Advertisement
ಬೆಂಗಳೂರಿನಲ್ಲಿ ಸಂತೆಗಳೆಂದರೆ ಏನೋ ಆಕರ್ಷಣೆ. ಜನರು ಹೊಸತನ್ನು ಬಯಸಿ, ಏನಾದರೂ ಮಾಡಿ ಆ ಕಡೆಗೆ ನೋಡಿ ಬರೋಣವೆಂದು ಹೋಗಿಯೇ ಬಿಡುತ್ತಾರೆ. ಅದರಲ್ಲಿಯೂ ನಾವೀನ್ಯತೆ ಹಾಗೂ ಕಲಾಪ್ರೌಢಿಮೆಗೆ ಹೆಸರಾದ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ ಸಂಭ್ರಮದ “ಚಿತ್ರಸಂತೆ’ ಎಂದರೆ ಕೇಳಬೇಕೇ? ವಾರದ ಕೊನೆ ದಿನ ಬೆಂಗಳೂರಿಗರು ತಮ್ಮ ಹಾಜರಿಯನ್ನು ಅಲ್ಲಿ ಹಾಕಿಯೇ ಬಿಡುತ್ತಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನ 17ನೇ ಚಿತ್ರ ಸಂತೆಗೆ ಒಂದು ದಿನವಷ್ಟೇ ಬಾಕಿ ಉಳಿದಿದೆ. ಈ ಸಂದರ್ಭಕ್ಕಾಗಿಯೇ ಅದೆಷ್ಟೋ ಕಲಾಸಕ್ತರು ಕಾಯುತ್ತಾ ಇರುವುದು ಸುಳ್ಳಲ್ಲ.
Related Articles
Advertisement
ಕಲಾಸಕ್ತನಿಂದ ಬಿಲ್ಡರ್‌ವರೆಗೆ…: ಬೆಳಿಗ್ಗೆ 6ರಿಂದಲೇ, ಕ್ರೆಸೆಂಟ್ ರಸ್ತೆ ಮತ್ತು ಕುಮಾರಕೃಪಾ ರಸ್ತೆಯುದ್ದಕ್ಕೂ ಕಲಾವಿದರು ತಂತಮ್ಮ ಚಿತ್ರಗಳನ್ನು ಪ್ರದರ್ಶಿಸಲು ಶುರುಮಾಡಿರುತ್ತಾರೆ. ಹೀಗಾಗಿ, ಬೆಳಗ್ಗೆಯೇ ವ್ಯಾಪಾರ ಶುರುವಾಗಿರುತ್ತದೆ. ಪೇಂಟಿಂಗ್‌ಗಳನ್ನು ಖರೀದಿಸುವವರಲ್ಲಿ ಕಲಾಸಕ್ತರು ಮಾತ್ರವೇ ಇರುವುದಿಲ್ಲ. ಬಿಲ್ಡರ್‌ಗಳು, ಒಳಾಂಗಣ ವಿನ್ಯಾಸಕಾರರು (ಇಂಟೀರಿಯರ್ ಡಿಸೈನರ್‌ಗಳು), ಹೋಟೆಲ್‌ನವರು, ಆರ್ಟ್ ಗ್ಯಾಲರಿಗಳವರು ಹೆಚ್ಚಿನ ಸಂಖ್ಯೆಯಲ್ಲಿ ಪೇಂಟಿಂಗ್‌ಗಳನ್ನು ಖರೀದಿಸುತ್ತಾರೆ. ರಿಯಲ್ ಎಸ್ಟೇಟ್ ಮಂದಿ ಮತ್ತು ಇಂಟೀರಿಯರ್ ಡಿಸೈನರ್‌ಗಳೇಕೆ ಖರೀದಿಸುತ್ತಾರೆ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಮೂಡಬಹುದು. ರೆಡಿ ಟು ಮೂವ್ ಫ್ಲ್ಯಾಟುಗಳಲ್ಲಿ, ಹೋಟೆಲ್ ರೂಮುಗಳಲ್ಲಿ ಚಿತ್ರಗಳನ್ನು ತೂಗು ಹಾಕಿ ಕೋಣೆಯ ಅಂದ ಹೆಚ್ಚಿಸಲು ಇವರು ಸೂಕ್ತ ಪೇಂಟಿಂಗ್‌ಗಳನ್ನು ಅರಸಿ ಚಿತ್ರಸಂತೆಗೆ ಬರುತ್ತಾರೆ.
