ಮರಿಯಮ್ಮನಹಳ್ಳಿ: ಮಕ್ಕಳಿಗೆ ಚಟುವಟಿಕೆ ಮೂಲಕ ಶಿಕ್ಷಣ ನೀಡಿದರೆ ಕಲಿಕೆ ಸುಲಭವಾಗುತ್ತದೆ ಎಂದು ಹೊಸಪೇಟೆ ಕ್ಷೇತ್ರ ಶಿಕ್ಷಣಾ ಧಿಕಾರಿ ಎಲ್.ಡಿ. ಜೋಷಿ ಹೇಳಿದರು. ಅವರು ಹೊಸಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕ್ಷೇತ್ರ ಸಮನ್ವಯ ಶಿಕ್ಷಣಾ ಧಿಕಾರಿಗಳು, ಭಾರತ ಜ್ಞಾನವಿಜ್ಞಾನ ಸಮಿತಿ ಬೆಂಗಳೂರು ಅಶ್ರಯದಲ್ಲಿ ಪಟ್ಟಣದ ಸ.ಮಾ.ಹಿ.ಪ್ರಾ.ಶಾಲಾ ಆವರಣದಲ್ಲಿ ಜರುಗಿದ ಮರಿಯಮ್ಮನಹಳ್ಳಿ ಕ್ಲಸ್ಟರ್‌ಮಟ್ಟದ ಮಕ್ಕಳ ವಿಜ್ಞಾನ ಹಬ್ಬ-2019 ಉದ್ಘಾಟಿಸಿ ಮಾತನಾಡಿದರು.
ಕಲಿಕೆ ಪರಿಣಾಮಕಾರಿಯಾಗಿರಲು ಪ್ರಾತ್ಯಕ್ಷಿಕೆ, ಚಟುವಟಿಕೆ ಸೃಜನಶೀಲವಾಗಿರಬೇಕು. ಬಾಲ್ಯದಿಂದಲೇ ಮಕ್ಕಳಿಗೆ ವಿಜ್ಞಾನ-ಗಣಿತದಂಥ ಪಠ್ಯಗಳನ್ನು ಚಟುವಟಿಕೆ ಮೂಲಕ ಕಲಿಸಬೇಕು. ಮಕ್ಕಳು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಮಕ್ಕಳಿಗೆ ವಿಜ್ಞಾನದ ಕಲಿಕೆ ಸಂತೋಷದಾಯಕ ಮಾಡುವುದು. ಮಕ್ಕಳಿಗೆ ಕಲಿಕೆಯಲ್ಲಿ ಕುತೂಹಲ ಮೂಡಿಸುವುದು ಸಮುದಾಯ ಪಾಲ್ಗೊಳ್ಳುವಿಕೆ. ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದು, ಪರಸ್ಪರ ವಿಚಾರ ವಿನಿಮಯ ಮತ್ತು ಬೇರೆಯವರ ವಿಚಾರಗಳ ಬಗ್ಗೆ ಗೌರವ ಮೂಡಿಸುವುದು ಈ ಹಬ್ಬದ ಉದ್ದೇಶವಾಗಿದೆ ಎಂದರು.
ಎರಡು ದಿನಗಳು ನಡೆಯುವ ಈ ಹಬ್ಬದಲ್ಲಿ ವಿವಿಧ ಚಟುವಟಿಕೆಗಳನ್ನು ಮಕ್ಕಳಿಂದಲೇ ಮಾಡಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಬಿ. ವಿಷ್ಣುನಾಯ್ಕ, ಆದಿಮನಿ ಹುಸೇನ್ ಭಾಷಾ, ಭಾರತ ಜ್ಞಾನವಿಜ್ಞಾನ ಸಮಿತಿಯ ಸಂಚಾಲಕರಾದ ಸೌಭಾಗ್ಯಲಕ್ಷ್ಮೀ, ಟಿ.ಎಂ.ಉಷಾರಾಣಿ ಮಾತನಾಡಿದರು.
ಮೆರವಣಿಗೆ: ಮಕ್ಕಳ ವಿಜ್ಞಾನ ಹಬ್ಬದ ಅಂಗವಾಗಿ ಮಕ್ಕಳ ವಿವಿಧ ಕಲಾತಂಡದಿಂದ ಕೋಲಾಟ, ಲಂಬಾಣಿ ನೃತ್ಯ, ಛದ್ಮವೇಷ, ಕುದುರೆಕುಣಿತ ಲೇಜಿಂ, ಪೂರ್ಣಕುಂಭ ಮೇಳಗಳೊಂದಿಗೆ ಮೆರವಣಿಗೆ ಪಟ್ಟಣ ಪಂಚಾಯಿತಿಯಿಂದ ಆರಂಭವಾಗಿ ಪಟ್ಟಣದ ಮುಖ್ಯರಸ್ತೆ ಮೂಲಕ ಸಿ.ಆರ್.ಸಿ. ಕೇಂದ್ರ ಶಾಲಾ ಆವರಣಕ್ಕೆ ಸೇರಿತು.
ಕ್ಷೇತ್ರ ಶಿಕ್ಷಣಾ ಧಿಕಾರಿಗಳು, ಕ್ಷೇತ್ರಸಮನ್ವಯಾಧಿಕಾರಿಗಳು, ಪಟ್ಟಣಪಂಚಾಯಿತಿ ಸದಸ್ಯರು, ಎಸ್‌ಡಿಎಂಸಿ ಪದಾಧಿಕಾರಿಗಳು, ಕ್ಲಸ್ಟರ್‌ನ ಎಲ್ಲ ಶಾಲೆಯ ಮುಖ್ಯ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು, ಸಮೂಹ ಸಂಪನ್ಮೂಲ ವ್ಯಕ್ತಿಗಳು, ಬಿಜಿವಿಎಸ್ ನೋಡಲ್ ಅಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನಂತರ ಮೂರು ಕೊಠಡಿಗಳಲ್ಲಿ ತಲಾ 50 ವಿದ್ಯಾರ್ಥಿಗಳಂತೆ ಹಂಚಿಕೆ ಮಾಡಿ ಮಕ್ಕಳಿಗೆ ಚಟುವಟಿಕೆ ಮಾಡಿಸಲಾಯಿತು. ಜೀವಜಾಲ, ಸುರಳಿಹಾವು, 3ಡಿ ಕನ್ನಡಕ, ಕುದುರೆ ಓಟ, ಗಿರಿಗಿಟ್ಲೆ ಮುಂತಾದ ಚಟುವಟಿಕೆಗಳನ್ನು ಮಾಡಿಸಲಾಯಿತು.