Advertisement

ಉತ್ತರದಲ್ಲಿ ಮುಗಿಲು ಮುಟ್ಟಿದ ಅಬ್ಬರ

10:32 PM Apr 20, 2019 | Lakshmi GovindaRaju |

ಏ.23ರಂದು ನಡೆಯುವ ಎರಡನೇ ಹಂತದ ಚುನಾವಣೆಗೆ ಉತ್ತರ ಕರ್ನಾಟಕ ಭಾಗ ಸನ್ನದ್ಧವಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷ ಹಾಗೂ ಬಿಜೆಪಿ ನಾಯಕರ ಅಬ್ಬರದ ಪ್ರಚಾರ ಮುಗಿಲು ಮುಟ್ಟಿದೆ. ಭಾನುವಾರ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ಕೊನೆಯ ದಿನ ಚುನಾವಣಾ ರಣಕಣದಲ್ಲಿ ಯಾರು, ಏನೆಂದರು ಎಂಬ ಝಲಕ್‌ ಇಲ್ಲಿದೆ.

Advertisement

ಪತನ ಆಗೋದು ಮೈತ್ರಿ ಸರ್ಕಾರವಲ್ಲ ಮೋದಿ ಸರ್ಕಾರ
ದಾವಣಗೆರೆ/ಬೆಳಗಾವಿ: “ಬಹುಶಃ ಮೇ 23ರ ನಂತರ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಪತನ ಆಗಲಿದೆ. ಆ ದೃಷ್ಟಿಯಿಂದ ಸರ್ಕಾರ ಬೀಳಲಿದೆ ಎಂಬುದಾಗಿ ಬಿಜೆಪಿಯವರು ಹೇಳಿರಬಹುದು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
* 23ರ ನಂತರ ನಾನೇ ಮುಖ್ಯಮಂತ್ರಿ ಆಗುತ್ತೇನೆ ಅಂತ ಬಿ.ಎಸ್‌.ಯಡಿಯೂರಪ್ಪ ಹೇಳಿಕೊಳ್ಳುತ್ತಿದ್ದಾರೆ. ಮೈತ್ರಿ ಸರ್ಕಾರ ರಚನೆಯಾದಾಗಿನಿಂದಲೂ ಆ ರೀತಿ ಹೇಳಿಕೊಳ್ಳುತ್ತಿದ್ದಾರೆ. 2 ದಿನ ಮುಖ್ಯಮಂತ್ರಿಯಾದ ಮೇಲೆ ಬಹುಮತ ಸಾಬೀತುಪಡಿಸಲು ಆಗದೇ ಫೇಲ್‌ ಆದ ಯಡಿಯೂರಪ್ಪನಿಗೆ ಮಾನ, ಮರ್ಯಾದೆ ಇಲ್ಲ.

* ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಟೈಂ ಬಾಂಬ್‌ ಫಿಕ್ಸ್‌ ಮಾಡಿದ್ದಾರೆ ಎಂಬುದಾಗಿ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಸಿ.ಟಿ.ರವಿ ಅಲ್ಲ ಬೂಟಿ ರವಿ. ಕೆಲವರ ಬಗ್ಗೆ ನಾನು ಮಾತನಾಡುವುದಿಲ್ಲ. ಮಾತನಾಡದೇ ಇರುವುದೇ ಒಳ್ಳೆಯದು. ರಾಜ್ಯದಲ್ಲಿ ಬಿಜೆಪಿ ಸಿಂಗಲ್‌ ಡಿಜಿಟ್‌ ದಾಟೋದಿಲ್ಲ.

* ಗೋಕಾಕ ಶಾಸಕ ರಮೇಶ ಜಾರಕಿಹೊಳಿ ನಮ್ಮ ಪರವಾಗಿಯೇ ಇದ್ದಾರೆ.

Advertisement

* ಬಿಜೆಪಿ ಕಡೆ ಬೆರಳು ಮಾಡಿದರೆ ಕೈ ಕತ್ತರಿಸುವುದಾಗಿ ಕೇಂದ್ರ ಸಚಿವ ಮನೋಜ್‌ ಹೇಳುತ್ತಾರೆ. ಇದರಿಂದ ಬಿಜೆಪಿಯವರು ಮನುಷ್ಯತ್ವ ಇಲ್ಲದವರು ಎಂಬುದು ಗೊತ್ತಾಗುತ್ತದೆ. ಹೊಡಿ, ಬಡಿ, ಕೊಲೆ ಮಾಡುವುದು ಬಿಟ್ಟರೆ ಬಿಜೆಪಿಗೆ ಏನೂ ಗೊತ್ತಿಲ್ಲ. ಮಾನವೀಯತೆ ಇಲ್ಲದವರು, ಯಾರಿಗೆ ಮಾನವೀಯತೆ ಇಲ್ಲ ಅವರು ರಾಕ್ಷಸಿ ಗುಣದವರು.

* ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಏನೂ ಗೊತ್ತಾಗುವುದಿಲ್ಲ. ಏಳು ಕೆ.ಜಿ. ಅಕ್ಕಿ ಕೊಡುವವರಿಗೆ ಹತ್ತು ಕೆ.ಜಿ. ಅಕ್ಕಿ ಕೊಡಕ್ಕಾಗಲ್ವಾ? ಪೆದ್ದು ಪೆದ್ದಾಗಿ ಮಾತಾಡುವ ಶೋಭಾಗೆ ಬುದ್ಧಿ ಇಲ್ಲ, ಕೆ.ಎಸ್‌. ಈಶ್ವರಪ್ಪ ಪೆದ್ದ.

ಕಾಂಗ್ರೆಸ್‌ ಹೀನಾಯ ಸ್ಥಿತಿ ತಲುಪಿದೆ: ಎಸ್‌. ಎಂ. ಕೃಷ್ಣ
ತೀರ್ಥಹಳ್ಳಿಯಲ್ಲಿ ನಡೆದ ಬಿಜೆಪಿ ಬಹಿರಂಗ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಸ್‌.ಎಂ. ಕೃಷ್ಣ ಹೇಳಿದ್ದು

* ದೇಶದಲ್ಲಿಂದು ಕಾಂಗ್ರೆಸ್‌ ಹೀನಾಯ ಸ್ಥಿತಿಗೆ ಬಂದಿದೆ. ಯಾರಿಗೂ ಬೇಡವಾದ ಪಕ್ಷವಾಗಿ ಕಾಂಗ್ರೆಸ್‌ ಪರಿವರ್ತನೆಯಾಗಿದ್ದು, ಕಾಂಗ್ರೆಸ್‌ನವರ ಉದ್ಧಟತನದ ಮನೋಭಾವದಿಂದ ಮಹಾಘಟಬಂಧನ್‌ ಸಹ ಅಧೋಗತಿಗೆ ತಲುಪಿದೆ.

* ದೇಶದ ಚುಕ್ಕಾಣಿ ಹಿಡಿಯಲು ಮಹಾಘಟಬಂಧನ್‌ ಹೆಸರಿನ ನಾಯಕರು ಗೊಂದಲದಲ್ಲಿದ್ದಾರೆ. ಬೆಂಗಳೂರಿನ ವಿಧಾನಸೌಧದ ಮುಂದೆ ವೇದಿಕೆಯಲ್ಲಿ ಎಲ್ಲ ಸೇರಿ ಕೈಯೆತ್ತಿದ್ದೇ ಕೊನೆಯಾಯಿತು. ಈಗ ಮಹಾ ಹೋಗಿ ಬರೀ ಘಟಬಂಧನ್‌ ಮಾತ್ರ ಉಳಿದಿದೆ.

* ರಾಹುಲ್‌ ಗಾಂಧಿಗೆ ಅನುಭವವೂ ಇಲ್ಲ, ಜೊತೆಗೆ ಅರ್ಹತೆಯೂ ಇಲ್ಲದಂತಾಗಿದೆ. ಅನುಭವ, ಪ್ರಬುದ್ಧತೆ ಶೂನ್ಯತೆಯ ಕಾಮನ್‌ಸೆನ್ಸ್‌ ಇಲ್ಲದ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಈ ದೇಶದ ಪ್ರಧಾನಿಯಾಗುವರೇ?

* ರಾಜ್ಯದಲ್ಲಿ ಜೆಡಿಎಸ್‌ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸುವ ಕೆಲಸ ನಾವು ಮಾಡಬೇಕಾಗಿದೆ. ಕುಟುಂಬ ರಾಜಕಾರಣ ದೇಶದ ಅನಾರೋಗ್ಯಕರ ಬೆಳವಣಿಗೆ. ಮೋದಿಗೆ ಎಂದೂ ಕುಟುಂಬದ ವ್ಯಾಮೋಹವಿಲ್ಲ. ಆತ ಪಾಪದ ಮನುಷ್ಯ. ಮತ್ತೆ ಮೋದಿ ಪ್ರಧಾನಿಯಾಗಬೇಕು.

ನಾಳೆನೇ ಮುಖ್ಯಮಂತ್ರಿ ಆಗ್ತಿನಿ ಅಂತ ನಾನು ಹೇಳಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅಂತ ಹೇಳಿರೋದು. ನಾನೇನು ಸನ್ಯಾಸಿ ಅಲ್ಲ. ಮತ್ತೇನಾದರೂ ಮುಖ್ಯಮಂತ್ರಿಯಾದಲ್ಲಿ 7ರಿಂದ 10 ಕೆಜಿ ಅಕ್ಕಿ ಕೊಡ್ತೀನಿ ಎಂದು ಹೇಳಿದ್ದೇನೆ.
-ಸಿದ್ದರಾಮಯ್ಯ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next