Advertisement

ಸ್ಥಳೀಯ ವಾಹನಗಳಿಗೆ ಶುಲ್ಕ ವಿನಾಯಿತಿ ನೀಡಿ

01:10 PM Mar 12, 2020 | Team Udayavani |

ಮರಿಯಮ್ಮನಹಳ್ಳಿ: ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ತಿಮ್ಮಲಾಪುರ ಬಳಿಯಲ್ಲಿನ ಟೋಲ್‌ ಪ್ಲಾಜಾದಲ್ಲಿ ಸ್ಥಳೀಯರ ವಾಹನಗಳಿಗೆ ಶುಲ್ಕ ವಿನಾಯಿತಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ) ಬಣದಿಂದ ಟೋಲ್‌ ಪ್ಲಾಜಾದ ಕಚೇರಿ ಮುಂದೆ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿತ್ತು.

Advertisement

ಧರಣಿಯಲ್ಲಿ ಪಾಲ್ಗೊಂಡಿದ್ದ ಹೊಸಪೇಟೆ ತಾಲೂಕು ಘಟಕದ ಅಧ್ಯಕ್ಷ ತಿಮ್ಮಲಾಪುರದ ಎಂ.ಪ್ರಕಾಶ್‌ ಮಾತನಾಡಿ, ರಾಷ್ಟ್ರೀಯ
ಹೆದ್ದಾರಿ 50ರಲ್ಲಿ ಈಗ್ಗೆ ಒಂದು ತಿಂಗಳಿನಿಂದ ತಿಮ್ಮಲಾಪುರ ಬಳಿ ಟೊಲ್‌ ಪ್ಲಾಜಾ ಕಾರ್ಯವನ್ನು ನಿರ್ವಹಿಸುತ್ತಿದ್ದು, ಇದರಿಂದ ಸ್ಥಳೀಯರಿಗೆ ಬಹಳ ತೊಂದರೆಯಾಗಿದ್ದು, ಈ ಟೋಲ್‌ ಪ್ಲಾಜಾವನ್ನು ಚಲಕನಹಟ್ಟಿ ಮತ್ತು ತಿಮ್ಮಲಾಪುರ ಗ್ರಾಮದ ಮಧ್ಯದಲ್ಲಿ ಸ್ಥಾಪಿತವಾಗಿದ್ದು, ತಿಮ್ಮಲಾಪುರ, ಪೋಲಕಟ್ಟೆ ಸೇರಿದಂತೆ ಇನ್ನೂ ಹಲವು ಗ್ರಾಮಗಳಿಗೆ ತೆರಳುವ ಸಾರ್ವಜನಿಕರು ಟೋಲ್‌ ಪ್ಲಾಜಾವನ್ನು ದಾಟಿ ಹೋಗುವ ಅನಿವಾರ್ಯತೆ ನಿರ್ಮಾಣವಾಗಿದೆ.

ಈ ಗ್ರಾಮಗಳ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನ ಚಿಲಕನಹಟ್ಟಿಗೆ ಹೋಗಬೇಕಾದರೆ ಟೋಲ್‌ ಪ್ಲಾಜಾದ ರೂ. 65 ಶುಲ್ಕವನ್ನು ಮತ್ತು ವಾಪಾಸಾಗಲು 65 ರೂಪಾಯಿಗಳ ಟೋಲ್‌ ಶುಲ್ಕವನ್ನು ಕಟ್ಟಿ ಹೋಗಲು ಮತ್ತು ಈ ಭಾಗದಲ್ಲಿ ರೈತರೇ ಇರುವ ಗ್ರಾಮಗಳಾಗಿದ್ದು ರೈತರು ರಸಗೊಬ್ಬರ ತರುವಾಗ, ಅನಾರೋಗ್ಯ ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಕರೆದೊಯ್ಯುವಾಗ ಇನ್ನಿತರೆ ವಸ್ತುಗಳನ್ನು ಸಾಗಾಟಕ್ಕಾಗಿ ಹೋಬಳಿ ಕೇಂದ್ರವಾದ ಮರಿಯಮ್ಮನಹಳ್ಳಿಗೆ ಹೋಗಬೇಕಾದರೂ ಟೋಲ್‌ ಕಟ್ಟಬೇಕಾದ ಪರಿಸ್ಥಿತಿ ಉಂಟಾಗಿ ಈ ಭಾಗದ ರೈತರಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಇದರಿಂದ ಮುಕ್ತಿ ಪಡೆಯಲು ಟೋಲ್‌ ಪ್ಲಾಜಾದ ಸುತ್ತಮುತ್ತಲ 20 ಕಿ.ಮೀ. ಗ್ರಾಮಗಳ ವ್ಯಾಪ್ತಿಯಲ್ಲಿನ ವಾಹನಗಳಿಗೆ ಟೋಲ್‌ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡುವಂತೆ ಮತ್ತು ಸ್ಥಳೀಯರಿಗೆ ಸರ್ವಿಸ್‌ ರಸ್ತೆಯನ್ನು ನಿರ್ಮಿಸುವಂತೆ ಒತ್ತಾಯಿಸಿದರು.

ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್‌. ರಾಜಪ್ಪ ಮಾತನಾಡಿ, ಟೋಲ್‌ ಪ್ಲಾಜಾದ ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರಿಗೆ ಟೋಲ್‌ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿಯನ್ನು ಎಲ್ಲ ಟೋಲ್‌ ಪ್ಲಾಜಾಗಳಲ್ಲಿ ನೀಡುತ್ತಿದ್ದು,  ಟೋಲ್‌ನಲ್ಲಿ ಮಾತ್ರ ಈ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸ ಮತ್ತು ಇಲ್ಲಿನ ಎಲ್ಲ ಸ್ಥಳೀಯ ಸಂಪನ್ಮೂಲವನ್ನು ಬಳಸಿಕೊಂಡು ಸ್ಥಳೀಯರಿಗೇ ಶುಲ್ಕ ವಿಧಿಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ.

ಈ ಕೂಡಲೇ ಟೋಲ್‌ ಶುಲ್ಕದಿಂದ ಸಂಪೂರ್ಣ ವಿನಾಯತಿ ನೀಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಂಡುವಂತೆ ಅವರು ಆಗ್ರಹಿಸಿದರು. ಧರಣಿ ನಿರತ ಸ್ಥಳಕ್ಕೆ ಟೋಲ್‌ ಪ್ಲಾಜಾದ ಮುಖ್ಯಸ್ಥ ಎಸ್‌.ಕೆ. ಘೋಷ್‌ ಆಗಮಿಸಿ ಮಾತನಾಡಿ, ಕಾನೂನು ಪ್ರಕಾರವೇ ಟೋಲ್‌ ಶುಲ್ಕವನ್ನು ಪಡೆಯಲಾಗುತ್ತಿದೆ.

Advertisement

ಶುಲ್ಕದ ಸಂಪೂರ್ಣ ವಿನಾಯಿತಿ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳುವ ಅಧಿಕಾರ ನನಗಿಲ್ಲ. ನನಗಿಂತ ಹಿರಿಯ ಅಧಿಕಾರಿಗಳಿಗೆ ಈ ಅಧಿಕಾರವಿದೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲೇ ಮುಂದಿನ 17ನೇ ದಿನಾಂಕದಂದು ಟೋಲ್‌ ಪ್ಲಾಜಾದ ಕಚೇರಿ ಸ್ಥಳದಲ್ಲಿ ಸಾರ್ವಜನಿಕರೊಂದಿಗೆ ಸಭೆ ನಡೆಸಿ ತೀರ್ಮಾನಕ್ಕೆ ಬರಲಾಗುವುದೆಂದು ತಿಳಿಸಿದರು. ಅವರ ಈ ಉತ್ತರಕ್ಕೆ ತೃಪ್ತರಾಗದ ಧರಣಿನಿರತರು ಸಭೆ ಆಗುವವರೆಗೂ ಸ್ಥಳೀಯರ ವಾಹನಗಳಿಗೆ ಟೋಲ್‌ ಪ್ಲಾಜಾದಲ್ಲಿ ಶುಲ್ಕವನ್ನು ಪಡೆಯದೇ ವಾಹನಗಳನ್ನು ಟೋಲ್‌ನಲ್ಲಿ ಬಿಡಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪಿಎಸ್‌ಐ ಶಿವಕುಮಾರ್‌ ಅವರು ಇನ್ನು ಆರು ದಿನಗಳಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಹಮ್ಮಿಕೊಳ್ಳಲಾಗಿದ್ದು ಅಲ್ಲಿಯವರೆಗೆ ಶಾಂತರಾಗಿರುವಂತೆ ಧರಣಿ ನಿರತರಲ್ಲಿ ಮನವಿ ಮಾಡಿದರು.

ಅವರ ಮನವಿಗೆ ಸ್ಪಂದಿಸಿ ಸಾಂಕೇತಿಕ ಧರಣಿಯನ್ನು ಸ್ಥಗಿತಗೊಳಿಸಿದರು. ಈ ಸಾಂಕೇತಿಕ ಧರಣಿಗೆ ಕರ್ನಾಟಕ ರಕ್ಷಣಾ ವೇದಿಕೆ ಸಹಕಾರವನ್ನು ನೀಡಿತ್ತು. ಈ ಧರಣಿಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪರಶುರಾಮ, ಜಿಲ್ಲಾಧ್ಯಕ್ಷ ದೇವರಮನಿ ಮಹೇಶ್‌, ಕ.ರ.ವೇ.ಯ ಭರತ್‌, ತಾಪಂ ಮಾಜಿ ಅಧ್ಯಕ್ಷ ಓಬಜ್ಜ, ಚಿಲಕನಹಟ್ಟಿ ಗ್ರಾಮದ ಮುಖಂಡರಾದ ವೀರೇಶ್ವರ ಸ್ವಾಮಿ, ಬಣಕಾರ ಬಸವರಾಜ, ಶೇಖಪ್ಪ, ಪೋತಲಕಟ್ಟೆಯ ದೇವೇಂದ್ರಪ್ಪ, ಎಂ. ಜಂಬಣ್ಣ, ಸೋಮಣ್ಣ, ನಾಗರಾಜ, ಷಣ್ಮುಖಪ್ಪ, ಪಪಂ ಸದಸ್ಯ ವಸ್ತ್ರದ ಆನಂದ ಸೇರಿದಂತೆ ನೂರಕ್ಕೂ ಹೆಚ್ಚು ಸಾರ್ವಜನಿಕರು ಸಾಂಕೇತಿಕ ಧರಣಿಯಲ್ಲಿ ಪಾಲ್ಗೊಂಡಿದ್ದರು. ಟೋಲ್‌ ಪ್ಲಾಜಾದ ಚೌಡಪ್ಪ, ಪ್ರಸಾದ್‌ ಅವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next