Advertisement

ನಕ್ಷತ್ರಗಳಿಂದ ಕಂಗೊಳಿಸುತ್ತಿದೆ ಮಾರುಕಟ್ಟೆ 

11:50 AM Dec 17, 2018 | |

ಬೆಳ್ತಂಗಡಿ : ಇದೀಗ ಮಾರುಕಟ್ಟೆಯಲ್ಲಿ ಕ್ರಿಸ್ಮಸ್‌ ಹಬ್ಬದ ಅಂಗವಾಗಿ ವೈವಿಧ್ಯಮಯ ನಕ್ಷತ್ರ (ಸ್ಟಾರ್‌)ಗಳು ಸಹಿತ ಇತರ ಆಲಂಕಾರಿಕ ವಸ್ತುಗಳು ಲಗ್ಗೆ ಇಟ್ಟಿವೆ. ಜತೆಗೆ ಕ್ರಿಸ್ಮಸ್‌ ಖರೀದಿಯ ಭರಾಟೆಯೂ ಆರಂಭಗೊಂಡಿದೆ. ಕ್ರೈಸ್ತರ ಪ್ರಮುಖ ಹಬ್ಬ ಕ್ರಿಸ್ಮಸ್‌ಗೆ ಪ್ರತಿ ಮನೆಯ ಮುಂದೆಯೂ ಬಣ್ಣ ಬಣ್ಣದ ನಕ್ಷತ್ರಗಳು ಸಾಮಾನ್ಯವಾಗಿದ್ದು, ಜತೆಗೆ ಅಂಗಳದಲ್ಲಿ ಗೋದಲಿಯೂ ಪ್ರಮುಖ ಸ್ಥಾನ ಪಡೆಯುತ್ತಿದೆ. ಹಬ್ಬಕ್ಕೆ ಕೆಲವು ದಿನಗಳ ಮುಂಚೆಯೇ ಅವುಗಳನ್ನು ಸಿದ್ಧಪಡಿಸಿ, ಮೊಳಕೆ ಬರುವಂತಹ ಕೆಲವೊಂದು ಧಾನ್ಯಗಳನ್ನೂ ಹಾಕಿರುತ್ತಾರೆ. ಅಂತಹ ಗೋದಲಿಗಳ ಅಲಂಕಾರಕ್ಕೆ ಬಳಸುವ ಪರಿಕರ (ಕ್ರಿಬ್‌)ಗಳು ಕೂಡ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಬೆಳ್ತಂಗಡಿಯ ಬಹುತೇಕ ಫ್ಯಾನ್ಸಿ ಅಂಗಡಿಗಳು ಬಣ್ಣ ಬಣ್ಣದ ನಕ್ಷತ್ರಗಳಿಂದ ತುಂಬಿಹೋಗಿವೆ. ಈಗಾಗಲೇ ಬಹುತೇಕ ಮಂದಿ ನಕ್ಷತ್ರಗಳನ್ನು ಖರೀದಿಸಿದ್ದು, ಕ್ರಿಸ್ಮಸ್‌ ಹಿಂದಿನ ದಿನದವರೆಗೂ ವ್ಯಾಪಾರ ಜೋರಾಗಿಯೇ ನಡೆಯುತ್ತದೆ ಎಂದು ವರ್ತಕರು ಅಭಿಪ್ರಾಯಿಸುತ್ತಾರೆ.

Advertisement

ಕ್ರಿಸ್ಮಸ್‌ ಟ್ರಿ
ಈ ಹಬ್ಬದ ಸಂದರ್ಭದಲ್ಲಿ ಕ್ರಿಸ್ಮಸ್‌ ಟ್ರಿಗಳಿಗೂ ವಿಶೇಷ ಬೇಡಿಕೆ ಇದೆ. ಅದಕ್ಕಾಗಿಯೇ ಗಿಡದಂತಹ ವಿನ್ಯಾಸಗಳು ಕೂಡ ಮಾರುಕಟ್ಟೆಯಲ್ಲಿವೆ. ಅದರ ಅಂದವನ್ನು ಹೆಚ್ಚಿಸುವ ಬಾಲ್‌ಗ‌ಳ ಗೊಂಚಲು, ಬೆಲ್‌ಗ‌ಳ ಗೊಂಚಲು, ಸಣ್ಣ ಸಣ್ಣ ಸ್ಟಾರ್‌ಗಳು ಕೂಡ ಮಾರುಕಟ್ಟೆಯಲ್ಲಿ ಸಿಗುತ್ತಿವೆ.

