Advertisement

ಉಪ ಚುನಾವಣೆ: ಅಖಾಡದಲ್ಲಿ ಮುಗಿಲು ಮುಟ್ಟಿದ ಅಬ್ಬರ 

12:09 PM Apr 01, 2017 | Team Udayavani |

ಮೈಸೂರು: ನಂಜನಗೂಡು ಉಪ ಚುನಾವಣೆಯ ಪ್ರಚಾರದ  ಕಾವು ಏರತೊಡಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದರು.

Advertisement

ಈಗಾಗಲೇ ಮೈಸೂರಿನಲ್ಲಿ ಠಿಕಾಣಿ ಹೂಡಿರುವ ಸಿದ್ದರಾಮಯ್ಯ, ಶುಕ್ರವಾರ ಬೆಳಗ್ಗೆ ನಂಜನಗೂಡಿನ ಎಂ.ಜಿ.ರಸ್ತೆಯಲ್ಲಿ ತೆರೆಯಲಾಗಿರುವ ಕಾಂಗ್ರೆಸ್‌ ಚುನಾವಣಾ ಪ್ರಚಾರ ಕಚೇರಿಗೆ ಭೇಟಿ ನೀಡಿ, ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು. ಅಲ್ಲಿಂದ ಗೋಳೂರು ಗ್ರಾಮಕ್ಕೆ ತೆರಳಿ, ಗ್ರಾಮದೇವತೆಗೆ ಪೂಜೆ ಸಲ್ಲಿಸಿ, ಮತಪ್ರಚಾರ ನಡೆಸಿದರು. ಬಳಿಕ, ಮಹದೇವನಗರ, ವೀರೇದೇವನಪುರದಲ್ಲಿ ಮತಯಾಚನೆ ನಡೆಸಿ, ಚಿನ್ನದಗುಡಿ ಹುಂಡಿಗೆ ಬಂದಾಗ ಹಿಂದಿನಿಂದ ಯಡಿಯೂರಪ್ಪ, ಶ್ರೀನಿವಾಸಪ್ರಸಾದ್‌ ಆಗಮಿಸಿದರು. ಸಿಎಂ ಜತೆಗೆ ನೂರಾರು ವಾಹನಗಳು ಬಂದಿದ್ದರಿಂದ ವಾಹನ ದಟ್ಟಣೆ ಉಂಟಾಯಿತು. ಹೀಗಾಗಿ, ಸಿದ್ದರಾಮಯ್ಯ ಅಲ್ಲಿಂದ ತೆರಳಿದ ಬಳಿಕ, ಯಡಿಯೂರಪ್ಪ ಗ್ರಾಮದಲ್ಲಿ ಮತಯಾಚನೆ ಮಾಡಿದರು.

ಅಲ್ಲಿಂದ ಬದನವಾಳು ಗ್ರಾಮಕ್ಕೆ ಬಂದಾಗ ಹೆಡತಲೆ ಗೇಟ್‌ ಬಳಿ ಬಿಜೆಪಿ ಬಾವುಟ ಹಿಡಿದು ನಿಂತಿದ್ದ ಹತ್ತಾರು ಯುವಕರು, ದಲಿತ ವಿರೋಧಿ ಸಿದ್ದರಾಮಯ್ಯಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಬಳಿಕ, ಸಿದ್ದು ಅವರು ದೊಡ್ಡ ಕವಲಂದೆಗೆ ತೆರಳಿ, ಅಭ್ಯರ್ಥಿ ಪರ ಮತಯಾಚಿಸಿದರು.

ಯಾರಿಗೂ ಬೆಂಬಲ ನೀಡಲ್ಲ
ಚಿತ್ರದುರ್ಗ:
ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಯಾವ ಅಭ್ಯರ್ಥಿಗೂ ಬೆಂಬಲ ನೀಡದೆ ತಟಸ್ಥವಾಗಿರಲು ನಿರ್ಧರಿಸಲಾಗಿದೆ ಎಂದು ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಒಂದು ವರ್ಷದ ಅವಧಿಧಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸ ಬಾರದು ಎಂಬ ಉದ್ದೇಶ ಒಂದು ಕಡೆಯಾದರೆ, ಪಕ್ಷ ಆರ್ಥಿಕವಾಗಿ ಅಷ್ಟೊಂದು ಶಕ್ತವಾಗಿಲ್ಲ. ಅಲ್ಲದೆ ಕಚೇರಿ ನಿರ್ಮಾಣ ಸೇರಿದಂತೆ ಮತ್ತಿತರ ಕಾರಣಗಳು ಇದ್ದುದರಿಂದ ಉಪಚುನಾವಣೆಯಿಂದ ದೂರ ಉಳಿಯಲಾಗಿದೆ ಎಂದು ಸ್ಪಷ್ಟಪಡಿಸಿದರು.

Advertisement

ಶಕ್ತಿಕೇಂದ್ರ ಭಣಭಣ
ಬೆಂಗಳೂರು:
ಉಪ ಚುನಾವಣೆ ಪ್ರಚಾರದ ಅಖಾಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಇಡೀ ಸಚಿವ ಸಂಪುಟ ಇಳಿದಿರುವುದರಿಂದ ಇತ್ತ ಶಕ್ತಿಕೇಂದ್ರ ವಿಧಾನಸೌಧ ಬಿಕೋ ಎನ್ನುತ್ತಿದೆ. ಅಧಿವೇಶನ ಅಂತ್ಯಗೊಂಡು, ಯುಗಾದಿ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಸಹಿತ ರಾಜ್ಯದ ಎಲ್ಲ ಸಚಿವರು ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಲಾಖಾ ಕಾರ್ಯಗಳನ್ನು ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ವಹಿಸಿ ಉಪ ಚುನಾವಣೆಯತ್ತ ಮುಖ ಮಾಡಿರುವ ಸಚಿವರು, ಏಪ್ರಿಲ್‌ 7ರವರೆಗೂ ರಾಜಧಾನಿಯತ್ತ ಬರುವುದು ಅನುಮಾನ ಎಂದೇ ಹೇಳಲಾಗುತ್ತಿದೆ.

ಜೆಡಿಎಸ್‌ ಬಂಡಾಯ ಶಾಸಕರಿಂದ ಪ್ರಚಾರ
ಬೆಂಗಳೂರು
: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಏಳು ಶಾಸಕರು ಕಾಂಗ್ರೆಸ್‌ ಪರ ಪ್ರಚಾರ ಮಾಡಲಿದ್ದಾರೆ. ಜಮೀರ್‌ ಅಹಮದ್‌ ಹಾಗೂ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಏಪ್ರಿಲ್‌ 4 ರಿಂದ 7 ರವರೆಗೆ ಎರಡೂ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿರುವ ಏಳು ಶಾಸಕರು, ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಪ್ರಮುಖವಾಗಿ ಎರಡೂ ಕ್ಷೇತ್ರಗಳಲ್ಲಿರುವ ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆಯಲು ಜಮೀರ್‌ ಅಹಮದ್‌ ಅವರು ಪ್ರಚಾರ ನಡೆಸಲಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next