ರೈತರಿಗೆ ಸಮರ್ಪಣೆ: ಪ್ರತೀ ವರ್ಷ ಚಿತ್ರಸಂತೆಯಲ್ಲಿ ಒಂದೊಂದು ವಿಷಯವನ್ನು ಆಧರಿಸಿ ಆಯೋಜಿಸಲಾಗುತ್ತದೆ. ಹೋದ ವರ್ಷ ಮಹತ್ಮಾ ಗಾಂಧೀಜಿಯವರಿಗೆ ಸಮರ್ಪಿಸಲಾಗಿತ್ತು. ಈ ವರ್ಷ ಚಿತ್ರಸಂತೆಯನ್ನು ನೇಗಿಲಯೋಗಿ ರೈತನಿಗೆ ಸಮರ್ಪಿಸಲಾಗುತ್ತಿದೆ. ರೈತರ ಸಂಕಷ್ಟಗಳು, ಸವಾಲುಗಳು ಮತ್ತವರ ಕಷ್ಟಕರ ಬದುಕು, ಒಟ್ಟಾರೆ ರೈತರ ಬದುಕಿನ ಸಂಪೂರ್ಣ ಚಿತ್ರಣವನ್ನು ಈ ಬಾರಿ ನೋಡಬಹುದು.
ಕಲಾವಿದರಿಗೆ ಭರವಸೆಯ ಕಿರಣ: ಚಿತ್ರಸಂತೆ, ಉದಯೋನ್ಮುಖ ಕಲಾವಿದರಿಗೆ ಯಾವ ರೀತಿ ಉತ್ತಮ ವೇದಿಕೆಯಾಗಬಲ್ಲುದು, ಅವರ ಭವಿಷ್ಯಕ್ಕೆ ಹೇಗೆ ಸಹಕರಿಸುತ್ತದೆ ಎನ್ನುವುದಕ್ಕೆ ಉದಾಹರಣೆ- ವಿಜಾಪುರ ಜಿಲ್ಲೆಯ ಸಿಂಧಗಿಯವರಾದ ಅಶೋಕ್ ನೆಲ್ಲಗಿ. ಖಾಸಗಿಶಾಲೆಯೊಂದರಲ್ಲಿ ಕಲಾಶಿಕ್ಷಕರಾಗಿದ್ದರೂ ಕಲೆ ಅವರ ವೃತ್ತಿ ಶಿಕ್ಷಣ, ಅವರ ಪ್ರವೃತ್ತಿ ಎನ್ನಬಹುದು. ಏಕೆಂದರೆ ಅವರು ಶಾಲೆಯಲ್ಲಿ ಕೆಲಸ ಮಾಡುವಷ್ಟೇ ಸಮಯವನ್ನು ಮನೆಯಲ್ಲಿ ಪೇಂಟಿಂಗ್ ರಚಿಸಲೂ ವ್ಯಯಿಸುತ್ತಾರೆ.
