ಬಾಗಲಕೋಟೆ: ಯಾರೋ ಮಾಡುವ ತಪ್ಪಿಗೆ, ಇನ್ಯಾರೋ ಸಮಸ್ಯೆ ಅನುಭವಿಸಿದಂತೆ, ನಗರದ ವಾಸವಿ ಚಿತ್ರ ಮಂದಿರದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ಪ್ರಮುಖ ರಸ್ತೆಯೀಗ, ಮಾರುಕಟ್ಟೆಯಾಗಿ ಪರಿಣಮಿಸಿದೆ. ಹೀಗಾಗಿ ಸಾವಿರಾರು ಜನರು ಕಿರಿಕಿರಿ ಅನುಭವಿಸುವಂತಾಗಿದೆ.
ಏನಿದು ತೊಂದರೆ: ಹಳೆಯ ನಗರಸಭೆ ಕಚೇರಿ ಹಿಂಭಾಗ (ನೀರಿನ ಟಾಕಿ), ದುರ್ಗಾನಗರ ಏರಿಯಾದಲ್ಲಿ ಲಕ್ಷಾಂತರ ಖರ್ಚು ಮಾಡಿ, ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದೆ. ಇಲ್ಲಿ ಪ್ರತಿ ಶನಿವಾರ ತರಕಾರಿ, ಕಾಳುಕಡಿ, ಹಣ್ಣು ಹೀಗೆ ವಿವಿಧ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಾರೆ. ಬಸವೇಶ್ವರ ವೃತ್ತದಿಂದ ಮುಚಖಂಡಿ ಕ್ರಾಸ್‌ವರೆಗಿನ ಸುಮಾರು 4ರಿಂದ 5 ವಾರ್ಡ್‌ಗಳ ನಾಗರಿಕರು ವಿವಿಧ ವಸ್ತುಗಳ ಖರೀದಿಗಾಗಿ ಈ ಮಾರುಕಟ್ಟೆಗೆ ಬರುತ್ತಾರೆ. ಇದರಿಂದ ಜನರಿಗೆ ತರಕಾರಿ, ಕಾಳು-ಕಡಿ ಖರೀದಿಗೆ ಅನುಕೂಲವಾದರೆ, ಬಹುತೇಕ ಗ್ರಾಮೀಣ ಭಾಗದಿಂದ ಬರುವ ತರಕಾರಿ ವ್ಯಾಪಾರಸ್ಥರಿಗೆ ಇದೊಂದು ಉದ್ಯೋಗ ನೀಡುವ ಮಾರುಕಟ್ಟೆಯಾಗಿದೆ.
ಆದರೆ ಕಳೆದ ಎರಡು ತಿಂಗಳಿಂದ ಈ ಮಾರುಕಟ್ಟೆಯನ್ನು ಗುತ್ತಿಗೆದಾರ ಒಬ್ಬರು ಅತಿಕ್ರಮಿಸಿಕೊಂಡಿದ್ದಾರೆ. ಪಕ್ಕದಲ್ಲೇ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ, ಸ್ಲಂ ಬೋರ್ಡ್‌ನಿಂದ ಮನೆಗಳ ನಿರ್ಮಾಣ ಕಾರ್ಯ ನಡೆದಿದ್ದು, ಆ ಮನೆಗಳಿಗಾಗಿ ತೆಗೆದ ಅಡಿಪಾಯದಿಂದ ಬಂದ ನೂರಾರು ಲೋಡ್ ಮಣ್ಣು, ಮನೆ ಕಟ್ಟಡಕ್ಕೆ ಬಳಸುವ ಕಬ್ಬಿನ, ಖಡಿ, ಜೆಸಿಬಿ ವಾಹನ ಹೀಗೆ ಎಲ್ಲವನ್ನೂ ಈ ಮಾರುಕಟ್ಟೆಯಲ್ಲಿ ಹಾಕಿದ್ದು, ಇಡೀ ಮಾರುಕಟ್ಟೆ ಮಣ್ಣಿನಿಂದ ತುಂಬಿಕೊಂಡಿದೆ. ಹೀಗಾಗಿ ವ್ಯಾಪಾರಸ್ಥರು, ಈ ಪ್ರಾಂಗಣದಲ್ಲಿ ವ್ಯಾಪಾರ ಮಾಡಲು ಆಗದೇ, ವಾಸವಿ ಚಿತ್ರ ಮಂದಿರದಿಂದ ರೈಲ್ವೆ ನಿಲ್ದಾಣಕ್ಕೆ ತೆರಳುವ ಪ್ರಮುಖ ರಸ್ತೆಯಲ್ಲೇ ಕುಳಿತು ವ್ಯಾಪಾರ ಮಾಡುತ್ತಿದ್ದಾರೆ. ಇದು ಈಗ ಸಾವಿರಾರು ಜನರಿಗೆ ತೊಂದರೆ ಕೊಡುತ್ತಿದೆ.
