ಮರಿಯಮ್ಮನಹಳ್ಳಿ: ಅಲ್ಲಲ್ಲಿ ನಿಂತು ಮಲಿನಗೊಂಡ ನೀರು. ಆವರಣದ ತುಂಬೆಲ್ಲಾ ಬೆಳೆದ ಹುಲ್ಲು, ಕೊಳಚೆ ನೀರು, ಗಬ್ಬು ವಾಸನೆ. ಈ ಪರಿಸರವನ್ನೊಮ್ಮೆ ನೋಡಿದರೆ ನೀರನ್ನು ಬಳಸಲು ಮನಸೇ ಬಾರದಂಥ ಸ್ಥಿತಿ ಇಲ್ಲಿ ಕಣ್ಣಿಗೆ ರಾಚುತ್ತದೆ.
ಹೌದು. ಇದು ಹನುಮನಹಳ್ಳಿ ಗ್ರಾಮದ ಹೊರವಲಯದಲ್ಲಿ ನಿರ್ಮಿಸಲಾಗಿರುವ ಕುಡಿಯುವ ನೀರು ಶುದ್ಧೀಕರಣ ಘಟಕದ ಚಿತ್ರಣ. ಈ ಶುದ್ಧೀಕರಣ ಘಟಕದ ಸರಿಯಾದ ನಿರ್ವಹಣೆ ಕಾಣದೆ ಇಡೀ ಘಟಕವು ಕೊಳಚೆ ಪ್ರದೇಶದಂತೆ ಕಾಣುತ್ತದೆ. ಇಂತಹ ಶುದ್ಧೀಕರಣ ಘಟಕದ ಕಟ್ಟಡಕ್ಕೆ ಜಿಲ್ಲಾಧಿಕಾರಿಗಳು ಭೇಟಿ ಕೊಡುತ್ತಿದ್ದಾರೆಂಬ ಕಾರಣಕ್ಕೆ ಈಗ ಸುಣ್ಣಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ.
ಇದರ ನಿರ್ವಹಣೆ ಕೆಲಸವನ್ನು ಹಾವೇರಿ ಮೂಲದ ಗುತ್ತಿಗೆದಾರ ಆದಿಮನಿ ಹುನಮಂತ ನಿರ್ವಹಿಸುತ್ತಿದ್ದು ಶುದ್ಧೀಕರಣ ಘಟಕದ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಲ್ಲಿ ಸಂಪೂರ್ಣವಾಗಿ ಅಸಡ್ಡೆ ತೋರಿಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಹಳೇಕಾಲದ ಮೋಟರುಗಳು: ಶುದ್ಧೀಕರಣ ಘಟಕ ಆರಂಭವಾಗಿ ಸುಮಾರು ಹದಿನೈದು ವರ್ಷಗಳಾದರೂ ಇಲ್ಲಿನ ಮೋಟರುಗಳನ್ನು ನವೀಕರಿಸುವ ಕೆಲಸ ಇದುವರೆಗೂ ಆಗಿಲ್ಲ. ಸಾರ್ವಜನಿಕರು ಕುಡಿಯಲು ಬಳಸುವ ನೀರಿನ ಶುದ್ಧೀಕರಣ ಘಟಕವೇ ಎಲ್ಲೆಂದರಲ್ಲಿ ಕಸ, ಕೊಳೆ ತುಂಬಿ ವಾಕರಿಕೆ ಭರಿಸುತ್ತಿದೆ. ಇಬ್ಬರು ಸಿಬ್ಬಂದಿ ಇದ್ದರೂ ಸ್ವಚ್ಛತೆ ಕಾಣದೇ ಇರುವುದು ದುಃಖಕರ ಸಂಗತಿಯಾಗಿದೆ. ಘಟಕದೊಳಗಿನ ನೀರಿನ ಪೈಪುಗಳ ಓಬಿರಾಯನ ಕಾಲದ ಪೈಪುಗಳಂತೆ ಅಲ್ಲಲ್ಲಿ ಜಂಗು ತಿಂದು ತುಕ್ಕು ಹಿಡಿದಿವೆ. ಅವುಗಳ ಬದಲಾವಣೆಗೆ ಅಧಿಕಾರಿಗಳು ಮುಂದಾಗದೇ ಇರುವುದು ಈ ಭಾಗದ ದುರ್ದೈವವೇ ಸರಿ. ಘಕಟದ ಹೊರಗೂ ಒಳಗೂ ಕೊಳಚೆಯೇ ತುಂಬಿದೆ. ಹಂದಿಗಳ ವಾಸಕ್ಕೆ ಯೋಗ್ಯ ಪರಿಸರ ಈ ಘಟಕದಲ್ಲಿದೆ.
ಪಾವಗಡಕ್ಕೆ ನೀರು: ತುಂಗಭದ್ರಾ ಡ್ಯಾಂ ಹಿನ್ನೀರನ್ನು ನೂರಾರು ಕಿಲೋಮೀಟರ್ ದೂರವಿರುವ ಪಾವಗಡಕ್ಕೆ ಮರಿಯಮ್ಮನಹಳ್ಳಿ ಪಕ್ಕದಿಂದಲೇ ಕೊಂಡೊಯ್ಯುವ ಯೋಜನೆಯೊಂದು ಜಾರಿಗೆ ಬರುತ್ತಿದೆ. ಆದರೆ 10 ಕಿಲೋಮೀಟರ್ ಹತ್ತಿರವಿರುವ ಮರಿಯಮ್ಮನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಿಗೆ, ಕೆರೆಗಳಿಗೆ ನೀರು ಒದಗಿಸುವಲ್ಲಿ ನಮ್ಮ ಜನಪ್ರತಿನಿಧಿಗಳು ಸೋತಿರುವುದು ನಿಜಕ್ಕೂ ನಾಚಿಕಗೇಡಿನ ಸಂಗತಿ.