Advertisement

ಹರಾಜಾದರೂ ಹಸ್ತಾಂತರವಾಗದ ಮಾರುಕಟ್ಟೆ ಕಟ್ಟಡ

01:49 AM May 31, 2019 | mahesh |

ಬೆಳ್ತಂಗಡಿ: ನಗರ ಪಂಚಾಯತ್‌ಗೆ ಒಳಪಟ್ಟ ಸಂತೆಕಟ್ಟೆ ನೂತನ ಮಾರುಕಟ್ಟೆ ಕಾಮಗಾರಿ ಅವಧಿ ಪೂರ್ಣಗೊಂಡರೂ ಕಟ್ಟಡ ಹಸ್ತಾಂತರಕ್ಕೆ ಮೀನಮೇಷ ಎಣಿಸುತ್ತಿದೆ. ಸಂತೆಕಟ್ಟೆ ಈಗಿರುವ ಮಾರುಕಟ್ಟೆ ಪ್ರದೇಶದಲ್ಲಿ ನಗರ ಪಂಚಾಯತ್‌ನಿಂದ ಎರಡು ಅಂತಸ್ತಿತ ಹೊಸ ಕಟ್ಟಡ ನಿರ್ಮಾಣಕ್ಕೆ 2017ರಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಇದರಂತೆ 2017ರ ಡಿಸೆಂಬರ್‌ನಲ್ಲಿ 1 ಕೋಟಿ ರೂ. ವೆಚ್ಚದಲ್ಲಿ 29 ಂಗಡಿ ಮಳಿಗೆಯ ಕೆಳಅಂತಸ್ತು ನಿರ್ಮಾಣದ ಜವಾಬ್ದಾರಿ ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿತ್ತು.

Advertisement

ಏಲಂ ಆದರೂ ಕಟ್ಟಡ ಖಾಲಿ
ಯೊಜನೆಯಂತೆ 6ರಿಂದ 9 ತಿಂಗಳೊಳಗಾಗಿ ನಗರ ಪಂಚಾಯತ್‌ಗೆ ಕಟ್ಟಡ ಹಸ್ತಾಂತರಿಸಿ ಏಲಂ ಮಾಡಬೇಕಿತ್ತು. ಆದರೆ ಏಲಂ ಪ್ರಕ್ರಿಯೆ ನಡೆದಿದ್ದರೂ ಕಟ್ಟಡ ಹಸ್ತಾಂತರ ಪ್ರಕ್ರಿಯೆಗೆ ದಿನ ಕೂಡಿ ಬಂದಿಲ್ಲ. ಈಗಾಗಲೇ ವ್ಯಾಪಾರಿಗಳು ಏಲಂನಲ್ಲಿ ಅಂಗಡಿಯೊಂದಕ್ಕೆ 1.50ರಿಂದ 2 ಲಕ್ಷ ರೂ. ವೆಚ್ಚ ಭರಿಸಿ ಕಾದಿರಿಸಿದ್ದಾರೆ. ಆದರೆ ಮಳೆಗಾಲಕ್ಕೂ ಮುನ್ನ ಹಸ್ತಾಂತರಿಸಬೇಕಿದ್ದ ಕೊಠಡಿಗಳು ಧೂಳು ಹಿಡಿಯುತ್ತಿವೆ. ಅವಧಿ ಪ್ರಕಾರ 2018ರ ಮೇ ಒಳಗಾಗಿ ಕಟ್ಟಡ ನಿರ್ಮಾಣ ಸಹಿತ ಹಸ್ತಾಂತರ ಪ್ರಕ್ರಿಯೆಮುಗಿದಿರಬೇಕಿತ್ತು. ಆದರೆ ವಿಳಂಬವಾಗುತ್ತಲೇ ಇದೆ.

29 ಅಂಗಡಿ ಮಳಿಗೆ ಹರಾಜು
ಆರಂಭದಲ್ಲಿ 28 ಅಂಗಡಿ ಮಳಿಗೆಗಳನ್ನು ನಿರ್ಮಿಸಿದ್ದು, ಬಳಿಕ ವಿಸ್ತರಿಸಿ ಒಟ್ಟು 29 ಮಳಿಗೆಗಳನ್ನು ಅಂತಿಮಗೊಳಿಸಲಾಗಿದೆ. ಕಳೆದೆರಡು ತಿಂಗಳ ಹಿಂದೆ ನಗರ ಪಂಚಾಯತ್‌ ಏಲಂ ಪ್ರಕ್ರಿಯೆ ಪೂರ್ಣಗೊಳಿಸಿ ವ್ಯಾಪಾರಸ್ಥರಿಗೆ ಹಂಚಿದೆ. 5 ಅಂಗಡಿಗಳನ್ನು ಹಿಂದಿದ್ದ ನಗರ ಪಂಚಾಯತ್‌ ಹಳೇ ಕಟ್ಟಡದ ಬಾಡಿಗೆದಾರರಿಗೆ ನೀಡಲಾಗಿದೆ.

