Advertisement

ವಿದ್ಯುತ್‌ ವಿತರಣಾ ಕೇಂದ್ರ ನನೆಗುದಿಗೆ

11:29 AM Aug 22, 2019 | Naveen |

•ಎಂ. ಸೋಮೇಶ ಉಪ್ಪಾರ
ಮರಿಯಮ್ಮನಹಳ್ಳಿ: ಕಡಿಮೆ ವೋಲೆrೕಜ್‌ ವಿದ್ಯುತ್‌, ಪದೇ ಪದೇ ದಿನವಿಡೀ ವಿದ್ಯುತ್‌ ಕಡಿತ, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್‌ ಆಧಾರಿತ ಯಾವುದೇ ಕೆಲಸಗಳು ಸಂಪೂರ್ಣಗೊಳ್ಳುವುದೇ ಇಲ್ಲ|

Advertisement

ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಅಲ್ಲಲ್ಲಿ ಚಿಕ್ಕ ಪ್ರಮಾಣದ ವಿದ್ಯುತ್‌ ವಿತರಣಾ ಕೇಂದ್ರಗಳ ಅಗತ್ಯವಿದೆ. ಇಂಥ ಅಗತ್ಯದ ಬೇಡಿಕೆಯೊಂದು ಚಿಲಕಹಟ್ಟಿ ಭಾಗದಲ್ಲಿ ಸುಮಾರು ದಶಕಗಳಿಂದಲೂ ಹಾಗೇ ನನೆಗುದಿಗೆ ಬಿದ್ದಿದೆ.

ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಗ್ರಾಮದಲ್ಲಿ 66/11 ಕೆವಿ ವಿದ್ಯುತ್‌ ವಿತರಣಾ ಕೇಂದ್ರ ಸ್ಥಾಪನೆಗಾಗಿ ಈ ಭಾಗದ ರೈತರು ಬಹಳ ವರ್ಷಗಳಿಂದ ಬೇಡಿಕೆ ಇಡುತ್ತಲೇ ಇದ್ದಾರೆ. ಆದರೆ ಈ ಬೇಡಿಕೆ ಈಡೇರಿಸುವ ಕಾರ್ಯಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂಬುದು ಈ ಭಾಗದ ರೈತರ ಆರೋಪ.

ಹಾರುವನಹಳ್ಳಿ ಗ್ರಾಮ ಸರ್ವೇ ನಂ. 128, 129ರಲ್ಲಿ 1.55,0.45 ಎಕರೆ ಒಟ್ಟು ವಿಸ್ತೀರ್ಣ 2 ಎಕರೆ ಜಮೀನನ್ನು ಖರೀದಿಸಲು ಕೆಪಿಟಿಸಿಎಲ್ ಮುಂದಾಗಿದೆ. ಚಿಲಕನಹಟ್ಟಿ ಭಾಗದ ರೈತರ ಹಲವು ದಶಕಗಳ ಹಿಂದಿನ ಬೇಡಿಕೆಯೊಂದು ಈಡೇರಿಕೆಗೆ ಈಗ ಒಂದಿಷ್ಟು ರೆಕ್ಕೆಪುಕ್ಕಗಳು ಬಂದಿವೆ.

ಇತ್ತೀಚೆಗೆ ಬಳ್ಳಾರಿ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಹೊಸಪೇಟೆಯ ಶಿರಸ್ತೇದಾರರು, ಉಪನೋಂದಣಾಧಿಕಾರಿಗಳು ಹೊಸಪೇಟೆ, ಕೆಪಿಟಿಸಿಎಲ್ನ ಕಾರ್ಯನಿರ್ವಾಹಕ ಅಭಿಯಂತರರು, ಜಿಪಂನ ಉಪಕಾರ್ಯದರ್ಶಿಗಳು ಪಾಲ್ಗೊಂಡಿದ್ದರು. ವಿದ್ಯುತ್‌ ವಿತರಣಾ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಭೂಮಿ ಖರೀದಿಗೆ ಸಂಬಂಧಿಸಿದಂತೆ ಚರ್ಚೆ ಮಾಡಿ ಭೂಮಿ ಬೆಲೆ ನಿಗದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಎಕರೆಯೊಂದಕ್ಕೆ 8.80 ಲಕ್ಷ ರೂ. ನಿಗದಿ ಮಾಡಲಾಗಿದ್ದು ನಿಯಮಾನುಸಾರ ಭೂಮಾಲೀಕತ್ವ ಪಡೆದ ಕೆಪಿಟಿಸಿಎಲ್ ಬಳ್ಳಾರಿ ಇವರು ಚಿಲಕನಹಟ್ಟಿ ಗ್ರಾಪಂಗೆ ಪಾವತಿಸಲು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Advertisement

