ಮುಂಬಯಿ : ಬೆಳಗ್ಗಿನ ಆರಂಭಿಕ ವಹಿವಾಟನ್ನು ಅಬ್ಬರದಿಂದ ಆರಂಭಿಸಿದ್ದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಇಂದು ಗುರುವಾರದ ವಹಿವಾಟನ್ನು 4.14 ಅಂಕಗಳ ನಷ್ಟದೊಂದಿಗೆ ಕೊನೆಗೊಳಿಸಿತು.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ರಾಷ್ಟ್ರೀಯ ಶೇರುಪೇಟೆಯ ನಿಫ್ಟಿ ಸೂಚ್ಯಂಕ 6.95 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,069.40 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಅಚ್ಚರಿಯ ನಡೆಯಲ್ಲಿ ಆರ್‌ಬಿಐ ತನ್ನ ಪ್ರಮುಖ ಬಡ್ಡಿದರಗಳನ್ನು ಶೇ.0.25ರಷ್ಟು ಇಳಿಸಿರುವುದು, ಹೂಡಿಕೆದಾರರು ಮತ್ತು ವಹಿವಾಟುದಾರರು ಈಚಿನ ಶೇರು ಲಾಭವನ್ನು ನಗದಿಕರಿಸಿರುವುದೇ ಮುಂಬಯಿ ಶೇರು ಪೇಟೆಯ ಇಂದಿನ ನಷ್ಟಕ್ಕೆ ಕಾರಣವಾಗಿದೆ.
ಇಂದಿನ ವಹಿವಾಟಿನಲ್ಲಿ ಪ್ರಮುಖ ಗೇನರ್ ಆಗಿ ಮೂಡಿ ಬಂದ ಸನ್ ಫಾರ್ಮಾ ಶೇರು ಶೇ.4.48ರ ಏರಿಕೆ ದಾಖಲಿಸಿತು. ಇದನ್ನು ಅನುಸರಿಸಿ ಬಜಾಜ್ ಆಟೋ, ಟಾಟಾ ಮೋಟರ್, ಕೋಲ್ ಇಂಡಿಯಾ, ಹೀರೋ ಮೋಟೋ ಕಾರ್ಪ್, ಮಾರುತಿ ಮತ್ತು ಎಚ್ ಸಿ ಎಲ್ ಟೆಕ್ ಕಂಪೆನಿಯ ಶೇರುಗಳು ಶೇ.3.01ರ ಏರಿಕೆಯನ್ನು ಕಂಡವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,719 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,406 ಶೇರುಗಳು ಮುನ್ನಡೆ ಸಾಧಿಸಿದವು; 1,146 ಶೇರುಗಳು ಹಿನ್ನಡೆಗೆ ಗುರಿಯಾದವು; 167 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.