ಮುಂಬಯಿ : ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರವನ್ನು ಈ ವರ್ಷ ನಾಲ್ಕನೇ ಬಾರಿಗೆ ಏರಿಸಿದ ಪ್ರಯುಕ್ತ ಏಶ್ಯನ್ ಶೇರು ಪೇಟೆಗಳು ನಿಸ್ತೇಜಗೊಂಡದ್ದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 52.66 ಅಂಕಗಳ ನಷ್ಟದೊಂದಿಗೆ 36,431.67 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿ ಕಳೆದ ಏಳು ದಿನಗಳ ನಿರಂತರ ಗೆಲುವಿನ ಓಟದ ಪಥದಿಂದ ವಿಮುಖವಾಯಿತು.
ಇದೇ ರೀತಿ ಇಂದು ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 15.60 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,951.70 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 250ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಮುಂಬಯಿ ಶೇರು ಪೇಟೆಗೆ ಅನಂತರದಲ್ಲಿ ರೂಪಾಯಿ ಚೇತರಿಕೆ ಮತ್ತು ತೈಲ ಬೆಲೆಯಲ್ಲಿನ ಇಳಿಕೆಯು ಸ್ವಲ್ಪ ಮಟ್ಟಿಗೆ ಚೇತೋಹಾರಿಯಾಯಿತು.
ಇಂದಿನ ಮೇಜರ್ ಗೇನರ್‌ಗಳಾಗಿ ಎಸ್ ಬ್ಯಾಂಕ್, ಹೀರೋ ಮೋಟೋ ಕಾರ್ಪ್, ಮಹೀಂದ್ರ, ಏಶ್ಯನ್ ಪೇಂಟ್, ಸನ್ ಫಾರ್ಮಾ, ಟಾಟಾ ಮೋಟರ್, ಲಾರ್ಸನ್, ಎಚ್ ಡಿ ಎಫ್ ಸಿ ಬ್ಯಾಂಕ್ ಶೇರುಗಳು ಶೇ.3.93ರ ಏರಿಕೆಯನ್ನು ಕಂಡವು.
ಪ್ರಮುಖ ಲೂಸರ್ ಗಳಾದ ಭಾರ್ತಿ ಏರ್ ಟೆಲ್, ಎಸ್‌ಬಿಐ, ವಿಪ್ರೋ, ವೇದಾಂತ, ಮಾರುತಿ ಸುಜುಕಿ, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಶೇರುಗಳು ಶೇ.2.18 ರ ಇಳಿಕೆಯನ್ನು ಕಂಡವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,748 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,226 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,356 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 166 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.