ಮುಂಬಯಿ : ನಿರಂತರ ನಾಲ್ಕನೇ ದಿನವೂ ಲಾಭದ ಹಾದಿಯಲ್ಲಿ ಸಾಗಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು ಹೊಸ ಸಾರ್ವಕಾಲಿಕ ಎತ್ತರದಲ್ಲಿ ಕೊನೆಗೊಳಿಸಿದೆ.
ನಿರೀಕ್ಷೆಗೂ ಮೀರಿದ ಉತ್ತಮ ಫಲಿತಾಂಶ ಪ್ರಕಟಿಸಿರುವ ಒಎನ್‌ಜಿಸಿ ಮತ್ತು ಆರ್‌ಐಎಲ್ ಕಂಪೆನಿಗಳ ಶೇರುಗಳು ಇಂದು ಭಾರೀ ಜಿಗಿತ ಸಾಧಿಸಿದವು.
ಪರಿಣಾಮವಾಗಿ ಮುಂಬಯಿ ಶೇರು ದಿನದ ವಹಿವಾಟನ್ನು 286.43 ಅಂಕಗಳ ಜಿಗಿತದೊಂದಿಗೆ 35,798.01 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಕಳೆದ ಮೂರು ದಿನಗಳ ವಹಿವಾಟಿನಲ್ಲಿ 740.53 ಅಂಕಗಳನ್ನು ಸಂಪಾದಿಸಿರುವುದು ಗಮನಾರ್ಹವಾಗಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ದಿನದ ವಹಿವಾಟನ್ನು 71.50 ಅಂಕಗಳ ಮುನ್ನಡೆಯೊಂದಿಗೆ 10,966.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ವಹಿವಾಟಿನ ನಡುವೆ ಒಮ್ಮೆ ನಿಫ್ಟಿ 10,975.10 ಅಂಕಗಳ ಎತ್ತರವನ್ನು ಕಂಡಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 3,077 ಶೇರುಗಳು ವಹಿವಾಟಿಗೆ ಗುರಿಯಾದವು; 1,567 ಶೇರುಗಳ ಮುನ್ನಡೆ ಕಂಡವು 1,326 ಶೇರುಗಳು ಹಿನ್ನಡೆಗೆ ಗುರಿಯಾದವು; 184 ಶೇರುಗಳ ಯಾವುದೇ ಬದಲಾವಣೆ ಕಾಣಲಿಲ್ಲ.