ನವದೆಹಲಿ: ಕಳೆದ ವಾರವಿಡೀ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದರ ದುಷ್ಪರಿಣಾಮಗಳು ಒಂದೊಂದಾಗಿ ಹೊರಬರುತ್ತಿವೆ.
ಕಳೆದ ವಾರದಲ್ಲಿ ಹೂಡಿಕೆದಾರರಿಗೆ ಸುಮಾರು 18 ಲಕ್ಷ ಕೋಟಿ ರೂ. ನಷ್ಟವಾಗಿತ್ತೆಂದು ವರದಿಗಳು ಪ್ರಕಟವಾದ ಬೆನ್ನಿಗೇ ಈಗ ಭಾರತದ ಟಾಪ್ 10 ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ 3.91 ಲಕ್ಷ ಕೋಟಿ ರೂ. ಇಳಿಕೆಯಾಗಿದೆ ಎಂಬ ಹೊಸ ವಿಚಾರ ಬೆಳಕಿಗೆ ಬಂದಿದೆ.
ಎಕನಾಮಿಕ್ಸ್ ಟೈಮ್ಸ್‌ನಲ್ಲಿ ಬಂದಿರುವ ವರದಿಯ ಪ್ರಕಾರ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಗಳ ಮಾರುಕಟ್ಟೆ ಮೌಲ್ಯ ಅಧಿಕವಾಗಿ ಕುಸಿದಿದೆ.
ಟಿಸಿಎಸ್ ಕಂಪನಿಯ ಒಟ್ಟಾರೆ ಮಾರುಕಟ್ಟೆ ಮೌಲ್ಯ 1 ಲಕ್ಷ ಕೋಟಿ ರೂ. ಕುಸಿದಿದ್ದು ಪ್ರಸ್ತುತ ಅದರ ಮೌಲ್ಯ 11 ಲಕ್ಷ ಕೋಟಿ ರೂ.ಗಳಿಗೆ ಬಂದು ನಿಂತಿದೆ. ಇನ್ನು, ರಿಲಯನ್ಸ್ ಕಂಪನಿಯ ಮಾರುಕಟ್ಟೆ ಮೌಲ್ಯ 84 ಸಾವಿರ ಕೋಟಿ ರೂ.ಗಳಷ್ಟು ಇಳಿಕೆಯಾಗಿ ಅದರ ಮೌಲ್ಯ 17 ಲಕ್ಷ ಕೋಟಿ ರೂ.ಗಳಿಗೆ ಬಂದು ನಿಂತಿದೆ.
ಇನ್ನು, ಇನ್ಫೋಸಿಸ್ ಕಂಪನಿಯ ಮೌಲ್ಯ 37 ಸಾವಿರ ಕೋಟಿ ರೂ.ಗಳಷ್ಟು ಇಳಿಕೆಯಾಗಿ, ಒಟ್ಟಾರೆ ಮೌಲ್ಯ 5.83 ಲಕ್ಷ ಕೋಟಿ ರೂ.ಗಳಿಗೆ ಇಳಿದಿದ್ದರೆ, ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಮೌಲ್ಯ 34 ಸಾವಿರ ಕೋಟಿ ರೂ.ಗಳಿಗೆ ಇಳಿದು, 4.14 ಲಕ್ಷ ಕೋಟಿ ರೂ.ಗಳಿಗೆ ಇಳಿಕೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.