Advertisement

ಜಾನಪದ ಕಲಾವಿದರ ಅಭಿವೃದ್ಧಿಗೆ ಮೀಸಲಾತಿ ರೂಪಿಸಿ

04:18 PM Jul 10, 2019 | Naveen |

ಮರಿಯಮ್ಮನಹಳ್ಳಿ: ಜಾನಪದ ಕಲಾವಿದರ ಅಭಿವೃದ್ಧಿಗೆ ವಿಶೇಷ ಮೀಸಲಾತಿ ರೂಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಹೇಳಿದರು.

Advertisement

ಪಟ್ಟಣದ ದುರ್ಗದಾಸ್‌ ಕಲಾಮಂದಿರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯಿಂದ ನಡೆದ ವೇಷಗಾರ ದಿ.ಮೋತಿ ಸುಂಕಪ್ಪ ಅವರ ಜನ್ಮಶತಾಬ್ಧಿ ಹಾಗೂ ತಾಲೂಕು ಜಾನಪದ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉ.ಕ ಹಾಗೂ ಹೈ.ಕ ಪ್ರದೇಶದಲ್ಲಿ ಜಾನಪದ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದು, ಅಂತಹ ಕಲಾವಿದರ ಬದುಕು ಇನ್ನೂ ಸುಧಾರಿಸಿಲ್ಲ. ರಸ್ತೆ ಬದಿ, ಮರದ ಬುಡದಲ್ಲಿ, ಶಾಲಾವರಣಗಳಲ್ಲಿ ಅವರ ನಿತ್ಯದ ಜೀವನ ನಡೆಯುತ್ತಿದ್ದು, ಅವರಿಗೆ ಶಾಶ್ವತ ನೆಲೆ ಬೇಕಾಗಿದೆ. ಬದಲಾದ ಜನ ಜೀವನ ವ್ಯವಸ್ಥೆಯಲ್ಲಿ ಅಲೆಮಾರಿ ಪರಂಪರೆ ಹೋಗಲಾಡಿಸಬೇಕಿದೆ. ಅಂತಹ ಕಲಾವಿದರನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದರೆ ಮಾಸಾಶನ, ಗಣತಿ ಹಾಗೂ ಮೀಸಲಾತಿಯನ್ನು ಸರ್ಕಾರ ನೀಡಬೇಕು. ಜತೆಗೆ ಸ್ಥಳೀಯ ಆಡಳಿತಗಳ ಸಹಕಾರ ಅಗತ್ಯ ಎಂದರು.

ಮೊದಲು ಜಾನಪದ ಅಕಾಡೆಮಿಯಿಂದ ವರ್ಷಕ್ಕೆ ಒಂದು ಸಾವಿರ ಜಾನಪದ ಕಲಾವಿದರಿಗೆ ಮಾತ್ರ ಮಾಸಾಶನ ನೀಡಲಾಗುತ್ತಿತ್ತು. ಆದರೆ ಈಗ ನಮ್ಮ ಶ್ರಮ ಹಾಗೂ ಕಲಾವಿದರ ಹೋರಾಟದಿಂದ ಐದು ಸಾವಿರ ಕಲಾವಿದರನ್ನು ತಲುಪಿದೆ. ಇಷ್ಟೆಲ್ಲಾ ಅಕಾಡೆಮಿಯಿಂದ ಅವಕಾಶ ಮಾಡಿದ್ದರೂ ಪ್ರಸಕ್ತ ವರ್ಷ ಕೇವಲ 3600 ಮಾಸಾಶನದ ಅರ್ಜಿಗಳು ಸಲ್ಲಿಕೆಯಾಗಿವೆ. ಅಲ್ಲದೇ ಜಾನಪದ ಕಲಾವಿದರು ಸಹ ಸಮಾಜದಲ್ಲಿ ಜೀವಿಸುತ್ತಿದ್ದು, ಸಮಾಜದ ಜತೆ ಜತೆಗೆ ಬಾಳಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಮಕ್ಕಳ ಕೋಲಾಟ, ಕೀಲುಕುದುರೆ ಗೊಂಬೆ ಕುಣಿತ, ಗೋಗುತಿ ನೃತ್ಯ, ಹಲಗೆ ವಾದನ, ಸಿಂಧೋಳ ಕುಣಿತ, ಹಗಲು ವೇಷ, ಗೊಂದಲಿಗರ ಮೇಳ, ತಾಸವಾದನ, ಗೊರವರ ಕುಣಿತ, ವೀರಗಾಸೆ ನೃತ್ಯ, ಪೋಟಿ ವೇಷ ಹಾಗೂ ಮಕ್ಕಳ ಭೂತ ಕೋಲು ಜಾನಪದ ಕಲೆಗಳು ಕಲಾಮೇಳದಲ್ಲಿ ಪಾಲ್ಗೊಂಡು ನೋಡುಗರನ್ನು ಆಕರ್ಷಿಸಿದವು. ಜಿಪಂ ಸದಸ್ಯೆ ರೇಖಾ ಪೂಜಾರ ಪ್ರಕಾಶ್‌ ಕಾರ್ಯಕ್ರಮ ಉದ್ಘಾಟಿಸಿದರು. ಪಪಂ ಅಧ್ಯಕ್ಷ ವಿಷ್ಣುನಾಯ್ಕ, ಜಾನಪದ ಅಕಾಡೆಮಿ ರಿಜಿಸ್ಟರ್‌ ಸಿದ್ರಾಮ ಸಿಂಧೆ, ಲಲಿತ ಕಲಾರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ, ಹಿರಿಯ ಕಲಾವಿದೆ ಡಾ.ಕೆ.ನಾಗರತ್ನಮ್ಮ, ಜಾನಪದ ಚಿಂತಕ ಇಸ್ಮಾಯಿಲ್ ಯಲಿಗಾರ, ಜಾನಪದ ವಿವಿ ಸಹಾಯಕ ಪ್ರಾಧ್ಯಾಪಕ ಮಲ್ಲಿಕಾರ್ಜುನ ಬಿ.ಮಾನ್ಪಡೆ, ಮೋತಿ ರಾಮಣ್ಣ ಇದ್ದರು. ಬಾಣದ ಶ್ರೀಧರ ನಿರೂಪಿಸಿದರು. ಮಂಜಮ್ಮ ಜೋಗ್ತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next