ಆಸ್ಪತ್ರೆಗಳ ಏರಿಯಾ: ವಾಸವಿ ಚಿತ್ರ ಮಂದಿರದಿಂದ ರೈಲ್ವೆ ನಿಲ್ದಾಣದ ವರೆಗಿನ ಪ್ರಮುಖ ರಸ್ತೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಆಸ್ಪತ್ರೆಗಳಿವೆ. ಹೀಗಾಗಿ ಇದನ್ನು ಆಸ್ಪತ್ರೆಗಳ ಏರಿಯಾ ಎಂದೂ ಕರೆಯಲಾಗುತ್ತದೆ. ಅದರಲ್ಲೂ ಕೆಲವು ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಗಳಿದ್ದು, ಇಲ್ಲಿಗೆ ಆ್ಯಂಬುಲೆನ್ಸ್ ಸಹಿತ ಹಲವು ತುರ್ತು ವಾಹನಗಳು ರೋಗಿಗಳನ್ನು ಹೊತ್ತು ಬರುತ್ತವೆ. ಅಲ್ಲದೇ ಇಲ್ಲಿನ ಆಸ್ಪತ್ರೆಗಳಿಗೆ ಬಾಗಲಕೋಟೆ ಜಿಲ್ಲೆಯಷ್ಟೇ ಅಲ್ಲದೇ ಪಕ್ಕದ ರಾಯಚೂರು, ಕೊಪ್ಪಳ ಜಿಲ್ಲೆಗಳಿಂದ ರೋಗಿಗಳು ಬರುತ್ತಾರೆ. ಪ್ರತಿ ಶನಿವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಈ ಪ್ರಮುಖ ರಸ್ತೆಯಲ್ಲೇ ವ್ಯಾಪಾರ ನಡೆಯುತ್ತಿರುವುದರಿಂದ ರೋಗಿಗಳನ್ನು ಹೊತ್ತ ಆ್ಯಂಬುಲೆನ್ಸ್ ಬರಲೂ ಆಗುತ್ತಿಲ್ಲ. ಈ ಕುರಿತು ಆಸ್ಪತ್ರೆಗಳವರು, ಗುತ್ತಿಗೆದಾರನಿಗೆ ಹೇಳಿದರೂ, ಕ್ಯಾರೇ ಅನ್ನುತ್ತಿಲ್ಲ ಎಂದು ಇಲ್ಲಿನ ಹಲವು ಆಸ್ಪತ್ರೆಗಳ ಮುಖ್ಯಸ್ಥರು ಅಸಮಾಧಾನ ತೋಡಿಕೊಂಡಿದ್ದಾರೆ.
