Advertisement
ಪ್ರಸ್ತುತ ಕಿಲ್ಲೆ ಮೈದಾನದಲ್ಲಿ ಪ್ರತಿ ಸೋಮವಾರ ನಡೆಯುತ್ತಿರುವ ಸಂತೆ ಯಲ್ಲಿ ಮಾರಾಟಗಾರರು ಮತ್ತು ಖರೀದಿ ದಾರರು ಮಳೆಯ ನಡುವೆ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಟರ್ಪಾಲು ಮತ್ತು ಕೆಸರು ಕೊಳಚೆ ನೀರಿನ ನಡುವೆ ಮಳೆಗಾಲದಲ್ಲಿ ಪುತ್ತೂರು ಸಂತೆ ನಡೆಯುವುದು ಮುಂದುವರಿದಿದೆ.
ಕಿಲ್ಲೆ ಮೈದಾನದಲ್ಲಿ ನಡೆಯುತ್ತಿರುವ ಈ ವಾರದ ಸಂತೆಗೆ ಶಾಶ್ವತ ಸಂತೆ ಕಟ್ಟೆ ನಿರ್ಮಾಣ ಮಾಡಲು ನಗರಸಭೆ ಚಿಂತನೆ ನಡೆಸಿ ಒಂದೂವರೆ ವರ್ಷವಾಗಿದೆ. ಹಳೆಯ ಪುರಸಭೆಯ ಕಟ್ಟಡದ ಸ್ಥಳದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಸಂತೆಕಟ್ಟೆ ಮತ್ತು ವಾರದ ಸಂತೆಯ ಮಾರುಕಟ್ಟೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಅನಂತರ ವಾರದ ಸಂತೆಯನ್ನು ಇಲ್ಲಿಗೆ ಸ್ಥಳಾಂತರ ನಡೆಸಲು ತೀರ್ಮಾನಿಸಲಾಗಿತ್ತು. ಪುತ್ತೂರು ನಗರದ ಹೃದಯ ಭಾಗದ ನಾನಾ ಕಡೆ ಸಂತೆ ಮಾರುಕಟ್ಟೆ ನಿರ್ಮಿಸಲು ಈ ಹಿಂದಿನ ನಗರಸಭೆ ಆಡಳಿತ ಸಾಕಷ್ಟು ಪ್ರಯತ್ನ ಪಟ್ಟಿತ್ತು. ಆದರೆ ಸೂಕ್ತ ಸ್ಥಳಾವಕಾಶ ಸಿಗದ ಕಾರಣ ವಾರದ ಸಂತೆ ಕಿಲ್ಲೆ ಮೈದಾನದಲ್ಲಿಯೇ ಉಳಿದಿದೆ. ಈ ನಡುವೆ 2016ರಲ್ಲಿ ಉಪವಿಭಾಗಾಧಿಕಾರಿ ಆದೇಶದಂತೆ ಎಪಿಎಂಸಿ ಪ್ರಾಂಗಣಕ್ಕೆ ಸಂತೆಯನ್ನು ಸ್ಥಳಾಂತರ ಮಾಡಲಾಗಿದ್ದು, ಈ ಬಗ್ಗೆ ಪ್ರತಿಭಟನೆ, ವಾದವಿವಾದಗಳು ನಡೆದಿದ್ದವು. ಮತ್ತೆ ವಾರದ ಸಂತೆ ಕಿಲ್ಲೆ ಮೈದಾನಕ್ಕೇ ಸ್ಥಳಾಂತರವಾಯಿತು. ನಗರಸಭೆಯಿಂದ ಶಾಶ್ವತ ಮಾರುಕಟ್ಟೆ ನಿರ್ಮಾಣದ ಕನಸು ನನಸಾಗದೆ ಈ ವರ್ಷವೂ ಟಾರ್ಪಾಲು ಮಾಡಿನ ಕೆಳಗೆ ಕೆಂಪು ನೀರಿನ ಮಧ್ಯೆ ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಬೇಕಾದ ಅನಿವಾರ್ಯತೆ ಗ್ರಾಹಕರ ಪಾಲಿಗೆ ಬಂದಿದೆ.
Related Articles
Advertisement