ಹೊರಗೆಲ್ಲಾ ಗಾಢ ಕತ್ತಲಿರುತ್ತದೆ. ಸುತ್ತಲೂ ನೀರವ ಮೌನ. ಈ ನಿಶ್ಯಬ್ದವನ್ನು ಸೀಳಿಕೊಂಡು ಕನಕಪುರ/ ಮಾಗಡಿ/ಹೊಸಕೋಟೆ/ಗೌರಿಬಿದನೂರು/ಕುಣಿಗಲ್… ಈ ಯಾವುದೋ ಪ್ರದೇಶದ ಒಂದು ಊರಿಗೆ ಲಗೇಜ್ ವ್ಯಾನ್ ಬರುತ್ತದೆ. ಮೊದಲೇ ಹೇಳಿದ್ದ ಜಾಗದಲ್ಲಿ ಡ್ರೈವರು ಲಾರಿ ನಿಲ್ಲಿಸಿ, ಕೆಳಗಿಳಿದು ಕಿವಿಯ ಸುತ್ತಲೂ ಬರುವಂತೆ ಕ್ಯಾಪ್ ಹಾಕಿಕೊಳ್ಳುತ್ತಾನೆ/ ಮಫ್ಲರ್ ಸುತ್ತಿಕೊಳ್ಳುತ್ತಾನೆ. ನಂತರ ಬೇಗ ಬೇಗ ತುಂಬಿಸ್ರಿà, ಲೇಟಾಗಿ ಹೊರಟ್ರೆ, ಮಾರ್ಕೆಟ್‌ನಲ್ಲಿ ವ್ಯಾನ್ ನಿಲ್ಲಿಸೋಕೆ ಜಾಗ ಸಿಗಲ್ಲ. ಅಷ್ಟೇ ಅಲ್ಲ, ತರಕಾರಿ ಜಾಸ್ತಿ ಸಪ್ಲೆ„ ಆಗಿಬಿಟ್ರೆ ಯಾರಿಗೂ ಒಳ್ಳೆಯ ರೇಟ್ ಕೂಡ ಸಿಗಲ್ಲ, ಅನ್ನುತ್ತಲೇ ಸಿಗರೇಟಿಗೆ ಕಡ್ಡಿ ಗೀರುತ್ತಾನೆ. ನಂತರದ ಕೆಲವೇ ನಿಮಿಷಗಳಲ್ಲಿ ಹಣ್ಣು, ತರಕಾರಿ, ಸೊಪ್ಪು, ಕಾಯಿಪಲ್ಲೆ… ಹೀಗೆ ತರಹೇವರಿಯ ವಸ್ತುಗಳನ್ನು ತುಂಬಿಕೊಂಡ ಲಗೇಜ್ ವ್ಯಾನು ಬೆಂಗಳೂರಿನ ದಾರಿ ಹಿಡಿಯುತ್ತದೆ. ಡ್ರೈವರ್‌ನ ಪಕ್ಕದಲ್ಲಿರುವ ಲಗೇಜ್ ವ್ಯಾನ್‌ನ ಹಿಂಭಾಗದಲ್ಲಿ ಆ ಹಣ್ಣು/ತರಕಾರಿಯ ಮಾಲೀಕರಾದ ರೈತರು ಕುಳಿತಿರುತ್ತಾರೆ. ಇವತ್ತು ಮಾರ್ಕೆಟ್‌ನಲ್ಲಿ ಎಷ್ಟು ರೇಟ್ ಸಿಗಬಹುದು? ಎಷ್ಟು ಲಾಭ ಬರಬಹುದು ? ಲಾಭ ಬಂದರೆ ಮೊದಲು ಸಾಲ ತೀರಿಸಬೇಕು. ಮತ್ತೆ, ಯಾವುದಾದರೂ ಹೊಸ ಬೆಳೆ ತೆಗೆಯಬೇಕು. ಅಕಸ್ಮಾತ್ ಲಾಭ ಸಿಗದೇ ಹೋದರೆ.. ಲಗೇಜ್ ವ್ಯಾನ್‌ಗೆ ಕೊಡಬೇಕಾದಷ್ಟು ಬಾಡಿಗೆಯೂ ಗಿಟ್ಟದೇ ಹೋದರೆ.. ಹೀಗೆಲ್ಲಾ ಯೋಚಿಸುತ್ತಿರುತ್ತಾರೆ. ವ್ಯಾನ್ ಡ್ರೈವರ್‌ಗೆ ಇಂಥಾ ಗೊಂದಲಗಳಿಲ್ಲ. ಬೇಗ ಬೆಂಗಳೂರು ತಲುಪಿ ವಾಪಸ್ ಬರಬೇಕು. ಸಾಧ್ಯವಾದರೆ ಇವತ್ತು ನಾಲ್ಕು ಟ್ರಿಪ್ ಆದ್ರೂ ಹೊಡೀಬೇಕು… ಹೀಗೆಲ್ಲಾ ಅವನು ಕನಸು ಕಾಣುತ್ತಾನೆ! ಒಂದೇ ದಾರಿ, ಎರಡು ಕನಸು!
Advertisement
ಪ್ರೇಂ… ಕ್ರಿಂಕ್, ಕ್ರಿಂಕ್… ಎಂದು ಹಾರ್ನ್ ಮಾಡುತ್ತಾ ವ್ಯಾನು ಮಾರ್ಕೆಟ್ ತಲುಪುವ ವೇಳೆಗೆ ಐದು ಗಂಟೆ ಆಗಿಯೇ ಬಿಡುತ್ತದೆ. ಆ ವೇಳೆಯಲ್ಲಿ ಇಡೀ ಬೆಂಗಳೂರು ಸಕ್ಕರೆ ನಿದ್ರೆಯಲ್ಲಿರುತ್ತದೆ ನಿಜ. ಆದರೆ ಮಾರ್ಕೆಟ್ಟಿನಲ್ಲಿ ಜಾತ್ರೆಯಲ್ಲಿ ಕಾಣುವಷ್ಟು ಜನ ತುಂಬಿರುತ್ತಾರೆ. ಆ ಚುಮು ಚುಮು ಬೆಳಗಿನ ಜಾವದಲ್ಲಿ ಅಲ್ಲಿ ಸಿಗೋದು ಎರಡೇ ವೆರೈಟಿಯ ಜನ. ಕೊಳ್ಳುವವರು ಮತ್ತು ಮಾರುವವರು! ಒಂದು ಕ್ವಿಂಟಾಲ್‌ಗೆ ಹೇಗೆ? ಒಂದು ಮೂಟೆಗೆ ಎಷ್ಟು? ಎಂದೇ ಮಾತು ಶುರುವಾಗುತ್ತದೆ. ಕಡೆಗೊಮ್ಮೆ ಯಾವುದೋ ಒಂದು ಮೊತ್ತಕ್ಕೆ ಇಬ್ಬರೂ ಒಪ್ಪಿಕೊಳ್ಳುತ್ತಾರೆ. ಅಲ್ಲಿಗೆ ಮಾರಾಟದ ಒಂದು ಅಧ್ಯಾಯ ಮುಗಿಯುತ್ತದೆ.
Related Articles
Advertisement
ಹೀಗೇ ಮತ್ತಷ್ಟು ಸಮಯ ಕಳೆದು ಎಂಟು ಗಂಟೆ ಆಗುತ್ತಿದ್ದಂತೆ ಮಾರ್ಕೆಟ್‌ನ ಹೋಟೆಲೊಂದರಲ್ಲಿ ತಿಂಡಿಯ ಶಾಸ್ತ್ರ ಮುಗಿಸಿದ ರೈತ ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾನೆ. ಹತ್ತು ಮೂಟೆ ತರಕಾರಿ ತಂದ್ರೂ ಜೇಬು ತುಂಬುವಷ್ಟು ದುಡ್ಡು ಸಿಗಲಿಲ್ಲ. ತುಂಬಾ ಲಾಸ್ ಆಗಿಹೋಯ್ತು! ಹೆಚ್ಚು ಕಡಿಮೆ ಇದೇ ಸಮಯಕ್ಕೆ ಅರ್ಧವಷ್ಟೇ ತುಂಬಿದ ಬ್ಯಾಗ್ ಹಿಡಿದುಕೊಂಡು ಓಡೋಡುತ್ತಲೇ ಬಂದು ಬಸ್ ಹತ್ತುವ ಶ್ರೀಸಾಮಾನ್ಯನೂ ಉದ್ಗರಿಸುತ್ತಾನೆ. 500 ರೂಪಾಯಿ ಖರ್ಚಾಯ್ತು, ಬ್ಯಾಗ್ ತುಂಬುವಷ್ಟು ತರಕಾರಿ ಸಿಗಲಿಲ್ಲ. ತುಂಬಾ ಲಾಸ್ ಆಗಿಹೋಯ್ತು!!!
ನಂಬಿ: ಈ ಜೀವನ ನಾಟಕ ಮಾರ್ಕೆಟ್ ಎಂಬ ಜಾತ್ರೆ ವರ್ಷಪೂರಾ ನಡೆಯುತ್ತಲೇ ಇರುತ್ತದೆ!
ಫೋಟೋ: ಹರ್ಷವರ್ಧನ ಸುಳ್ಯ