Advertisement
ಪ್ರಮುಖ ಆಸ್ಪತ್ರೆಗಳಿರುವ, ರೈಲ್ವೆ ನಿಲ್ದಾಣಕ್ಕೆ ತೆರಳುವ ಪ್ರಮುಖ ರಸ್ತೆಯಲ್ಲೇ ಜನರು ವ್ಯಾಪಾರ ಮಾಡುತ್ತಿದ್ದಾರೆ. ಹೀಗಾಗಿ ಶನಿವಾರ ಬಂತೆಂದರೆ ಸಾಕು, ಹತ್ತಾರು ಆಸ್ಪತ್ರೆಗಳು, ನೂರಾರು ನಿವಾಸಿಗರು ಇಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಹೀಗೆ ಮುಂದುವರಿದಿದ್ದು, ನಗರಸಭೆ ಅಧಿಕಾರಿಗಳು ಹಾಗೂ ಗುತ್ತಿಗೆದಾರನಿಗೆ ಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ವ್ಯಾಪಾರಸ್ಥರು, ಆಸ್ಪತ್ರೆಗಳವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Related Articles
Advertisement
ನಾಳೆ ಖಾಲಿ ಮಾಡಿಸುತ್ತೇನೆ..
ಇಲ್ಲಿನ ಜನರ ಒತ್ತಾಯದ ಮೇರೆಗೆ ಮಣ್ಣು, ಖಡಿ, ಕಬ್ಬಿನ ಎಲ್ಲವನ್ನು ಮಾರುಕಟ್ಟೆ ನಡೆಯುವ ಸ್ಥಳದಲ್ಲಿ ಹಾಕಲಾಗಿತ್ತು. ಮಣ್ಣು, ಪಾಯಾ ತೆಗೆದ ಮನೆಗಳಿಗೆ ಬರಿ ಹಾಕಲು ಬೇಕಾಗುತ್ತದೆ ಎಂಬ ಕಾರಣದಿಂದ ಅಲ್ಲಿಯೇ ಹಾಕಲಾಗಿತ್ತು. ಇದರಿಂದ ವ್ಯಾಪಾರಸ್ಥರು, ಆಸ್ಪತ್ರೆ ಹಾಗೂ ಜನರಿಗೆ ತೊಂದರೆಯಾಗುತ್ತಿದೆ ಎಂದು ಹಲವರು ಹೇಳಿದ್ದಾರೆ. ಹೀಗಾಗಿ ನಾಳೆಯ ಎಲ್ಲವೂ ಖಾಲಿ ಮಾಡಿಸಿ, ತರಕಾರಿ ಮಾರುಕಟ್ಟೆ ಖಾಲಿ ಮಾಡಿಸುತ್ತೇನೆ.•ಮಲ್ಲಿಕಾರ್ಜುನ ಶಿರೂರ, ಗುತ್ತಿಗೆದಾರ
ದುರ್ಗಾ ನಗರ ಬಳಿ ನಗರಸಭೆಯಿಂದ ತರಕಾರಿ ಮಾರುಕಟ್ಟೆ ಪ್ರಾಂಗಣ ನಿರ್ಮಿಸಿದ್ದು, ನಿತ್ಯ ಪ್ರತಿ ಶನಿವಾರ ವ್ಯಾಪಾರ-ವಹಿವಾಟು ನಡೆಯುತ್ತಿದೆ. ಪಕ್ಕದಲ್ಲಿ ಸ್ಲಂ ಬೋರ್ಡ್‌ನಿಂದ ಆಶ್ರಯ ಮನೆಗಳ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು, ಮಾರುಕಟ್ಟೆ ಜಾಗೆಯಲ್ಲಿ ಮಣ್ಣು, ಕಡಿ, ಕಬ್ಬಿನ ಸಾಮಗ್ರಿ, ಜೆಸಿಬಿ ಸಹಿತ ವಾಹನ ನಿಲ್ಲಿಸಿದ್ದರಿಂದ ವ್ಯಾಪಾರಸ್ಥರು, ರಸ್ತೆ ಮೇಲೆ ವಹಿವಾಟು ನಡೆಸಿದ್ದು, ಈ ಕುರಿತು ಗುತ್ತಿಗೆದಾರನಿಗೆ ಸೂಚನೆ ನೀಡಿ, ಸಾಮಗ್ರಿ ತೆಗೆಯಲು ಹೇಳಲಾಗಿದೆ.•ಗಣಪತಿ ಪಾಟೀಲ, ನಗರಸಭೆ ಪೌರಾಯುಕ್ತ
•ವಿಶೇಷ ವರದಿ