ್ಯಾಗ್‌ನಿಂದ ಹಣ ಎಗರಿಸಿದ್ದರು. ಈ ಬಗ್ಗೆ ಮಣಿಕಂಠ ಪೊಲೀಸರಿಗೆ ದೂರು ನೀಡಿದ್ದ. ಇದರಿಂದ ಮಣಿಕಂಠ ಅವರ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಸಂಘಟನೆಯ ಇನ್ನೊಂದು ಗುಂಪು ಆತನನ್ನು ಕೊಲೆಗೈಯಲು ಸಂಚು ರೂಪಿಸಿತ್ತು ಎನ್ನಲಾಗಿದೆ. ಮಣಿಕಂಠನ ಮೇಲೆ ದಾಳಿ ನಡೆಸುವಾಗ ಪ್ರತಾಪ್ ತಡೆಯಲು ಬಂದಿದ್ದು ಆಗ ತನ್ನ ಸಂಘಟನೆಯ ಕಾರ್ಯಕರ್ತರಿಂದಲೇ ಹತ್ಯೆಗೀಡಾಗಿದ್ದಾರೆ. ಒಂದೊಮ್ಮೆ ಎಲ್ಲರೂ ಸ್ನೇಹಿತರಾಗಿದ್ದರು. ಹುಟ್ಟು ಹಬ್ಬದ ಪಾರ್ಟಿಗೆ ಹೋಗಿದ್ದ ಅವರು ಮದ್ಯಪಾನ ಮಾಡಿದ್ದರು. ಇದೇ ನಶೆಯಲ್ಲಿ ಘಟನೆ ಸಂಭಧಿವಿಸಿದೆ. ಕೊಲೆಯಾದ ಪ್ರತಾಪ್ ವಿರುದ್ಧ ಬರ್ಕೆ,ಕಾವೂರು,ಮಂಗಳೂರು ಉತ್ತರ ಪೊಲೀಸ್ ಠಾಣೆಗಳಲ್ಲಿ ಹಲ್ಲೆ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement