ಬೆಂಗಳೂರು: ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಯಲ್ಲಿ ಶಾಸಕ ಆರ್.ವಿ.ದೇವರಾಜ್ ಹಾಗೂ ಮಾಜಿ ಮೇಯರ್ ಜಿ.ಪದ್ಮಾವತಿ ತಮ್ಮ ಪ್ರಭಾವ ಬಳಸಿ 24 ಮಳಿಗೆ ಹಂಚಿಕೆ ಮಾಡಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷರ ಮೇಲೆ ಒತ್ತಡ ಹೇರಿದ ಈ ಇಬ್ಬರು ಕಾನೂನು ಬಾಹಿರವಾಗಿ 24 ಮಳಿಗೆಗಳನ್ನು ನಿರ್ಮಿಸಿ ಪ್ರತಿ ಮಳಿಗೆಯಿಂದ 50 ಲಕ್ಷ ರೂ. ಪಡೆದು ಹಂಚಿಕೆ ಮಾಡಿದ್ದಾರೆ. ಪ್ರಕರಣ ಎಸಿಬಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕರು ಸಂಚಾರಕ್ಕಾಗಿ ಮೀಸಲಿಡಲಾಗಿರುವ ಜಾಗದಲ್ಲಿ ಮಳಿಗೆಗಳನ್ನು ನಿರ್ಮಿಸಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ, ಮಾಜಿ ಮೇಯರ್ ಪದ್ಮಾವತಿ ಸಮಿತಿಯ ಮೇಲೆ ಒತ್ತಡ ಹೇರುವ ಮೂಲಕ ಅನುಮೋದನೆ ಪಡೆದು ಕೋಟ್ಯಂತರ ರೂ. ಅವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಬಿಬಿಎಂಪಿ ಆಯುಕ್ತರು ಕೂಡಲೇ ಇದನ್ನು ಪರಿಶೀಲಿಸಿ ಕಾನೂನು ಬಾಹಿರವಾಗಿ ಹಂಚಿಕೆಯಾಗಿರುವ ಮಳಿಗೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಕಲಾಸಿಪಾಳ್ಯದಲ್ಲಿ ಮಳಿಗೆಗಳನ್ನು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿರುವ ಕುರಿತು ದೂರು ಬಂದಿದೆ. ಜತೆಗೆ ಇದೇ ವಿಚಾರದಲ್ಲಿ ಮಳಿಗೆಗಳನ್ನು ತೆರವುಗೊಳಿಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಪರಿಶೀಲಿಸಿ ಕಾನೂನಿನಂತೆ ಕ್ರಮಕೈಗೊಳ್ಳಲಾಗುವುದು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