ಮೆಲ್ಬರ್ನ್: ಮೆಲ್ಬರ್ನ್ “ಬಾಕ್ಸಿಂಗ್ ಡೇ” ಟೆಸ್ಟ್ ಪಂದ್ಯಕ್ಕೂ ಮಳೆ ಯಿಂದ ಅಡಚಣೆಯಾಗಿದೆ. ಮೊದಲ ದಿನ 66 ಓವರ್‌ಗಳ ಆಟ ನಡೆದಿದ್ದು, ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 3 ವಿಕೆಟಿಗೆ 187 ರನ್ ಗಳಿಸಿದೆ. ಲಬುಶೇನ್ 120 ಎಸೆತ ಎದುರಿಸಿ ನಿಂತಿದ್ದು, 44 ರನ್ ಮಾಡಿ ಆಡುತ್ತಿದ್ದಾರೆ.
ಬೌಲಿಂಗ್‌ಗೆ ಅನುಕೂಲಕರವಾದ ಟ್ರ್ಯಾಕ್ ಮೇಲೆ ಪಾಕಿಸ್ಥಾನಿ ಬೌಲರ್ ಬಹಳಷ್ಟು ಮೂವ್‌ಮೆಂಟ್ ಪಡೆದರು. ಆದರೆ ಸ್ಟ್ರೈಕ್ ಬೌಲರ್‌ಗಳಾದ ಶಾಹೀನ್ ಶಾ ಅಫ್ರಿದಿ ಮತ್ತು ಮಿರ್ ಹಮ್ಜಾ ಅವರಿಗೆ ವಿಕೆಟ್ ಕೀಳಲಾಗಲಿಲ್ಲ. ಡೇವಿಡ್ ವಾರ್ನರ್ (38), ಉಸ್ಮಾನ್ ಖ್ವಾಜಾ (42) ಮತ್ತು ಸ್ಟೀವನ್ ಸ್ಮಿತ್ (26) ಈಗಾಗಲೇ ಪೆವಿಲಿಯನ್ ಸೇರಿದ್ದಾರೆ. ಆಘಾ ಸಲ್ಮಾನ್, ಹಸನ್ ಅಲಿ ಮತ್ತು ಆಮೀರ್ ಜಮಾಲ್ ಈ ವಿಕೆಟ್ ಉರುಳಿಸಿದರು.
ಅತ್ಯಂತ ಕಠಿನ ಸನ್ನಿವೇಶದಲ್ಲೂ ಡೇವಿಡ್ ವಾರ್ನರ್-ಉಸ್ಮಾನ್ ಖ್ವಾಜಾ ಅತ್ಯಂತ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ ಉತ್ತಮ ಅಡಿಪಾಯ ನಿರ್ಮಿಸಿದರು. 27.1 ಓವರ್ ನಿಭಾಯಿಸಿದ ಈ ಜೋಡಿ 90 ರನ್ ಪೇರಿಸುವಲ್ಲಿ ಯಶಸ್ವಿ ಯಾಯಿತು. ಆದರೆ 18 ರನ್ ಅಂತರ ದಲ್ಲಿ ಇಬ್ಬರನ್ನೂ ಕೆಡವಿದ ಪಾಕ್ ತಿರುಗಿ ಬಿತ್ತು. ಪರ್ತ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 164 ರನ್ ಬಾರಿಸಿದ್ದ ವಾರ್ನರ್, ಇಲ್ಲಿ 2 ಹಾಗೂ 17 ರನ್ ಮಾಡಿದ ವೇಳೆ ಜೀವದಾನ ಪಡೆದರು.
3ನೇ ವಿಕೆಟಿಗೆ ಜತೆಗೂಡಿದ ಲಬು ಶೇನ್-ಸ್ಮಿತ್ 46 ರನ್ ಒಟ್ಟುಗೂಡಿ ಸಿದರು. ಸ್ಕೋರ್ 154ಕ್ಕೆ ಏರಿದಾಗ ಜಮಾಲ್ ಈ ಜೋಡಿಯನ್ನು ಮುರಿ ದರು. ಲಬುಶೇನ್ ಜತೆ 9 ರನ್ ಮಾಡಿ ರುವ ಟ್ರ್ಯಾವಿಸ್ ಹೆಡ್ ಕ್ರೀಸ್‌ನಲ್ಲಿದ್ದಾರೆ.
ಅಪರಾಹ್ನ ಮೆಲ್ಬರ್ನ್ ಆಗಸದಲ್ಲಿ ಭಾರೀ ಮೋಡ ಕವಿದಿದ್ದ ಕಾರಣ ಫ್ಲಡ್‌ಲೈಟ್ ಬೆಳಗಿಸಿ ಆಡಲಾಯಿತು. ಸುಮಾರು 62 ಸಾವಿರದಷ್ಟು ವೀಕ್ಷಕರು ಮೊದಲ ದಿನದಾಟಕ್ಕೆ ಸಾಕ್ಷಿಯಾದರು.
ಮೊದಲ ಟೆಸ್ಟ್ ಪಂದ್ಯವನ್ನು 360 ರನ್ನುಗಳಿಂದ ಜಯಿಸಿದ ಆಸ್ಟ್ರೇಲಿಯ 1-0 ಮುನ್ನಡೆಯಲ್ಲಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್-3 ವಿಕೆಟಿಗೆ 187 (ವಾರ್ನರ್ 38. ಖ್ವಾಜಾ 42, ಲಬುಶೇನ್ ಬ್ಯಾಟಿಂಗ್ 44, ಸ್ಮಿತ್ 28, ಹೆಡ್ ಬ್ಯಾಟಿಂಗ್ 9, ಆಘಾ ಸಲ್ಮಾನ್ 5ಕ್ಕೆ 1, ಹಸನ್ ಅಲಿ 28ಕ್ಕೆ 1, ಆಮೀರ್ ಜಮಾಲ್ 47ಕ್ಕೆ 1).