ಆಲಂಕಾರಿಕ ವಸ್ತುಗಳು
ಇದರ ಜತೆಗೆ ವಿವಿಧ ಲೈಟಿಂಗ್‌ಗಳು ಕೂಡ ವಿಶೇಷ ಮೆರುಗನ್ನು ಪಡೆದಿದೆ. ಮೇರಿ ಕ್ರಿಸ್ಮಸ್‌ ಎಂಬ ವಿನ್ಯಾಸಗಳು, ಎಲೆಕ್ಟ್ರಾನಿಕ್‌ ನಕ್ಷತ್ರಗಳು ಹೀಗೆ ಹತ್ತಾರು ಬಗೆಯ ಆಲಂಕಾರಿಕ ವಸ್ತುಗಳಿಗೆ ಕ್ರಿಸ್ಮಸ್‌ ಸಂದರ್ಭ ಬೇಡಿಕೆ ಇದ್ದು, ಡಿಸೆಂಬರ್‌ ತಿಂಗಳ ಆರಂಭದಲ್ಲೇ ಅವುಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಒಂದು ಮನೆಯ ಮುಂದೆ ಹತ್ತಾರು ವಿನ್ಯಾಸದ ನಕ್ಷತ್ರಗಳನ್ನು ಬಳಸುವುದರಿಂದ ಮಾರುಕಟ್ಟೆಯಲೂ ವಿಶೇಷ ಬೇಡಿಕೆಯನ್ನು ಪಡೆಯುತ್ತದೆ. ಮಾರುಕಟ್ಟೆಗಳಲ್ಲಿ ಅದನ್ನು ಅಚ್ಚುಕಟ್ಟಾಗಿ ಜೋಡಿಸಿರುವುದನ್ನೇ ಕಂಡು ಸಾಕಷ್ಟು ಮಂದಿ ಖರೀದಿಗೆ ಮುಂದಾಗುತ್ತಾರೆ.

100 ರೂ.ನಿಂದ ಆರಂಭ
ಸಾಮಾನ್ಯವಾಗಿ ಮನೆಗಳಲ್ಲಿ ಜೋತು ಹಾಕುವಂತಹ ನಕ್ಷತ್ರಗಳು ಬೆಳ್ತಂಗಡಿಯ ಮಾರುಕಟ್ಟೆಯಲ್ಲಿ 100 ರೂ.ನಿಂದ ಆರಂಭಗೊಂಡರೆ, 400 ರೂ.ಗಳ ವರೆಗಿನ ನಕ್ಷತ್ರಗಳಿಗೂ ಇಲ್ಲಿ ಬೇಡಿಕೆ ಇದೆ. ಜತೆಗೆ ಸಣ್ಣ ಸಣ್ಣ ಸ್ಟಾರ್‌ಗಳೂ ಲಭ್ಯವಿವೆ. ಪ್ರತಿ ಅಂಗಡಿಗಳಲ್ಲೂ ಸುಮಾರು 50ಕ್ಕೂ ಅಧಿಕ ವಿನ್ಯಾಸಗಳ ನಕ್ಷತ್ರಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಇದರ ಜತೆಗೆ ಸಾಂತಾಕ್ಲಾಸ್‌ ಟೋಪಿ, ಮುಖವಾಡಗಳು ಲಭ್ಯವಿದ್ದು, ಉತ್ತಮ ಬೇಡಿಕೆಯಲ್ಲಿವೆ.

ಖರೀದಿ ಭರಾಟೆ ಆರಂಭ
ಕ್ರಿಸ್ಮಸ್‌ ಸಂದರ್ಭ ನಕ್ಷತ್ರಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಡಿಸೆಂಬರ್‌ ಆರಂಭದಲ್ಲೇ ನಕ್ಷತ್ರಗಳನ್ನು ತರಿಸುತ್ತೇವೆ. ಈಗಾಗಲೇ ಹಬ್ಬದ ಖರೀದಿಯ ಭರಾಟೆ ಆರಂಭಗೊಂಡಿದೆ. ನಕ್ಷತ್ರಗಳ ಜತೆಗೆ ಕ್ರಿಸ್ಮಸ್‌ ಟ್ರಿ, ಕ್ರಿಬ್‌, ಸಾಂತಾಕ್ಲಾಸ್‌ ಟೋಪಿ, ಮುಖವಾಡಗಳಿಗೂ ಹೆಚ್ಚಿನ ಬೇಡಿಕೆ ಇದೆ.
– ಗೋಪಾಲಕೃಷ್ಣ ಭಟ್‌
ಫ್ಯಾನ್ಸಿ ಉದ್ಯಮಿ, ಬೆಳ್ತಂಗಡಿ

Advertisement

‡ ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next