ಮರಿಯಮ್ಮನಹಳ್ಳಿ: ರಂಗ ಶಿಬಿರಗಳಿಂದ ಮಕ್ಕಳು ಸಂಕುಚಿತ ಮನೋಭಾವದಿಂದ ಹೊರ ಬರಲು ಸಾಧ್ಯ ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಡಿ.ರಾಘವೇಂದ್ರಶೆಟ್ಟಿ ಹೇಳಿದರು.
ಪಟ್ಟಣದ ಅನ್ನದಾನೇಶ್ವರ ಶಾಖಾಮಠದ ಆವರಣದಲ್ಲಿ ರಂಗಚೌಕಿ ಕಲಾ ಟ್ರಸ್ಟ್ ವತಿಯಿಂದ ಆರಂಭವಾದ ಅಜ್ಜಿಮನೆ ಬೇಸಿಗೆ ರಂಗ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮೆದುಳಿಗೆ ಅಪಾರ ಶಕ್ತಿಯಿಂದ ಅದಕ್ಕೊಂದಿಷ್ಟು ಸಣ್ಣ ಸಣ್ಣ ಪ್ರಚೋದನೆಗಳ ಅಗತ್ಯವಿದೆ. ಅಂತಹ ಪ್ರಚೋದನೆಗಳು ಇಂತಹ ಶಿಬಿರಗಳಲ್ಲಿ ದೊರೆಯುತ್ತವೆ. ಕೇವಲ ನಲವತ್ತು ದಿನಗಳ ಗರ್ಭಧರಿಸಿದಾಗ ಬ್ರೂಣದಲ್ಲಿ ಜೀವಾಂಕುರವಾಗಿರುತ್ತದೆ. ಗರ್ಭದಲ್ಲಿರುವಾಗ ಮಗುವಿನ ವಯಸ್ಸು ಮೈನಸ್ ಒಂಬತ್ತು ತಿಂಗಳು. ಕೇವಲ ಒಂದು ಅಣುವಿನಲ್ಲಿ ದೇವರು ಎಲ್ಲಾ ಅಂಗಾಂಶಗಳನ್ನು ನೀಡಿರುತ್ತಾನೆ. ನಾವು ಇವುಗಳ ಸಮರ್ಪಕ ಬಳಕೆಯಿಂದ ವಿಜ್ಞಾನಿ, ವೈದ್ಯ, ಇಂಜಿನಿಯರ್, ಶಿಕ್ಷಕ ಸಮಾಜ ಸೇವಕ, ರಾಜಕಾರಣಿ ಆಗಲು ಸಾಧ್ಯ. ನಿಮ್ಮ ಮನಸ್ಸು ಹಾಗೂ ಬುದ್ಧಿಯ ವಿಕಸನಕ್ಕೆ ಇಂತಹ ಶಿಬಿರಗಳು ಕಾರಣವಾಗುತ್ತವೆ ಎಂದರು.
ಉಜ್ಜಿನಿ ಶಾಲೆಯ ಮುಖ್ಯಗುರು ಮಂಜುನಾಥ ಮಾತನಾಡಿ, ಶಿಬಿರಗಳಲ್ಲಿ ಮಕ್ಕಳಿಗೆ ವಾಕ್ಚಾತುರ್ಯ, ಅಭಿನಯ ಸಾಮರ್ಥ್ಯ, ಜೀವನ ಶಿಸ್ತುಗಳ ಜತೆಗೆ ಲಲಿತ ಕಲೆಗಳ ಬಗ್ಗೆ ಆಸಕ್ತಿ ಮೂಡಿಸುವುದರ ಜತೆಗೆ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಶಿಬಿರಗಳು ಪರೋಕ್ಷವಾಗಿ ದುಡಿಯುತ್ತವೆ ಎಂದರು. ಮಾತಾ ಮಂಜಮ್ಮ , ಉಪನ್ಯಾಸಕ ಎಂ.ಸೋಮೇಶ್ ಉಪ್ಪಾರ ಶಿಬಿರವನ್ನುದ್ದೇಶಿಸಿ ಮಾತನಾಡಿದರು.
ವೃತ್ತಿ ರಂಗಭೂಮಿ ಕಲಾವಿದೆ ಡಾ. ಕೆ.ನಾಗರತ್ನಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಂಗಚೌಕಿ ಕಲಾ ಟ್ರಸ್ಟ್ ನ ಸರದಾರ ಬಾರಿಗಿಡದ ಮಾತನಾಡಿದರು. ಪುಷ್ಪಾ ನಿರೂಪಿಸಿದರು. ಈ ಸಂದರ್ಭದಲ್ಲಿ ಶಿಬಿರಕ್ಕೆ ಡಿ.ರಾಘವೇಂದ್ರಶೆಟ್ಟಿ ಹಾಗೂ ಮುಖ್ಯಗುರು ಮಂಜಪ್ಪ ಅವರು ಧನಸಹಾಯ ನೀಡಿ ಸಹಕರಿಸಿದರು. ಶಿಬಿರದ ಮಕ್ಕಳಿಗೆ ಅತಿಥಿಗಳು ಪ್ರಸಾದನ ಮಾಡುವ ಮೂಲಕ ಉದ್ಘಾಟಿಸಲಾಯಿತು. ಅನ್ನದಾನೇಶ್ವರ ಶಾಖಾ ಮಠದ ರಾಜಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕಿಚಿಡಿ ಕೊಟ್ರೇಶ್, ಶಿವಕುಮಾರ, ಹನುಮಂತಪ್ಪ ಯು. ನೇತ್ರಾ ಮತ್ತಿತರರು ಇದ್ದರು.