ಇಂದು, ಅವರ ಚಿತ್ರಗಳು ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ ಮಾತ್ರವಲ್ಲದೆ ಲಂಡನ್, ಅಮೆರಿಕ, ಇಂಗ್ಲೆಂಡ್, ದುಬೈ ಮುಂತಾದ ದೇಶಗಳಲ್ಲಿ ಪ್ರದರ್ಶನ ಕಂಡಿವೆ. ಇಂದು ಅವರ ಪೇಂಟಿಂಗ್‌ಗಳು ಲಕ್ಷ ರೂ.ಗಳಿಗೆ ಮಾರಾಟವಾಗುತ್ತಿರಬಹುದು. ಆದರೆ, ಅವರಿಗೆ ಅಂಥದ್ದೊಂದು ಸ್ಫೂರ್ತಿ ತುಂಬಿದ್ದು ಚಿತ್ರಸಂತೆ. ಚಿತ್ರಸಂತೆಯಲ್ಲಿ ಇವರ ರಚನೆಯ ಕಲಾಕೃತಿ 85,000 ರೂ.ಗಳಿಗೆ ಮಾರಾಟವಾಗಿತ್ತಂತೆ. “ಗ್ರಾಮೀಣ ಪ್ರದೇಶದ ಕಲಾವಿದರಿಗೆ, ಕಲೆಯನ್ನು ನೆಚ್ಚಿಕೊಂಡು ತಾವೂ ಬದುಕು ಕಂಡುಕೊಳ್ಳಬಹುದು, ಕಲಾವಲಯದಲ್ಲಿ ತಾವೂ ಗುರುತಿಸಿಕೊಳ್ಳಬಹುದು ಎನ್ನುವ ಭರವಸೆಯನ್ನು ಚಿತ್ರಸಂತೆ ನೀಡುತ್ತದೆ.’ ಎನ್ನುತ್ತಾರೆ ಅಶೋಕ್.
ದೇಶ ವಿದೇಶಗಳ ಕಲಾವಿದರು: ಚಿತ್ರ ಸಂತೆಗೆ ಸುಮಾರು 20 ರಾಜ್ಯಗಳಿಂದ ಕಲಾವಿದರು ಬರುತ್ತಾರೆ. ಅಲ್ಲದೆ ವಿದೇಶಗಳಿಂದಲೂ ಕಲಾವಿದರು ಪಾಲ್ಗೊಂಡು ಚಿತ್ರಸಂತೆಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಾರೆ. ಹೊರಗಿನ ಆಚಾರ ವಿಚಾರ, ಸಂಸ್ಕೃತಿಗಳ ಚಿತ್ರದರ್ಶನ ಇಲ್ಲಿ ಆಗಲಿದೆ.
17- ನೇ ವರ್ಷದ ಚಿತ್ರಸಂತೆ1300 - ಕಲಾವಿದರ ಆಗಮನ
18- ರಾಜ್ಯಗಳ ಕಲಾವಿದರು
3- ಕೋಟಿ ರೂ. ವಹಿವಾಟು (ಅಂದಾಜು) ಪ್ಯಾರಿಸ್, ರೋಮ್ ನಗರಿಗಳಲ್ಲಿ ಕಲಾವಿದರು ರಸ್ತೆ ಬದಿ ನಿಂತು ತಮ್ಮ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಮಾಡುವ ಸಂಪ್ರದಾಯವಿದೆ. ಕಲೆಯನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಬೇಕೆಂಬುದೇ ಆ ವ್ಯವಸ್ಥೆಯ ಹಿಂದಿನ ಉದ್ದೇಶ. ಅದು ಮತ್ತು ಕಲಾವಿದರಿಗೂ ಒಂದೊಳ್ಳೆಯ ಭವಿಷ್ಯ ರೂಪುಗೊಳ್ಳಬೇಕು ಎಂಬ ಸದುದ್ದೇಶವೇ “ಚಿತ್ರಸಂತೆ’ಗೆ ಪ್ರೇರಣೆ.
-ಬಿ.ಎಲ್. ಶಂಕರ್, ಅಧ್ಯಕ್ಷರು, ಸಿಕೆಪಿ * ಹರ್ಷವರ್ಧನ್ ಸುಳ್ಯ
ಮಾಹಿತಿ: ವಿ.ಎಸ್. ನಾಯಕ್