ರೈತರಿಗೆ ಹೆಚ್ಚು ಅನುಕೂಲ: ಚಿಲಕನಹಟ್ಟಿ ಗ್ರಾಮದಲ್ಲಿ 66/11 ಕೆವಿ ವಿದ್ಯುತ್‌ ವಿತರಣಾ ಕೇಂದ್ರ ಸ್ಥಾಪನೆ ಮಾಡುವುದರಿಂದ ರೈತರಿಗೆ ಅಗತ್ಯವಾದ ವಿದ್ಯುತ್‌ ನ ಸಮಸ್ಯೆ ಬಗೆಹರಿಯಲಿದೆ. ಕಡಿಮೆ ವೋಲೆrೕಜ್‌ನಿಂದ ಗ್ರಾಮೀಣ ಭಾಗದ ಜನರು ಹೈರಾಣಾಗುವುದ ತಪ್ಪುತ್ತದೆ. ಕೃಷಿ ಹಾಗೂ ಕೃಷಿ ಆಧಾರಿತ ಕೈಗಾರಿಕಾ ಚಟುವಟಿಕೆಗೂ ಸಮರ್ಪಕ ವಿದ್ಯುತ್‌ ದೊರೆಯಲಿದೆ. ರೈತರು ಹೊಲದಲ್ಲಿನ ಪಂಪ್‌ಸೆಟ್‌ಗಳ ಮೂಲಕ ಸುಗಮವಾಗಿ ನೀರು ಹರಿಸಲು ಸಾಧ್ಯವಾಗುತ್ತದೆ. ಚಿಲಕನಹಟ್ಟಿ ಗ್ರಾಪಂ ವ್ಯಾಪ್ತಿಯ ಹಾರುವನಹಳ್ಳಿ, ತಾಳೆಬಸಾಪುರ ತಾಂಡಾ, ತಿಮ್ಮಲಾಪುರ, ಪೋತಲಕಟ್ಟೆ, ಜಿ. ನಾಗಲಾಪುರ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೂ ಸಮರ್ಪಕ ವಿದ್ಯುತ್‌ ಸರಬರಾಜು ಮಾಡಲು ಸಾಧ್ಯವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆದಷ್ಟು ಬೇಗ 66/11 ಕೆ.ವಿ. ವಿದ್ಯುತ್‌ ವಿತರಣಾ ಕೇಂದ್ರ ಸ್ಥಾಪನೆಯಾಗಲಿ ಎಂದು ಈ ಭಾಗದ ರೈತರು ಕಾತರದಿಂದ ಕಾದು ನೋಡುತ್ತಿದ್ದಾರೆ. ಸರ್ಕಾರ ಕೂಡಲೇ ಕಾರ್ಯೋನ್ಮುಖವಾಗಲಿ ಎಂದು ಜನ ಆಶಿಸುತ್ತಿದ್ದಾರೆ.

ಚಿಲಕನಹಟ್ಟಿ ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 66/11 ಕೆ.ವಿ.ವಿದ್ಯುತ್‌ ವಿತರಣಾ ಕೇಂದ್ರಕ್ಕೆ ಭೂಮಿ ಖರೀದಿಗೆ ಸಂಬಂಧಿಸಿದಂತೆ ಬೆಲೆ ನಿಗದಿಪಡಿಸಲಾಗಿದ್ದು ನಂತರದ ದಿನಗಳಲ್ಲಿ ಯೋಜನೆ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಆರಂಭವಾಗಲಿದೆ. ಸುಮಾರು ಎರಡು ವರ್ಷಗಳ ಒಳಗೆ ಯೋಜನೆ ಪೂರ್ಣಗೊಳ್ಳಲಿದೆ.
ಕಾರ್ಯನಿರ್ವಾಹಕ ಅಭಿಯಂತರರು
 ಕೆಪಿಟಿಸಿಎಲ್

ನಮ್ಮ ಭಾಗಕ್ಕೆ ಅಗತ್ಯವಿದ್ದ ವಿದ್ಯುತ್‌ ವಿತರಣಾ ಉಪಕೇಂದ್ರ ಸ್ಥಾಪನೆ ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ. ನಮ್ಮ ಊರಿನ ನಮ್ಮೂರು ನಮ್ಮ ತೋಟ ಯೋಜನೆಗಾಗಿ ತೆಗೆದಿರಿಸಿದ್ದ ಸುಮಾರು 6 ಎಕರೆ ಜಮೀನಿನಲ್ಲಿ 2 ಎಕರೆ ಜಮೀನು ಇದಕ್ಕಾಗಿ ಕೊಡಲು ನಿರ್ಧರಿಸಲಾಗಿದೆ. ಈ ವಿದ್ಯುತ್‌ ವಿತರಣ ಕೇಂದ್ರ ಆರಂಭವಾದರೆ ನಮ್ಮ ಭಾಗದ ವಿದ್ಯುತ್‌ ವಿತರಣೆಯಲ್ಲಿನ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ.
ಬಿ.ಎಸ್‌. ರಾಜಪ್ಪ,
ತಾಪಂ ಸದಸ್ಯರು ಹೊಸಪೇಟೆ, ಮಾಜಿ ಅಧ್ಯಕ್ಷರು ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next