ನೀತಿಸಂಹಿತೆ ಅಡ್ಡಿ

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಚುನಾವಣೆ ನೀತಿಸಂಹಿತೆಯಿಂದ ಹಸ್ತಾಂತರಕ್ಕೆ ಅಡ್ಡಿಯಾಗಿತ್ತು. ಜೂ. 15ರಿಂದ 30ರೊಳಗಾಗಿ ಕಟ್ಟಡ ಉದ್ಘಾಟನೆಗೆ ದಿನ ನಿಗದಿಪಡಿಸಲಾಗುವುದು.
– ಹರೀಶ್‌ ಪೂಂಜ ಶಾಸಕರು

ಕಾಮಗಾರಿ ಪೂರ್ಣ

ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು, ಶಾಸಕರ ಸೂಚನೆಯಂತೆ ಉದ್ಘಾಟನೆಯಂದೆ ಹಸ್ತಾಂತರಿಸುವ ಕೆಲಸವಾಗಲಿದೆ. ವಿದ್ಯುತ್‌ ಸಂಪರ್ಕ ನೀಡಲಾಗಿದ್ದು, ಆದಷ್ಟು ಬೇಗ ನಗರ ಪಂಚಾಯತ್‌ಗೆ ಹಸ್ತಾಂತರಿಸಲಾಗುವುದು. – ರಾಜೇಂದ್ರ ಕಲ್ಬಾವಿ ನಿರ್ದೇಶಕರು, ನಿರ್ಮಿತಿ ಕೇಂದ್ರ

ಕಟ್ಟಡಕ್ಕೆ ನೀರಿನ ಸಂಪರ್ಕ ವ್ಯವಸ್ಥೆ ಇನ್ನಷ್ಟೇ ಪೂರ್ಣಗೊಳ್ಳಬೇಕಾಗಿದೆ. ವಿದ್ಯುತ್‌ ಸಂಪರ್ಕ ನೀಡಲಾಗಿದ್ದರೂ ಕೆಲವು ಗೋಡೆಗಳಲ್ಲಿ ತೆರೆದ ಹಂತದಲ್ಲೇ ಇದೆ. ಈ ನಡುವೆ ನಗರ ಪಂ.ಜೂ. 15ರ ಒಳಗಾಗಿ ಹಸ್ತಾಂತರ ಮಾಡು ವಂತೆ ನಿರ್ಮಿತಿ ಕೇಂದ್ರಕ್ಕೆ ಸೂಚಿಸಿದೆ. ಆದರೆ ವ್ಯಾಪಾರಿಗಳಿಗೆ ಮಳೆಗಾಲದಲ್ಲಿ ಬಿಟ್ಟುಕೊಟ್ಟಲ್ಲಿ ಹಳೇ ಕಟ್ಟಡದಿಂದ ವಸ್ತುಗಳನ್ನು ಸ್ಥಳಾಂತರಿಸಲು ಕಷ್ಟವಾಗುತ್ತದೆ ಎಂಬ ಕೂಗು ಕೇಳಿ ಬಂದಿದೆ.

ಕಟ್ಟಡವನ್ನು ತರಾತುರಿಯಲ್ಲಿ ಕಟ್ಟಲಾಗಿದ್ದು, ಕೆಲವೆಡೆ ಟೈಲ್ಸ್ ಹಾಳಾಗುತ್ತಿದೆ. ಅಂಗಡಿ ಕೋಣೆಗೂ ಶಟರ್‌ ಅಳವಡಿಸದೇ ಇರುವುದರಿಂದ ರಾತ್ರಿ ಹೊತ್ತು ಕುಡುಕರ ಆಶ್ರಯ ತಾಣವಾಗಿದೆ. ಈ ಕುರಿತು ಅಧಿಕಾರಿಗಳು ಚಿಂತಿಸಬೇಕಾಗಿದೆ. ಈ ನಡುವೆ ಆಸ್ಪತ್ರೆ ರಸ್ತೆಗೆ ಇಂಟರ್‌ಲಾಕ್‌ ಅಳವಡಿಸುವ ಯೋಜನೆಯನ್ನೂ ನಗರ ಪಂ. ರೂಪಿಸಿದ್ದು, ಇವೆಲ್ಲ ಮಳೆಗಾಲದಲ್ಲಿ ಸಾಧ್ಯವಿಲ್ಲದಂಥ ಮಾತಾಗಿದೆ.
Advertisement

2 ಶೌಚಾಲಯ
ಅಂಗಡಿದಾರರಿಗೆ ಎರಡು ಶೌಚಾಲಯ ನಿರ್ಮಿಸಲಾಗಿದ್ದು, ಪುರುಷ-ಮಹಿಳಾ ಶೌಚಾಲಯ ಒದಗಿಸಲಾಗಿದೆ. ಇದರ ನಿರ್ವಹಣೆಯೇ ಸವಾಲಾಗಿದೆ. ಈಗಿರುವ ಹಳೇ ಮಾರುಕಟ್ಟೆ ಸ್ಥಳದಲ್ಲಿರುವ ಶೌಚಾಲಯ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯಿಂದ ಕೂಡಿದೆ. ಮಾರುಕಟ್ಟೆಗೆ ಸಾವಿರಾರು ಜನ ಬಂದು ಹೋಗುವುದರಿಂದ ಹೊಸ ಶೌಚಾಲಯದ ನಿರ್ವಹಣೆ ಸವಾಲಾಗಿದೆ.

ನೀರಿನ ವ್ಯವಸ್ಥೆ
ನಿರ್ಮಿತಿ ಕೇಂದ್ರದಿಂದ ಕಟ್ಟಡ ಒಂದೊಮ್ಮೆ ನಗರ ಪಂಚಾಯತ್‌ಗೆ ಹಸ್ತಾಂತರಿಸಿದರೆ ನೀರಿನ ವ್ಯವಸ್ಥೆ ನೀಡಲಾಗುವುದು. ಬಳಿಕ ವ್ಯಾಪಾರಿಗಳಿಗೆ ಶೀಘ್ರವೇ ಅಂಗಡಿ ಕೊಠಡಿ ಲೈಸೆನ್ಸ್‌, ಒಪ್ಪಂದ ಪತ್ರ ನೀಡಲಾಗುವುದು.
– ಮಹಾವೀರ ಆರಿಗ ನಗರ ಪಂಚಾಯತ್‌ ಎಂಜಿನಿಯರ್‌

•ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next